
ಬೆಂಗಳೂರು, ಡಿಸೆಂಬರ್ 02: ಪರಪ್ಪನ ಅಗ್ರಹಾರದಲ್ಲಿ (Parappana Agrahara) ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಬಂದ್ ಮಾಡಿದ್ದಕ್ಕೆ ಕೈದಿಗಳು ಪ್ರತಿಭಟನೆಗಿಳಿದಿದ್ದಾರೆ. ಕಳೆದ ಮೂರು ದಿನಗಳಿಂದ ಊಟ ತಿಂಡಿ ಬಿಟ್ಟು ಧರಣಿ ಮಾಡುತ್ತಿರುವ ಬಂಧಿತರು ನಿಷೇಧಿತ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಜೈಲು ಕೈಪಿಡಿ ಪ್ರಕಾರ ಈ ವಸ್ತುಗಳ ಮಾರಾಟ ಕಾನೂನುಬಾಹಿರವಾಗಿರುವ ಕಾರಣ ಜೈಲು ಸಿಬ್ಬಂದಿಯೇ ಇದುವರೆಗೆ ಅವುಗಳನ್ನು ಒಳಕ್ಕೆ ತರಲಾಗುತ್ತಿದ್ದುದಾಗಿ ಆರೋಪಿಸಲಾಗಿತ್ತು. ಇತ್ತೀಚಿನ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದ್ದರಿಂದ ಆಡಳಿತ ಮತ್ತಷ್ಟು ಜಾಗೃತಗೊಂಡಿದೆ. ಈ ಹಿನ್ನೆಲೆ ಬೀಡಿ–ಸಿಗರೇಟ್ ಮಾರಾಟ ನಿಲ್ಲಿಸಿದ್ದಕ್ಕೆ ಅಸಮಾಧಾನಗೊಂಡ ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ ಕೈದಿಗಳಿಂದ ಧರಣಿ ಮತ್ತು ಉಪವಾಸ ಪ್ರತಿಭಟನೆ ನಡೆಸುತ್ತಿದ್ದು, ಮಾರಾಟಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಜೈಲು ನಿಯಮಾವಳಿಯ ಪ್ರಕಾರವೇ ಕ್ರಮ ಜರುಗಿಸಲಾಗುವುದೆಂದು ಸ್ಪಷ್ಟಪಡಿಸಿದ್ದಾರೆ.
ಜೈಲಿನಲ್ಲಿನ ಅಕ್ರಮ ಚಟುವಟಿಕೆಗಳ ವಿಡಿಯೋ ಹೊರಬಂದ ನಂತರ, ಸರ್ಕಾರ ಜೈಲು ಆಡಳಿತದಲ್ಲಿ ಬದಲಾವಣೆ ಮಾಡಿ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಿತ್ತು. ಅವರ ನಿರ್ದೇಶನದಂತೆ ಜೈಲಿನಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್ ಹಾಗೂ ಇತರ ನಿಷೇಧಿತ ವಸ್ತುಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿತ್ತು.
ಇದನ್ನೂ ಓದಿ ಪರಪ್ಪನ ಅಗ್ರಹಾರ ಜೈಲು ಜಾಲಾಡಿದ ಹೊಸ ಅಧೀಕ್ಷಕ, 33 ಮೊಬೈಲ್, 22 ಸಿಮ್ ಸೇರಿದಂತೆ ಇತರೆ ವಸ್ತುಗಳು ಪತ್ತೆ
ಕೈದಿಗಳು ಜೈಲಿನೊಳಗೆ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಭೆ ನಡೆಸಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದರ ಬಳಿಕ ಸರ್ಕಾರ ರಾಜ್ಯದ ಎಲ್ಲಾ ಕಾರಾಗೃಹಗಳ ಸುಧಾರಣೆಗಾಗಿ ಉನ್ನತ ಮಟ್ಟದ ಹೈಪವರ್ ಸಮಿತಿಯನ್ನು ರಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರ ನೇತೃತ್ವದ ಸಮಿತಿ, ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿ ಅಲ್ಲಿ ಜಾರಿಯಲ್ಲಿರುವ ಆಡಳಿತ, ತಾಂತ್ರಿಕ ವ್ಯವಸ್ಥೆ, ಬಂಧಿಗಳ ಪುನರ್ವಸತಿ ಕಾರ್ಯಕ್ರಮ ಸೇರಿದಂತೆ ಅನೇಕ ಸುಧಾರಣಾತ್ಮಕ ಕ್ರಮಗಳನ್ನು ಅಧ್ಯಯನ ಮಾಡಿದೆ. ನಂತರ ಮಂಗಳೂರು ಹಾಗೂ ಕಲಬುರಗಿ ಜೈಲುಗಳಿಗೂ ಭೇಟಿ ನೀಡಿ ಸಿಬ್ಬಂದಿ ಕೊರತೆ, ಜೈಲು ಸಾಮರ್ಥ್ಯಕ್ಕೆ ಹೋಲಿಸಿದರೆ ಬಂಧಿಗಳ ಹೆಚ್ಚುವರಿ ಸಂಖ್ಯೆ, ಸುರಕ್ಷತಾ ವ್ಯವಸ್ಥೆ ಮತ್ತು ಆಧುನಿಕ ತಂತ್ರಜ್ಞಾನ ಬಳಕೆಯಂತಹ ಅಂಶಗಳನ್ನು ಪರಿಶೀಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.