
ಬೆಂಗಳೂರು, ನವೆಂಬರ್ 28: ಪರಪ್ಪನ ಅಗ್ರಹಾರದಲ್ಲಿ (Parappana Agrahara) ಕೈದಿಗಳ ಐಷಾರಾಮಿ ಜೀವನದ ವೀಡಿಯೋಗಳು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಈ ಪ್ರಕರಣದಲ್ಲಿ ಉನ್ನತಮಟ್ಟದ ಸಮಿತಿ ತನಿಖೆ ನಡೆಸುತ್ತಿರುವುದರ ಜೊತೆಗೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಸರ್ಕಾರ ಯೋಚಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಸೆಂಟರ್ ಜೈಲು ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ ಐಪಿಎಸ್ ಅಧಿಕಾರಿಗಳ ನೇಮಕಕ್ಕೆ ನಿರ್ಧರಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸರಣಿ ಕೊಲೆ ಪಾತಕಿ ಉಮೇಶ್ ರೆಡ್ಡಿ, ಐಎಸ್ ಸಂಘಟನೆಯ ಉಗ್ರ ಜುಹಾದ್, ದುಬೈನಿಂದ ಚಿನ್ನ ಕಳ್ಳಸಾಗಣೆ ಆರೋಪಿ ತರುಣ್ ರಾಜ್ ಜೈಲಿನ ಬ್ಯಾರಕ್‌ನಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಿರುವ, ಟಿ.ವಿ ವೀಕ್ಷಿಸುತ್ತಿರುವ ವಿಡಿಯೊಗಳು ಇತ್ತೀಚೆಗಷ್ಟೇ ಹರಿದಾಡಿದ್ದವು. ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣದ ಬಗ್ಗೆ ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದ ಉನ್ನತಮಟ್ಟದ ಸಮಿತಿ ತನಿಖೆ ನಡೆಸುತ್ತಿದೆ. ಈ ನಡುವೆ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳನ್ನು ತಡೆಯಲು ಮುಂದಾಗಿರುವ ಸರ್ಕಾರ, ಇತಿಹಾಸದಲ್ಲೇ ಮೊದಲ ಬಾರಿಗೆ ಸೆಂಟರ್ ಜೈಲು ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ ಐಪಿಎಸ್ ಅಧಿಕಾರಿಗಳನ್ನೇ ನೇಮಕ ಮಾಡಲು ನಿರ್ಧರಿಸಿದೆ. ಇದರ ಜೊತೆ ಇನ್ನು ಹತ್ತು ಹಲವು ಸುಧಾರಣಾ ಕ್ರಮಗಳ ಬಗ್ಗೆ ಗೃಹ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ ಐಪಿಎಸ್ ಅಧಿಕಾರಿ ನಿಯೋಜನೆಯ ಜೊತೆಗೆ ದಿನಕ್ಕೊಮ್ಮೆ ರೌಂಡ್ಸ್ ಕೈಗೊಳ್ಳುವ ಬದಲು ಇನ್ನು ಮುಂದೆ ಪ್ರತಿದಿನ ಮೂರು ಬಾರಿ ಜೈಲಿನ ಸಿಬ್ಬಂದಿ ಪರಿಶೀಲನೆ ನಡಸಬೇಕು. ಪ್ರತಿ ಬ್ಯಾರಕ್‌ಗಳಲ್ಲೂ ಹೆಚ್ಚೆಚ್ಚು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಪರಿಣಾಮಕಾರಿಯಾಗಿ ಜಾಮರ್ ವ್ಯವಸ್ಥೆ ಅಳವಡಿಸಲಾಗಿದೆ. ಬ್ಯಾರಕ್ ಸುತ್ತ-ಮುತ್ತ ಸಿಗ್ನಲ್ ಮುಕ್ತ ವಲಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೈದಿಗಳ ಮೇಲೆ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಲಿದ್ದು, ಪುನಃ ಅಕ್ರಮ ನಡೆದರೆ ಹಿರಿಯ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದಾರೆ.
ಇದನ್ನೂ ಓದಿ ಪರಪ್ಪನ ಅಗ್ರಹಾರ ಜೈಲಲ್ಲ, ಮದ್ಯದ ಫ್ಯಾಕ್ಟರಿ!: ತನಿಖೆ ವೇಳೆ ಶಾಕಿಂಗ್ ಮಾಹಿತಿ ಬಹಿರಂಗ
ಜೈಲಿನೊಳಗಿನ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮರಾ ಕಡ್ಡಾಯವಾಗಿದೆ. ಅಲ್ಲದೆ ವಿಚಾರಣಾಧೀನ ಮತ್ತು ಸಜಾಬಂಧಿ ಕೈದಿಗಳು ಒಂದೇ ಬ್ಯಾರಕ್‌ನಲ್ಲಿರುವಂತಿಲ್ಲ. ಪುನಃ ಅಕ್ರಮ ನಡೆದರೆ ಹಿರಿಯ ಅಧಿಕಾರಿಗಳೇ ನೇರ ಹೊಣೆ ಅಥವಾ ಎರಡು ಬಾರಿ ಹಿರಿಯ ಅಧಿಕಾರಿಗಳು ಕಾರಾಗೃಹ ಭೇಟಿ ಕೈಗೊಳ್ಳಬೇಕು. ಪ್ರಧಾನ ಕಚೇರಿಗೆ ಸಿಸಿಟಿವಿ ದೃಶ್ಯ ಮತ್ತು ಮಾಹಿತಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.