ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: FIR ದಾಖಲು, ಎನ್ಐಎ ಎಂಟ್ರಿ
ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲು ಪ್ರಕರಣಗಳು ದಾಖಲಾಗಿವೆ. ಮೂರು ಎನ್ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಎನ್ಐಎ ಕೂಡ ಮಧ್ಯೆ ಪ್ರವೇಶಿಸಿದೆ.

ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಿನ (parappana agrahara jail) ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಬದುಕಿನ ಒಂದೊಂದೇ ಕರಾಳತೆ ಬಯಲಾಗುತ್ತಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಅಲರ್ಟ್ ಆಗಿದೆ. ಇಬ್ಬರು ಜೈಲಧಿಕಾರಿಗಳ ತಲೆದಂಡವಾಗಿದೆ. ಇದೀಗ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂರು ಎನ್ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಾಗಿದೆ. ಜೊತೆಗೆ ಎನ್ಐಎ ಎಂಟ್ರಿ ಆಗಿದೆ.
ವಿಕೃತ ಕಾಮಿ, ನಟೋರಿಯಸ್ ರೌಡಿಶೀಟರ್ಗಳು, ಅಷ್ಟೇ ಯಾಕೆ ಮೋಸ್ಟ್ ವಾಂಟೆಡ್ ಉಗ್ರಗಾಮಿಗಳು ಪರಪ್ಪನ ಅಗ್ರಹಾರ ಜೈಲಿಗೆ ಯಾವುದೋ ರೆಸಾರ್ಟ್ಗೆ ಬಂದಂತಿದ್ದಾರೆ. ಹೈಪ್ರೊಫೈಲ್ ಕೇಸ್ಗಳ ಆರೋಪಿಗಳು, ಅಪರಾಧಿಗಳು ಶಿಕ್ಷೆ ಸನುಭವಿಸುತ್ತಿರುವ ಈ ಜೈಲು ಕ್ರಿಮಿನಲ್ಗಳ ಪಾಲಿಗೆ ಸ್ವರ್ಗ. ಅದಕ್ಕೆ ಸಾಕ್ಷಿಯಾಗಿ ಕೈದಿಗಳು ಮೋಜು ಮಸ್ತಿ ಮಾಡುತ್ತಿದ್ದ ಸಾಲು ಸಾಲು ವಿಡಿಯೋಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿವೆ.
ಒಟ್ಟು ನಾಲ್ಕು ಪ್ರಕರಣಗಳ ದಾಖಲು
ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಈವರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ದೂರು ದಾಖಲಾಗಿವೆ. ಈ ಪೈಕಿ ಮೂರು ಎನ್ಸಿ ಆರ್ ದಾಖಲಾದರೆ, ಒಂದು ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ವಿಧಾನಸೌಧದಲ್ಲೇ ಭಯೋತ್ಪಾದಕರನ್ನಿಟ್ಟುಕೊಂಡು ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ಮಾತನಾಡ್ತಾರೆ: ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಇಂದು ಸಸ್ಪೆಂಡ್ ಆಗಿರುವ ಜೈಲಿನ ಅಧೀಕ್ಷಕ ಮ್ಯಾಗೇರಿ ಅವರಿಂದಲೇ ದೂರು ನೀಡಲಾಗಿದೆ. ಅವರ ದೂರಿನ ಮೇರೆಗೆ ಜೈಲಿನಲ್ಲಿ ತಟ್ಟೆ, ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿದ್ದ ಸಜಾ ಬಂಧಿ ಪ್ಯಾಟ್ರಿಕ್ ಟೀಮ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎನ್ಸಿಆರ್ ಪ್ರಕರಣಗಳನ್ನ ಪೊಲೀಸರು ಎಫ್ಐಆರ್ ಮಾಡಿಕೊಳ್ಳಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಎನ್ಐಎ ಅಧಿಕಾರಿಗಳ ಎಂಟ್ರಿ
ಇನ್ನು ಪರಪ್ಪನ ಅಗ್ರಹಾರದಲ್ಲಿ ಉಗ್ರರ ಕೈಗೆ ಮೊಬೈಲ್ ಸಿಗುತ್ತಿದ್ದಂತೆ ಎನ್ಐಎ ಅಧಿಕಾರಿಗಳ ಎಂಟ್ರಿಯಾಗಿದೆ. ಸಿಸಿಬಿ ಕಚೇರಿಗೆ ಬಂದ ಅಧಿಕಾರಿಗಳ ತಂಡ, ಜೈಲಿನಲ್ಲಿ ಯಾವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆ? ಜೈಲಿನಲ್ಲಿ ಉಗ್ರರು ಬಳಸುತ್ತಿದ್ದ ಮೊಬೈಲ್ ಫೋನ್ ಸಿಕ್ಕಿದೆಯಾ ಎಂಬೆಲ್ಲಾ ಮಾಹಿತಿ ಪಡೆದಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಸಲ್ಮಾನರಿಗೆ, ಭಯೋತ್ಪಾದಕರಿಗೆ ಎಲ್ಲಾ ಸೌಲಭ್ಯ: ಅಶೋಕ್
ಇಂದು ಬೆಂಗಳೂರಿನ ಕಾರಾಗೃಹ ಕಚೇರಿಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಹತ್ವದ ಸಭೆ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಪರಮೇಶ್ವರ್, ತರಾಟೆಗೆ ತೆಗೆದುಕೊಂಡರು. ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ, ಹಾಗೂ ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಎಂಬುವವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Mon, 10 November 25



