ಬೆಂಗಳೂರು: ಆರ್ಕಿಡ್ ಶಾಲೆ ವಿರುದ್ಧ(Orchid International School) ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಸಿಬಿಎಸ್‌ಇ ಸಿಲಬಸ್ ಹೆಸರಿನಲ್ಲಿ ವಂಚಿಸಿದ್ದ ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ(Parents Protest) ನಡೆಸಿದ್ದಾರೆ. ಅನ್ನಪೂರ್ಣೇಶ್ವರಿನಗರ, ಬೆಳ್ಳಂದೂರು ಬಳಿಕ ಮಹಾಲಕ್ಷ್ಮೀ ಲೇಔಟ್ನ ಆರ್ಕಿಡ್ ಶಾಲೆ ಎದುರು ಪೋಷಕರ ಗಲಾಟೆ ಜೋರಾಗಿದೆ.
ಸಿಬಿಎಸ್‌ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ. ಸ್ಟೇಟ್ ಸಿಲಬಸ್ನಲ್ಲೇ ಪರೀಕ್ಷೆ ಬರೆಯುವಂತಿದ್ದರೆ ಯಾಕೆ ಫೀಸ್ ಕಟ್ಬೇಕು. ನಾವ್ಯಾಕೆ ಲಕ್ಷ ಲಕ್ಷ ಫೀಸ್ ಕಟ್ಟಬೇಕೆಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ದಿನದಿಂದ ದಿನಕ್ಕೆ ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯ ಕಳ್ಳಾಟ ಬಯಲಾಗುತ್ತಿದೆ. ಬೆಂಗಳೂರಿನ 17 ಆರ್ಕಿಡ್ ಶಾಲೆಗಳಿಗೆ ಸಿಬಿಎಸ್‌ಇ ಮಾನ್ಯತೆ ಇಲ್ಲ.
ಇದನ್ನೂ ಓದಿ: ಸಿಬಿಎಸ್ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ
ಮಕ್ಕಳಿಗೆ ಎಲ್‌ಕೆಜಿಯಿಂದ 12th ಸ್ಟ್ಯಾಂಡರ್ಡ್‌ವರೆಗೂ ಬೆಸ್ಟ್ ಎಜುಕೇಷನ್ ಕೊಡ್ತೀವಿ ಅಂತಾ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿರೋ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆ ಪುಂಗಿ ಬಿಟ್ಟಿತ್ತು. ಆದ್ರೆ ಸರ್ಕಾರ ಐದು ಮತ್ತು 8ನೇ ತರಗತಿಗೆ ಪಬ್ಲಿಕ್ ಎಕ್ಸಾಂ ಮಾಡ್ತೀವಿ ಅಂತಿದ್ದಂಗೆ ಈ ಶಾಲೆಯ ಬಣ್ಣ ಬಯಲಾಗಿದೆ. ಈ ಶಾಲೆಯಲ್ಲಿರೋದು ಸಿಬಿಎಸ್‌ಇ ಅಲ್ಲ. ಸ್ಟೇಟ್ ಸಿಲೆಬಸ್ ಅಂತಾ ಅನ್ನೋದು ಜಗಜ್ಜಾಹೀರಾಗಿದೆ. ಇದರಿಂದ ಕೆರಳಿದ ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ರು. ಆದ್ರಿಗ ಈ ಒಂದು ಶಾಲೆಯಲ್ಲ. ಇದೀಗ 17 ಶಾಲೆಗಳ ನಿಜ ಬಣ್ಣ ಪೋಷಕರ ನಿದ್ದೆಗೆಡಿಸಿದೆ.
ಬಿಟಿಎಂ ಲೇಔಟ್, ಮಹಾಲಕ್ಷ್ಮೀಲೇಔಟ್, ನಾಗರಭಾವಿ ಸೇರಿದಂತೆ ಬೆಂಗಳೂರಿನಲ್ಲಿ 21 ಆರ್ಕಿಡ್ ಇಂಟರ್‌ನ್ಯಾಷನಲ್ ಸ್ಕೂಲ್‌ಗಳಿವೆ. ಆದ್ರೆ ಈ 21 ಶಾಲೆಗಳ ಪೈಕಿ ಕೇವಲ 4 ಶಾಲೆಗಳಿಗೆ ಅಂದ್ರೆ ಸಿ.ವಿ ರಾಮನ್ ನಗರ, ಜಾಲಹಳ್ಳಿ , ಮೈಸೂರು ರೋಡ್ ಹಾಗೂ ಸರ್ಜಾಪುರದಲ್ಲಿರೋ ಆರ್ಕಿಡ್ ಶಾಲೆಗಳಿಗೆ ಮಾತ್ರ CBSE ಮಾನ್ಯತೆ ಸಿಕ್ಕಿದೆ. ಇನ್ನುಳಿದ 17 ಶಾಲೆಗಳಿಗೆ CBSE ಮಾನ್ಯತೆಯೇ ಸಿಕ್ಕಿಲ್ಲ. ಆದ್ರೂ ಶಾಲಾ ಆಡಳಿತ ಮಂಡಳಿ CBSE ಪಠ್ಯಕ್ರಮ ಅಂತಾ ಹೇಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿ, ಅವರಿಗೆಲ್ಲಾ ಮಕ್ಮಲ್ ಟೋಪಿ ಹಾಕಿರೋದು ಬೆಳಕಿಗೆ ಬಂದಿದೆ.
Published On - 10:31 am, Mon, 30 January 23