Karnataka Assembly Elections 2023 Highlights: ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿಸಿದ ಆಡಿಯೋ ಬಾಂಬ್; ಕೈ ಪಾಳಯದಲ್ಲಿ ಕೊತಕೊತ, ಕಾರ್ಯಕರ್ತರ ಪ್ರತಿಭಟನೆ
Karnataka Assembly Elections 2023 Live News Updates: ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದು ಭಾರೀ ಸದ್ದು ಮಾಡುತ್ತಿದೆ.
Karnataka Assembly Elections 2023 News Updates: ಕರ್ನಾಟಕ ವಿಧಾನ ಸಭೆ ಚುನಾವಣೆಗೆ(Karnataka Assembly Elections 2023) ಕೆಲವೇ ತಿಂಗಳುಗಳು ಬಾಕಿ ಇವೆ. ಹೀಗಾಗಿ ರಾಜಕೀಯ ಪಕ್ಷಗಳು ಸಭೆ-ಸಮಾರಂಭಗಳನ್ನು ನಡೆಸಿ ಮತದಾರರ ಮನ ಗೆಲ್ಲಲು ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಇಂದು ಕೋಲಾರಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ(Dr Yathindra Siddaramaiah) ಭೇಟಿ ನೀಡಿ ಕೋಲಾರದಲ್ಲಿನ ಸ್ಥಿತಿಗತಿ ಅವಲೋಕಿಸಲಿದ್ದಾರೆ. ಇನ್ನು ಮತ್ತೊಂದೆಡೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದು ಭಾರೀ ಸದ್ದು ಮಾಡುತ್ತಿದೆ. ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್(DK Shivakumar) ಕೈವಾಡ ಇರುವ ಬಗ್ಗೆ ದಾಖಲೆ ಬಿಡುಗಡೆ ಮಾಡುವೆ ಎಂದು ರಮೇಶ್ ಜಾರಕಿಹೊಳಿ ಸುದ್ದಿಘೋಷ್ಠಿ ಕರೆದಿದ್ದಾರೆ. ಹಾಗೂ ಇಂದು ಜೆಡಿಎಸ್ ಪಂಚರತ್ನ ಯಾತ್ರೆ(JDS Pancharatna Yatre) ಕೊಪ್ಪಳಕ್ಕೆ ಆಗಮಿಸಲಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಗೂ ತಾವರಗೇರಾ ಪಟ್ಟಣದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಬನ್ನಿ ರಾಜಕೀಯ ಪಕ್ಷಗಳ ಹಗ್ಗಜಗ್ಗಾಟ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿ ಪಡೆಯಿರಿ.
LIVE NEWS & UPDATES
-
Karnataka News Live: ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಗೆ ಲಾಭ ಇಲ್ಲ: ಯಡಿಯೂರಪ್ಪ
ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ಗೆ ಲಾಭವಾಗಲಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರು ತಲೆ ಕೆಡಿಸಿಕೊಂಡಿಲ್ಲ. ಅವರೋಬ್ಬರು ಈ ತುದಿಯಿಂದ ಆ ತುದಿಗೆ ಹೋಗಿಬಂದರು. ನಾನು ಅದನ್ನು ಅಲ್ಲಗಳೆಯಲ್ಲ. ಆದರೆ ಆದರಿಂದ ರಾಜಕೀಯ ಲಾಭ ಆಗುತ್ತೇ ಅಂತಾ ನನಗನಿಸಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರೇ ಇಲ್ಲ. ರಾಹುಲ್ ಗಾಂಧಿ ನಾಯಕರು ಅಂತಾ ಯಾರು ಒಪ್ಪಿಕೊಳ್ಳುತ್ತಾರೆ? ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಓಡಾಟ ಮಾಡುತ್ತಿದ್ದಾರೆ. ಅದರಿಂದ ನಮಗೆ ಲಾಭ ಅಗಲಿದೆ, ಪ್ರಧಾನಿ ಇನ್ನೂ ಹೆಚ್ಚಿನ ಸಮಯ ಕೊಡುತ್ತಾರೆ ಎಂದರು.
-
Karnataka News Live: ಸುಮಲತಾ ಮನಸ್ಸಿನಲ್ಲಿ ಏನಿದ್ಯೋ ಗೊತ್ತಿಲ್ಲ: ಯಡಿಯೂರಪ್ಪ
ಆಪ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಸಂಸದೆ ಸುಮಲತಾ ಅಂಬರೀಷ್ ಕೂಡ ಕೇಸರಿ ಪಡೆ ಸೇರುತ್ತಾರೆ ಎಂಬ ಚರ್ಚೆಯಾಗುತ್ತಿದೆ. ಅವರ ನಡೆ ಯಾವ ಕಡೆ ಎಂಬ ಕುತೂಹಲವೂ ಎಲ್ಲರಿಲ್ಲ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಾವ್ಯಾರು ಚರ್ಚೆ ಮಾಡಿಲ್ಲ. ಅವರ ಮನಸ್ಸಲ್ಲಿ ಏನಿದ್ಯೋ ಗೊತ್ತಿಲ್ಲ. ಅವರ ಬೆಂಬಲಿಗರೆಲ್ಲಾ ಬಹುತೇಕ ಜನ ಬಿಜೆಪಿಗೆ ಬರುತ್ತಿದ್ದಾರೆ. ಅದರ ಸೂಚನೆ ಏನು ಅಂತಾ ನೀವೇ ತಿಳಿದುಕೋಳ್ಳಬೇಕು ಎಂದರು.
-
Karnataka News Live: ಅಮಿತ್ ಶಾ ಸಭೆಯಲ್ಲಿ 140 ಸ್ಥಾನ ಗೆಲ್ಲುವ ಬಗ್ಗೆ ತಂತ್ರಗಾರಿಕೆ ಬಗ್ಗೆ ಚರ್ಚೆ
ಶಿವಮೊಗ್ಗ: ನಿನ್ನೆ (ಜ.29) ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಅವರು ನಡೆಸಿದ ಸಭೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲುವ ಬಗ್ಗೆ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ. 140 ಸ್ಥಾನ ಪಡೆದು ಯಾರ ಬೆಂಬಲ ಇಲ್ಲದೇ ಸರ್ಕಾರ ಮಾಡುತ್ತೇವೆ ಎಂಬ ವಿಶ್ವಾಸ ಇದೆ. ಎಲ್ಲರೂ ಕೂಡ ಪ್ರವಾಸ ಶುರು ಮಾಡಿದ್ದೇವೆ. ಅಧಿವೇಶನದ ನಂತರ ಮತ್ತೆ ಎಲ್ಲಾ ಕಡೆ ಹೋಗುತ್ತೇವೆ. ಹಗಲು ಕನಸು ಕಾಣುವವರ ಬಗ್ಗೆ ನಾವೇನು ಚರ್ಚೆ ಮಾಡಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಸಹ ಓಡಾಟ ಮಾಡಲಾಗುತ್ತಿದೆ. ಎಲ್ಲರನ್ನೂ ಸಂಪರ್ಕ ಮಾಡುತ್ತಿದ್ದೇವೆ. ಅನೇಕ ಮುಖಂಡರು ಬಿಜೆಪಿಗೆ ಬರಲು ಸಿದ್ದರಾಗಿದ್ದಾರೆ. ಇದೆಲ್ಲವೂ ಮಂಡ್ಯ-ಮೈಸೂರು ಭಾಗದಲ್ಲಿ ಗೆಲ್ಲಲೂ ಅನುಕೂಲ ಆಗುತ್ತದೆ ಎಂದರು.
Karnataka News Live: ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ಗೆ ಕೈ ಪಾಳಯದಲ್ಲಿ ಕೊತಕೊತ
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಪ್ರತಿಭಟನೆ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಜಿದ್ದಿಗೆ ಬಿದ್ದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆಡಿಯೋ ರಿಲೀಸ್ ಮಾಡಿದ್ದಾರೆ. ಇದು ಕೈ ನಾಯಕರ ಕಣ್ಣು ಕೆಂಪಗಾಗಿಸಿದ್ದು, ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಬಳಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಬ್ಲೂ ಬಾಯ್ ರಮೇಶ್ ಜಾರಕಿಹೊಳಿ, ಪೋಲಿ ಹುಡುಗ ಎಂದು ಘೋಷಣೆ ಕೂಗಿದರು.
Karnataka News Live: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ: ಕುಮಾರಸ್ವಾಮಿ
ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಮತ ಹಾಕುವುದಿಲ್ಲ ಎಂದು ಕುಮಾರಸ್ವಾಮಿ
ಕೊಪ್ಪಳ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಲಾಗುವುದು, ಇದೇ ವೇಲೆ ವಿಧವಾ ವೇತನ ಮಾಸಿಕ 2500 ರೂಪಾಯಿ ನೀಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ನಡೆದ ಪಂಚರತ್ನ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ಖಜಾನೆಯನ್ನು ಕೆಲವು ವ್ಯಕ್ತಿಗಳು ದೋಚುತ್ತಿದ್ದಾರೆ. 40-50 ಪರ್ಸೆಂಟ್ ಮೂಲಕ ಸರ್ಕಾರದ ಹಣವನ್ನು ದೋಚುತ್ತಿದ್ದಾರೆ. ನಿಮಗೆ ನೀಡಿದ ಭರವಸೆ ಈಡೇರಿಸದಿದ್ರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಮುಂದೆ ಯಾವತ್ತೂ ಜೆಡಿಎಸ್ ಮತ ಕೇಳಲು ಬರಲ್ಲ ಎಂದರು. 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ. ನಿಮ್ಮ ಬದುಕು ಸರಿಪಡಿಸೋದೆ ನನ್ನ ಗುರಿಯಾಗಿದೆ. ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಮತ ಹಾಕುವುದಿಲ್ಲ. ಇದರಲ್ಲಿ ನಮ್ಮದು ತಪ್ಪಿದೆ, ಅಭ್ಯರ್ಥಿ ಹಾಕುವುದರಲ್ಲಿ ಎಡವಿದ್ದೇವೆ. ಕುಷ್ಟಗಿಯ ತುಕಾರಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಕನಕಗಿರಿಯ ಅಶೋಕ್ ಕೆಲಸ ನಮಗೆ ಸಮಾಧಾನ ತಂದಿಲ್ಲ ಎಂದರು.
Karnataka News Live: ಉತ್ತರ ಕರ್ನಾಟಕ ಭಾಗದಲ್ಲೇ ನಾವು 40-45 ಸ್ಥಾನ ಗೆಲ್ಲುತ್ತೇವೆ: ಕುಮಾರಸ್ವಾಮಿ
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದ ಕುಮಾರಸ್ವಾಮಿ
ಕೊಪ್ಪಳ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ, ಸುಗಮವಾಗಿ ಹಾಸನ ಕ್ಷೇತ್ರದ ಟಿಕೆಟ್ ಸಮಸ್ಯೆ ಬಗೆಹರಿಯಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ ಎಂದು ಪ್ರಶ್ನಿಸಿದ ಅವರು, ಅತೀ ಹೆಚ್ಚು ಕುಟುಂಬ ರಾಜಕಾರಣ ಇರುವುದೇ ಬಿಜೆಪಿಯಲ್ಲಿ. ಅಮಿತ್ ಶಾ ನಮ್ಮ ಬಗ್ಗೆ ಏನು ಮಾತನಾಡೋದು? ತಮ್ಮ ಮಗನಿಗೆ ಬಿಸಿಸಿಐನಲ್ಲಿ ಕಾರ್ಯದರ್ಶಿ ಸ್ಥಾನ ಕೊಡಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಲು ಜಯ್ಶಾಗೆ ಏನು ಅರ್ಹತೆ ಇದೆ ಎಂದು ಪ್ರಶ್ನಿಸಿದರು. ಹಳೇ ಮೈಸೂರು ಭಾಗ ಜೆಡಿಎಸ್ನ ಭದ್ರಕೋಟೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೂ ನಮಗೆ ಉತ್ತಮ ಸ್ಪಂದನೆ ದೊರಕಿದೆ. ಅದಕ್ಕಾಗಿ ರಾಷ್ಟ್ರಿಯ ಪಕ್ಷಗಳು ಮಂಡ್ಯಕ್ಕೆ ಹೋಗಿವೆ. ಉತ್ತರ ಕರ್ನಾಟಕ ಭಾಗದಲ್ಲೇ ನಾವು 40-45 ಸ್ಥಾನ ಗೆಲ್ಲುತ್ತೇವೆ ಎಂದರು.
Karnataka News Live: ಆಡಿಯೋ ಬಾಂಬ್ ವಿಚಾರ, ಅದು ಅವರವರ ವಿಚಾರ ಎಂದು ಕುಮಾರಸ್ವಾಮಿ
ಕೊಪ್ಪಳ: ಡಿ.ಕೆ.ಶಿವಕುಮಾರ್ ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ, ಇಬ್ಬರು ಒಂದೇ ಪಕ್ಷದಲ್ಲಿ ಇದ್ದವರಲ್ಲಾ, ಅದು ಅವರರ ವಿಚಾರ ಎಂದರು. ಜನಾರ್ದನರೆಡ್ಡಿ ಹೊಸ ಪಕ್ಷದಿಂದ ನಮಗೇನೂ ತೊಂದರೆಯಾಗಲ್ಲ ಅಂತಾನೂ ಹೇಳಿದರು.
Karnataka News Live: ಕೊಪ್ಪಳ ಜಿಲ್ಲೆಗೆ ಎಂಟ್ರಿಯಾದ ಜೆಡಿಎಸ್ ಪಂಚರತ್ನ ರಥಯಾತ್ರೆ
ಕೊಪ್ಪಳದ ತಾವರಗೇರಾ ಪಟ್ಟಣಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿದೆ. ತೆರೆದ ವಾಹನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯಿಂದ ರೋಡ್ ಶೋ ನಡೆಯುತ್ತಿದ್ದು ಕುಮಾರಸ್ವಾಮಿ ಗೆ ಹೂವಿನ ಮಳೆಗೈದು ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದ್ದಾರೆ.
Karnataka News Live: ಕೋಲಾರದಲ್ಲಿ ನನ್ನ ಸ್ಪರ್ಧೆ ಬಗ್ಗೆ ಹೇಳಲು ಯಡಿಯೂರಪ್ಪ ಯಾರು
ಕೋಲಾರದಲ್ಲಿ ನನ್ನ ಸ್ಪರ್ಧೆ ಬಗ್ಗೆ ಹೇಳಲು ಯಡಿಯೂರಪ್ಪ ಯಾರು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಆಂತರಿಕ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಭವಾನಿಯಾದರೂ ಸ್ಪರ್ಧಿಸಲಿ, ಯಾರಾದರೂ ಸ್ಪರ್ಧಿಸಲು ನನಗ್ಯಾಕೆ ಎಂದು ನವದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
Karnataka News Live: ಯತೀಂದ್ರ ಮುಂದೆ ವರ್ತೂರು ಪ್ರಕಾಶ್ಗೆ ಗ್ರಾಮಸ್ಥನಿಂದ ಜೈಕಾರ
ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಕೋಲಾರ ಪ್ರವಾಸದಲ್ಲಿದ್ದಾರೆ. ಈ ವೇಳೆ ಯತೀಂದ್ರ ಮುಂದೆ ವರ್ತೂರು ಪ್ರಕಾಶ್ಗೆ ಗ್ರಾಮಸ್ಥರು ಜೈಕಾರ ಹಾಕಿದ ಘಟನೆ ನಡೆದಿದೆ. ಗ್ರಾಮಸ್ಥರ ಜತೆ ಸಭೆ ಮುಗಿಸಿ ತೆರಳುವಾಗ ವರ್ತೂರು ಪ್ರಕಾಶ್ಗೆ ಜೈಕಾರ ಹಾಕಲಾಗಿದೆ. ಈ ವೇಳೆ ಶಾಸಕ ಡಾ.ಯತೀಂದ್ರ, ಕಾಂಗ್ರೆಸ್ ಮುಖಂಡರು ತಬ್ಬಿಬ್ಬಾಗಿದ್ದಾರೆ.
Karnataka News Live: ಲಕ್ಷ್ಮೀ ಹೆಬ್ಬಾಳ್ಕರ್ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ –
ರಮೇಶ್ ಜಾರಕಿಹೊಳಿ ಯಾಕೆ ಸುದ್ದಿಗೋಷ್ಠಿ ಕರೆದ್ರೋ ಗೊತ್ತಿಲ್ಲ ಎಂದು ಟಿವಿ9ಗೆ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಹೇಳಿಕೆ ನೀಡಿದ್ದಾರೆ. ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಹತಾಶೆಗೊಂಡು ಏನೇನೋ ಮಾತಾಡ್ತಿದ್ದಾರೆ. ಆಡಿಯೋ ಬಿಡುಗಡೆ ಮಾಡ್ತೀನಿ ಅಂತಾ ಹೇಳಿ ಬಿಡುಗಡೆ ಮಾಡಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ರನ್ನು ಶಾಸಕ ರಮೇಶ್ ಜಾರಕಿಹೊಳಿ ಗೆಲ್ಲಿಸಲಿಲ್ಲ. ಅವರ ಕೀಳುಮಟ್ಟದ ಹೇಳಿಕೆಯನ್ನು ರಾಜ್ಯದ ಜನರೇ ನೋಡ್ತಿದ್ದಾರೆ. ಬಿಜೆಪಿ ಸೇರುವಂತೆ ರಮೇಶ್ ಜಾರಕಿಹೊಳಿ ಆಹ್ವಾನ ನೀಡಿದ್ದರು. ಬಿಜೆಪಿಗೆ ಸೇರಲು ಒಪ್ಪದಿದ್ದಕ್ಕೆ ಈ ರೀತಿಯ ಜಗಳ ಶುರುವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ವರ್ಚಸ್ಸು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಲಕ್ಷ್ಮೀ ಪ್ರಭಾವ ಕುಗ್ಗಿಸಲು ಯತ್ನ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರ ಮನುಷ್ಯ.ಡಿ.ಕೆ.ಶಿವಕುಮಾರ್ಗೆ ಕೀಳುಮಟ್ಟದ ರಾಜಕಾರಣ ಅವಶ್ಯಕತೆ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಡಿ ಮಾಡಿಸಿದ್ದಕ್ಕೆ ಸಾಕ್ಷ್ಯ ಏನಿದೆ? ಎಂದು ಟಿವಿ9ಗೆ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಹೇಳಿಕೆ ನೀಡಿದ್ದಾರೆ.
Karnataka News Live: ಕೋಲಾರದಲ್ಲಿ ಸಿದ್ದರಾಮಯ್ಯನವರ ರಾಜಕೀಯ ಅಂತ್ಯ ಸಂಸ್ಕಾರ ಕಾಣುತ್ತಿದೆ
ಬಿಜೆಪಿಗೆ ನನ್ನ ಹೆಣವೂ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಶವ ಇಲ್ಲಿಗೆ ಯಾಕೆ ಬರುತ್ತದೆ? ಸಿದ್ದರಾಮಯ್ಯ ಶವ ಬೇರೆ ಕಡೆ ಹೋಗಬೇಕು. ನಮ ಪಕ್ಷ ಶವಾಗಾರ ಅಲ್ಲ. ಸಿದ್ದರಾಮಯ್ಯಗೆ ಬುದ್ದಿ ಭ್ರಮಣೆ ಆಗಿದೆ. ಶವದ ಬಗ್ಗೆ ಯಾಕೆ ಮಾತಾಡ್ತಾರೆ ಗೊತ್ತಿಲ್ಲ. ಕೋಲಾರದಲ್ಲಿ ಅವರ ರಾಜಕೀಯ ಅಂತ್ಯ ಸಂಸ್ಕಾರ ಕಾಣುತ್ತಿದೆ. ಅದಕ್ಕೆ ಅವರಿಗೆ ಶವದ ನೆನಪಾಗಿದೆ. ಬಿಜೆಪಿ ಪಕ್ಷ ಹಾಗು ಮುಖಂಡರ ಬಗ್ಗೆ ಕೆಟ್ಟದಾಗಿ ಮಾತನಾಡ್ತಿದ್ದಾರೆ. ನೀವು ಮಾಜಿ ಸಿಎಂ, ನಿಮ್ಮ ಬಗ್ಗೆ ನಮಗೆ ಗೌರವ ಇದೆ. ನಿಮ್ಮನ್ನು ಕೆಟ್ಟದಾಗಿ ತೋರಿಸಲು ನಮಗೆ ಇಚ್ಚೆ ಇಲ್ಲ. ನಿಮ್ಮ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಿ. ನಿಮ್ಮಂತವರಿಗೆ ಈ ಪಕ್ಷ ಅಲ್ಲ. ನೀವೇ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ. ನೀವೆಲ್ಲಾ ಕಲುಷಿತ ಮನಸ್ಸಿನ ಜನರು. ಬಜೆಪಿಗೆ ನೀವೂ ಬೇಡ, ನಿಮ್ಮ ಹೆಣವೂ ಬೇಡ ಎಂದರು.
Karnataka News Live: ಮಂಡ್ಯದಲ್ಲಿ ಜೆಡಿಎಸ್ ವರಿಷ್ಠರಿಗೆ ಬಂಡಾಯದ ಬಿಸಿ
ಜೆಡಿಎಸ್ ಭದ್ರಕೋಟೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಂಡ್ಯದಲ್ಲಿ ಜೆಡಿಎಸ್ ವರಿಷ್ಠರಿಗೆ ಬಂಡಾಯದ ಬಿಸಿ ತಟ್ಟಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಸ್ವಪಕ್ಷದ ಕಾರ್ಯಕರ್ತರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ತಗ್ಗಳ್ಳಿ ವೆಂಕಟೇಶ್ರಿಂದ ಶ್ರೀಕಂಠಯ್ಯ ವಿರುದ್ಧ ನೇರಾನೇರ ಆರೋಪ ಕೇಳಿ ಬಂದಿದೆ. ಮೂಲ ಜೆಡಿಎಸ್ ಕಾರ್ಯಕರ್ತರನ್ನು ಕಡೆಗಣಿಸಿದ ಆರೋಪ ಕೇಳಿ ಬಂದಿದೆ.
Karnataka News Live: ಕಾಂಗ್ರೆಸ್ ಪಕ್ಷದ ಬಸ್ ಹೊರಟಿದೆ, ಅದು ಪಂಕ್ಚರ್ ಆಗಲಿದೆ -ನಳಿನ್ ಕುಮಾರ್ ಕಟೀಲು
ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ ಪರಿವರ್ತನೆ ಆಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ. 5 ವರ್ಷದ ಹಿಂದೆ ಜನ ಕಾಂಗ್ರೆಸ್ & ಜೆಡಿಎಸ್ ತಿರಸ್ಕರಿಸಿದರು. ಕಾಂಗ್ರೆಸ್ ಪಕ್ಷದ ಬಸ್ ಹೊರಟಿದೆ, ಅದು ಪಂಕ್ಚರ್ ಆಗಲಿದೆ. ಜೆಡಿಎಸ್ನ ಪಂಚರತ್ನ ರಥಯಾತ್ರೆ ವಿಜಯಪುರ ತಲುಪುವಾಗ ಹಾಸನದಲ್ಲಿ ಪಂಕ್ಚರ್ ಮಾಡುವ ಕೆಲಸ ಆಗುತ್ತಿದೆ ಅಂತಾ ಕಟೀಲು ವ್ಯಂಗ್ಯವಾಡಿದ್ದಾರೆ.
Karnataka News Live: ತಂದೆಗಾಗಿ ಕೋಲಾರದಲ್ಲಿ ಬಾಡಿಗೆ ಮನೆ ನೋಡಿದ ಶಾಸಕ ಡಾ.ಯತೀಂದ್ರ
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯಗಾಗಿ ಬಾಡಿಗೆ ಮನೆ ವೀಕ್ಷಿಸಿದ್ದಾರೆ. ಕೋಲಾರ ಬಳಿ ಕೋಗಿಲಹಳ್ಳಿಯ ಶಂಕರಪ್ಪ ಎಂಬುವರ ಬಾಡಿಗೆ ಮನೆಯ ಆವರಣ & ಮನೆ ವೀಕ್ಷಣೆ ಮಾಡಿದ್ದಾರೆ. ಮನೆ ಚೆನ್ನಾಗಿದೆ, ಸಿದ್ದರಾಮಯ್ಯ ಅಂತಿಮ ತೀರ್ಮಾನ ತೆಗೆದುಕೊಳ್ತಾರೆ ಎಂದು ಕೋಲಾರದಲ್ಲಿ ಸಿದ್ದರಾಮಯ್ಯ ಪುತ್ರ ಶಾಸಕ ಡಾ.ಯತೀಂದ್ರ ಹೇಳಿಕೆ ನೀಡಿದ್ದಾರೆ.
Karnataka News Live: ಬೆಳಗಾವಿ ಶಾಸಕಿಯಿಂದ ಡಿಕೆಶಿ, ರಮೇಶ್ ಜಾರಕಿಹೊಳಿ ಸಂಬಂಧ ಹಾಳಾಯ್ತು
ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿಯಿಂದ ಅಣ್ಣ ತಮ್ಮಂದಿರಂತಿದ್ದ ಡಿಕೆಶಿ, ರಮೇಶ್ ಜಾರಕಿಹೊಳಿ ಸಂಬಂಧ ಹಾಳಾಯ್ತು ಎಂದು ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಆಪರೇಷನ್ ಕಮಲ ನಂತರ ಬಾಂಬೆಗೆ ತೆರಳಿದ್ದ ವೇಳೆ ಒಂದು ಕರೆ ಬಂತು. ಈ ವೇಳೆ ಡ್ಯಾಶ್ ಡ್ಯಾಶ್ ಎಂದು ಹೇಳಿದ್ದೆ. ಅದಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ಸೇರಿಸಿ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ನನ್ನ ಹೆಸರು ಹಾಳುಮಾಡಲು ಮತ್ತೊಂದು ಷಡ್ಯಂತ್ರ ನಡೆಯುತ್ತಿದೆ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದೆ. ಹಲವಾರು ರಾಜಕಾರಣಿಗಳು, ಅಧಿಕಾರಿಗಳನ್ನು ಸಿಲುಕಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್ಮೇಲ್ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ.
Karnataka News Live: ಬಿಜೆಪಿ ಸೇರಿದ ಎಲ್ಲರಿಗೂ ಪಕ್ಷದಲ್ಲಿ ಉತ್ತಮ ಭವಿಷ್ಯ ಇದೆ -ಸಚಿವ ಕೆ. ಗೋಪಾಲಯ್ಯ
ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆವು. ನಾನು ಸ್ವ ಇಚ್ಛೆಯಿಂದ ಬಿಜೆಪಿಗೆ ಬಂದೆ. ಪಕ್ಷ ನಮಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ. 2013ರಲ್ಲಿ ಬಿಜೆಪಿ ಇಬ್ಭಾಗ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಾವೆಲ್ಲಾ ಬಿಜೆಪಿಯಲ್ಲಿ ಒಂದಾಗಿದ್ದೇವೆ, 150+ ಸ್ಥಾನ ಗೆಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ನಮ್ಮ ಪಕ್ಷ ಸೇರುತ್ತಾರೆ. ಮೈಸೂರು, ಹಾಸನ, ಬೆಂಗಳೂರಿನ ಅನೇಕರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಎಲ್ಲರಿಗೂ ಪಕ್ಷದಲ್ಲಿ ಉತ್ತಮ ಭವಿಷ್ಯ ಇದೆ. ರಾಜ್ಯದಲ್ಲಿ ಯಡಿಯೂರಪ್ಪ, ಸಿಎಂ, ಕಟೀಲ್ ನೇತೃತ್ವದಲ್ಲಿ ಪಕ್ಷ ಮುನ್ನಡೆಸಲಾಗುತ್ತಿದೆ ಎಂದು ಸಚಿವ ಕೆ. ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.
Karnataka News Live: ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್ -ರಮೇಶ್ ಜಾರಕಿಹೊಳಿ
ಬೆಳಗಾವಿ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡಿ ನನ್ನನ್ನು ಹೊಡೆದರಲ್ಲ ಡಿಕೆಶಿ. ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್. ನನ್ನ ಬಳಿ 128 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ. ಎಲ್ಲವನ್ನೂ ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Karnataka News Live: ಹಳೇ ಮೈಸೂರು ಭಾಗದ ಜಿಲ್ಲೆಗಳ ಮುಖಂಡರು ಬಿಜೆಪಿ ಸೇರ್ಪಡೆ
ಹುಣಸೂರು ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಸೋಮಶೇಖರ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜಿ. ಎನ್. ವೇಣುಗೋಪಾಲ್, ವಾಣಿ ಕೃಷ್ಣಾರೆಡ್ಡಿ, ಸಕಲೇಶಪುರದ ವೆಂಕಟೇಶ ಗೌಡ, ಅರಕಲಗೂಡು ಕ್ಷೇತ್ರ ದಿವಾಕರ ಗೌಡ, ರಾಮನಗರದ ಡಾ. ಪುಣ್ಯವತಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
Karnataka News Live: ಸಿಎಂ ಬೊಮ್ಮಾಯಿ ಭೇಟಿಯಾದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್
ರೇಸ್ ಕೋರ್ಸ್ ನಿವಾಸದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಸಿಎಂ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದ ವಿಚಾರವಾಗಿ ಸಿಎಂ ಭೇಟಿಯಾಗಿ ಕ್ಷೇತ್ರದ ಅನುದಾನ ಕಡಿತವಾಗಿದೆ, ಟೆಂಡರ್ ಪ್ರಕ್ರಿಯೆ ನಿಧನವಾಗಿದೆ. ಪಾದಾರಾಯನಪುರ ರಸ್ತೆ ಅಗಲಿಕರಣಕ್ಕೆ ಬಿಡುಗಡೆಯಾದ 50 ಕೋಟಿ ಹಣ ವಾಪಸ್ ಪಡೆದುಕೊಂಡಿದ್ದಾರೆ. ಆ ಅನುದಾನ ಮರಳಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Karnataka News Live: ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಎಲ್ಇಡಿ ಟಿವಿ ವಿತರಣೆ
ಅತ್ತ ಮತದಾರರಿಗೆ ಆಮಿಷ ಎಂದು ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ನಾಯಕರು ದೂರು ನೀಡುತ್ತಿದ್ದಾರೆ. ಆದ್ರೆ ಇತ್ತ ಕಾಂಗ್ರೆಸ್ ಶಾಸಕರಿಂದಲೇ ಮತದಾರರಿಗೆ ಟಿವಿ, ಮಿಕ್ಸರ್, ಕುಕ್ಕರ್ ವಿತರಣೆ ಮಾಡಲಾಗುತ್ತಿದೆ. ಹೆಬ್ಬಾಳ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಎಲ್ಇಡಿ ಟಿವಿ ವಿತರಣೆ ಮಾಡಿದ್ದಾರೆ. ಟಿವಿ ಪರದೆಯಲ್ಲಿ ತಮ್ಮ ಫೋಟೋ ಬರುವಂತೆ ಶಾಸಕ ಭೈರತಿ ಸುರೇಶ್ ವ್ಯವಸ್ಥೆ ಮಾಡಿದ್ದಾರೆ.
Karnataka News Live: ಭಾವನಾತ್ಮಕವಾಗಿ ಟ್ವೀಟ್ ಮಾಡಿ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ರೇವಣ್ಣ ಪುತ್ರ ಸೂರಜ್
ಹಾಸನ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ಗೆ ಫೈಟ್ ವಿಚಾರಕ್ಕೆ ಸಂಬಂಧಿಸಿ ಎಂಎಲ್ಸಿ ಡಾ.ಸೂರಜ್ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ. ರೇವಣ್ಣ ಪುತ್ರ ಡಾ.ಸೂರಜ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಎಂದು ಟ್ವೀಟ್ ಮಾಡಿದ್ದಾರೆ.
ಕೇಳಿದ್ದು ಸುಳ್ಳಾಗಬಹುದು.ನೋಡಿದ್ದು ಸುಳ್ಳಾಗಬಹುದು.ನಿಧಾನಿಸೀ ಯೋಚಿಸಿದಾಗ ನಿಜವು ತಿಳಿಯುವುದು .. pic.twitter.com/boODlL5MLS
— Dr,Suraj Revanna MLC (@SurajMlc) January 29, 2023
Karnataka News Live: ಕೊಪ್ಪಳದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ
ಇಂದು ಜೆಡಿಎಸ್ ಪಂಚರತ್ನ ಯಾತ್ರೆ ಕೊಪ್ಪಳಕ್ಕೆ ಆಗಮಿಸಲಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಗೂ ತಾವರಗೇರಾ ಪಟ್ಟಣದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ತಾವರಗೇರಾ ಮೂಲಕ ಕುಷ್ಟಗಿ ಪಟ್ಟಣದಲ್ಲಿ ರಥಯಾತ್ರೆ ರ್ಯಾಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಯಾತ್ರೆ ಆಗಮಿಸಲಿದೆ. ಬೈಕ್ ರ್ಯಾಲಿ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರ್ ಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆದಿದೆ.
Karnataka News Live: ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ
ಇಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಮಹಾನಾಯಕನಿಗೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸಿಡಿ ಪ್ರಕರಣದಲ್ಲಿ ಡಿಕೆಶಿ ಕೈವಾಡ ಕುರಿತು ದಾಖಲೆ ಬಿಡುಗಡೆ ಮಾಡಲಿದ್ದಾರೆ. ಡಿಕೆಶಿ ವೈಯಕ್ತಿಕ ವಿಚಾರ ಇದೆ ಮಾತನಾಡುತ್ತೇನೆ ಎಂದು ಈ ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದರು. ಈ ಬೆನ್ನಲ್ಲೆ ಬೆಳಗ್ಗೆ 10.30ಕ್ಕೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
Karnataka News Live: ರಾಜಕೀಯ ನಿವೃತ್ತಿ ಘೋಷಿಸಿಕೊಂಡ್ರಾ ರಮೇಶ್ ಜಾರಕಿಹೊಳಿ?
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಆರು ಬಾರಿ ಶಾಸಕನಾಗಿದ್ದೇನೆ ಏಳನೇ ಬಾರಿ ಶಾಸಕನಾದ ನಂತರ ಎಂಟನೇ ಬಾರಿ ನಿಲ್ಲಬೇಕು, ಬೇಡಾ ಎನ್ನುವ ನಿರ್ಧಾರ ನಿಮ್ಮ ಮೇಲೆ ಬಿಡ್ತೇನಿ ನಾನು ಎಂದು ಹೇಳಿದ್ದಾರೆ.
Karnataka News Live: AIMIM ಬಿಟ್ಟು ಕಾಂಗ್ರೆಸ್ ಸೇರ್ತಿರೋ ಮುಖಂಡರು
ಕಲಬುರಗಿ ಜಿಲ್ಲೆಯಲ್ಲಿ ಓವೈಸಿ AIMIM ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. AIMIM ಬಿಟ್ಟು ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಇಲಿಯಾಸ್ ಸೇಠ್ ಬಾಗಬಾನ್ ಮರಳಿ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ ನೆಲೆ ಊರಲು ಯತ್ನಿಸಿದ್ದ ಎಐಎಂಐಎಮ್ ಪಕ್ಷಕ್ಕೆ ಬಿಗ್ ಶಾಕ್.
Karnataka News Live: ಕೋಲಾರಮ್ಮ ದೇವಾಲಯಕ್ಕೆ ಡಾ.ಯತೀಂದ್ರ ಭೇಟಿ
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಇಂದು ಕೋಲಾರಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಕೋಲಾರದಲ್ಲಿನ ಸ್ಥಿತಿಗತಿ ಅವಲೋಕಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕೋಲಾರಮ್ಮ ದೇವಾಲಯಕ್ಕೆ ಡಾ.ಯತೀಂದ್ರ ಭೇಟಿ ನೀಡಿ ನಂತರ ಹೊನ್ನೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಕೋಲಾರದ ಕ್ಲಾಕ್ಟವರ್ ದರ್ಗಾಗೆ ಭೇಟಿ ನೀಡಿ ಸಮಾಲೋಚನೆ ಮಾಡಲಿದ್ದಾರೆ. ಮುಸ್ಲಿಂ ಸಮುದಾಯದ ಮುಖಂಡರ ಜತೆ ಚರ್ಚೆ ನಡೆಸಲಿದ್ದು ಸಿದ್ದರಾಮಯ್ಯ ವಾಸ್ತವ್ಯಕ್ಕೆ ಬಾಡಿಗೆ ಮನೆ ಅಂತಿಮಗೊಳಿಸಲಿದ್ದಾರೆ.
Published On - Jan 30,2023 8:58 AM