ಬಿಎಂಟಿಸಿ ಇ-ಬಸ್​ಗಳಲ್ಲಿ ಪ್ರತಿದಿನ 3 ಲಕ್ಷ ಜನ ಪ್ರಯಾಣ

| Updated By: ವಿವೇಕ ಬಿರಾದಾರ

Updated on: Sep 09, 2023 | 11:26 AM

ಇ-ಬಸ್​ಗಳು ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರ ಸ್ನೇಹಿಯಾಗಿವೆ. ಇ-ಬಸ್​ಗಳು ಪ್ರತಿದಿನ ಒಟ್ಟು 80,000 ಕಿ.ಮೀ ಕ್ರಮಿಸುತ್ತವೆ. ಪ್ರತಿ ಕಿಮೀ 50 ರೂ. ಆದಾಯ ಬರುತ್ತದೆ. ಇದು ಸಾಮಾನ್ಯ ಬಸ್​ಗಳಿಗಿಂತ 5 ರೂ. ಹೆಚ್ಚಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಿಎಂಟಿಸಿ ಇ-ಬಸ್​ಗಳಲ್ಲಿ ಪ್ರತಿದಿನ 3 ಲಕ್ಷ ಜನ ಪ್ರಯಾಣ
ಬಿಎಂಟಿಸಿ ಇ-ಬಸ್​
Follow us on

ಬೆಂಗಳೂರು ಸೆ.09: ಹಸಿರು ನಗರ ಮತ್ತು ಸುಸ್ಥಿರ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಎಲೆಕ್ಟ್ರಿಕ್ ಬಸ್‌ಗಳನ್ನು (Electric Bus) ಪ್ರಾರಂಭಿಸಿ ಒಂದೂವರೆ ವರ್ಷಗಳು ಕಳೆದಿದೆ. ನಗರದಲ್ಲಿ ಸದ್ಯ 390 ಈ ಎಲೆಕ್ಟ್ರಿಕ್​ ಬಸ್‌ಗಳು ಸಂಚರಿಸುತ್ತಿವೆ. ಈ ಬಸ್​​ಗಳಲ್ಲಿ ಪ್ರತಿದಿನ ಸರಾಸರಿ ಮೂರು ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಈ ಬಗ್ಗೆ ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ಇ-ಬಸ್​ಗಳು ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರ ಸ್ನೇಹಿಯಾಗಿವೆ. ಇ-ಬಸ್​ಗಳು ಪ್ರತಿದಿನ ಒಟ್ಟು 80,000 ಕಿ.ಮೀ ಕ್ರಮಿಸುತ್ತವೆ. ಪ್ರತಿ ಕಿಮೀ 50 ರೂ. ಆದಾಯ ಬರುತ್ತದೆ. ಇದು ಸಾಮಾನ್ಯ ಬಸ್​ಗಳಿಗಿಂತ 5 ರೂ. ಹೆಚ್ಚಾಗಿದೆ ಎಂದು ತಿಳಿಸಿದರು.

ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಡಿಸೆಂಬರ್ 2021 ರಲ್ಲಿ 90 ಇ-ಬಸ್​ಗಳು ಖರೀದಿಸಲಾಯಿತು. ಆಗಸ್ಟ್ 2022 ರ ನಂತರ ಫ್ರೇಮ್​-2 ಯೋಜನೆ ಅಡಿಯಲ್ಲಿ 300 ಇ-ಬಸ್​ಗಳನ್ನು ಖರೀದಿಸಲಾಯಿತು. ಈ ಬಸ್ಸುಗಳು ನಗರದ 18 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಅನೇಕ ಬಸ್​ಗಳು ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತವೆ ಎಂದು ಹೇಳಿದರು.

ಆರಂಭದ ಹಂತದಲ್ಲಿ ಇ-ಬಸ್​ಗಳನ್ನು ಪರಿಚಯಿಸುವುದು ಸಾಕಷ್ಟು ಸವಾಲಾಗಿತ್ತು. ಮೊದಲ ಬಾರಿಗೆ ಬಿಎಂಟಿಸಿ ಖಾಸಗಿ ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಇ-ಬಸ್​ ಸೇವೆ ಆರಂಭಿಸಿತು. ಈ ಬಸ್​​ಗಳಿಗೆ ನಿರ್ವಹಣೆಯನ್ನು ಬಿಎಂಟಿಸಿ ನೀಡುತ್ತದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್​ನ್ಯೂಸ್: ಬಿಎಂಟಿಸಿ ಬಸ್​​ನಲ್ಲಿ ರಾತ್ರಿ ಪ್ರಯಾಣದ ಹೆಚ್ಚುವರಿ ಟಿಕೆಟ್​ ಶುಲ್ಕ ರದ್ದು

9 ಮೀಟರ್ ಇ-ಬಸ್​​ ಕಾರ್ಯಾಚರಣೆಯಿಂದ ಪ್ರತಿ ಕಿ.ಮೀಗೆ 51 ರೂ. ಮತ್ತು ಪ್ರೇಮ್​-2 ಅಡಿಯಲ್ಲಿ ಕಾರ್ಯನಿರ್ವಹಿಸುವ 12 ಮೀಟರ್ ಬಸ್‌ಗಳಿಂದ ಪ್ರತಿ ಕಿ.ಮೀಗೆ 48 ರೂ. ಲಾಭ ಬಿಎಂಟಿಸಿಗೆ ಬರುತ್ತಿದೆ. ಕೇಂದ್ರದ ಫ್ರೇಮ್​-2 ಯೋಜನೆಯಡಿಯಲ್ಲಿ ನಿಗಮವು ಹೊಸದಾಗಿ 921 ಇ-ಬಸ್‌ಗಳನ್ನು ಖರೀದಿಸಲಿದೆ. ಈ ಬಸ್​ಗಳು 12 ಮೀಟರ್ ಉದ್ದವಾಗಿದ್ದು, 35 ಪ್ರಯಾಣಿಕರು ಏಕಕಾಲದಲ್ಲಿ ಸಂಚರಿಸಬಹುದಾಗಿದೆ. ಡೀಸೆಲ್ ಬಸ್ಸುಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು. ಇ-ಬಸ್​​ ​ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಬೆಂಗಳೂರಿಗರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ