PFI Ban: ಪಿಎಫ್ಐ ನಿಷೇಧ ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

| Updated By: ವಿವೇಕ ಬಿರಾದಾರ

Updated on: Nov 28, 2022 | 4:26 PM

ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದನ್ನು ಪ್ರಶ್ನಿಸಿ, ಕರ್ನಾಟಕದ ಪಿಎಫ್ಐ ಅಧ್ಯಕ್ಷ ನಾಸೀರ್ ಅಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ.

PFI Ban: ಪಿಎಫ್ಐ ನಿಷೇಧ ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಪಿಎಫ್​ಐ ನಿಷೇಧ
Follow us on

ಬೆಂಗಳೂರು: ಕೇಂದ್ರ ಸರ್ಕಾರ (Central Government) ಪಿಎಫ್ಐ ಸಂಘಟನೆಯನ್ನು ನಿಷೇಧಿಸಿದ್ದನ್ನು (PFI Ban) ಪ್ರಶ್ನಿಸಿ, ಕರ್ನಾಟಕದ ಪಿಎಫ್ಐ ಅಧ್ಯಕ್ಷ ನಾಸೀರ್ ಅಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಯಕುಮಾರ್ ಎಸ್.ಪಾಟೀಲ್ ಪಿಎಫ್ಐ (PFI) ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಆದರೆ ಪಿಎಫ್ಐ ಕಾನೂನು ಬಾಹಿರ ಸಂಘಟನೆ ಎನ್ನಲು ಕಾರಣ ನೀಡಿಲ್ಲ. ತಕ್ಷಣದ ಬ್ಯಾನ್​ಗೆ ಪ್ರತ್ಯೇಕ ಕಾರಣ ನೀಡಬೇಕಿತ್ತು. ವಾದಮಂಡನೆಗೆ ಕಾಲಾವಕಾಶ ನೀಡದೇ ಬ್ಯಾನ್ ಮಾಡಲಾಗಿದೆ. ಯುಎಪಿಎ ಕಾಯ್ದೆಗೆ ವಿರುದ್ಧವಾಗಿ ಆದೇಶ ಹೊರಡಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಅಂತೂ ಪಿಎಫ್‌ಐ ನಿಷೇಧವಾಯ್ತು, ಆ ಸಂಘಟನೆಯ ಜೊತೆ ಸಂಪರ್ಕ ಹೊಂದುವುದು ಇನ್ನು ನಿಷಿದ್ಧ!

ಇನ್ನು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪಿಎಫ್ಐ ಸಂಘಟನೆಯಿಂದ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಂಘಟನೆಯ ಸದಸ್ಯರಿಂದ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಸಕಾರಣದಿಂದಲೇ ಪಿಎಫ್ಐ ಸಂಘಟನೆ ನಿರ್ಬಂಧಿಸಲಾಗಿದೆ ಎಂದರು.

ಪಿಎಫ್ಐ ಬ್ಯಾನ್​ ಏಕೆ ?

ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯ ವ್ಯಕ್ತಿಗಳ ಹತ್ಯೆಗೆ ಸಂಚು, ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪಿತೂರಿ, ಉಗ್ರ ಸಂಘಟನೆಗಳ ಜೊತೆ ನಿಕಟ ಸಂಪರ್ಕ ಹೊಂದಿದ ಆರೋಪದಡಿ ಕೆಲ ತಿಂಗಳ ಹಿಂದೆ ದೇಶಾದ್ಯಂತ ಏಕಕಾಲಕ್ಕೆ ಎನ್​ಐಎ ಅಧಿಕಾರಿಗಳು ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ಮೇಲೆ ದಾಳಿ ಹಾಗೂ ಹಲವಾರು ಮಂದಿ ಮುಖಂಡರು, ಕಾರ್ಯಕರ್ತರ ಬಂಧಿಸಿದ್ದರು.

ಇದಾದ ನಂತರ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಕಾನೂಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಪಿಎಫ್ಐ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ ಸಿಎಚ್ ಆರ್ ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:16 pm, Mon, 28 November 22