ಅಂತೂ ಪಿಎಫ್‌ಐ ನಿಷೇಧವಾಯ್ತು, ಆ ಸಂಘಟನೆಯ ಜೊತೆ ಸಂಪರ್ಕ ಹೊಂದುವುದು ಇನ್ನು ನಿಷಿದ್ಧ!

ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಷ್ಟು ವರ್ಷ ಅಳೆದೂ ತೂಗಿ ಇದೀಗ ಕೊನೆಗೂ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿದೆ.

ಅಂತೂ ಪಿಎಫ್‌ಐ ನಿಷೇಧವಾಯ್ತು, ಆ ಸಂಘಟನೆಯ ಜೊತೆ ಸಂಪರ್ಕ ಹೊಂದುವುದು ಇನ್ನು ನಿಷಿದ್ಧ!
ಪಿಎಫ್​ಐ ನಿಷೇಧ
TV9kannada Web Team

| Edited By: Vivek Biradar

Sep 28, 2022 | 10:41 PM

ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇಷ್ಟು ವರ್ಷ ಅಳೆದೂ ತೂಗಿ ಇದೀಗ ಕೊನೆಗೂ ಕೇಂದ್ರ ಸರ್ಕಾರ ಪಿಎಫ್‌ಐ ಅನ್ನು ನಿಷೇಧಿಸಿದೆ. ಎಂದೋ ಈ ಸಂಘಟನೆಗಳನ್ನು ನಿಷೇದಿಸಬಹುದಿತ್ತಲ್ಲಾ ಎಂಬ ಪ್ರಶ್ನೆಗಳು ಏಳುವುದು ಸಹಜ. ಆದರೆ ಸಂಘಗಳು, ಒಕ್ಕೂಟಗಳನ್ನು ಕಟ್ಟುವುದು ಸಂವಿಧಾನದ ಆರ್ಟಿಕಲ್ 19(c) ಅಡಿಯಲ್ಲಿ ನಾಗರಿಕರ ಮೂಲಭೂತ ಹಕ್ಕು. ಹೀಗಾಗಿ ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಸುಲಭವಲ್ಲ. ಆದರೆ ದೇಶದ ಏಕತೆ, ಸಮಗ್ರತೆಗೆ ಧಕ್ಕೆಯುಂಟಾದಾಗ, ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾದಾಗ, ನೈತಿಕತೆಗೆ ಭಂಗ ತರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲು ಸಂವಿಧಾನದಲ್ಲೇ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರವೇ ಪಿಎಫ್‌ಐ ನಿಷೇಧಿಸುವ ಕೆಲಸಕ್ಕೆ ಕೈ ಹಾಕಿದೆ. 1967 ರಲ್ಲಿ ರಚಿಸಲಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಯುಎಪಿಎ ಸಂಪೂರ್ಣ ಭಾರತ ದೇಶದ ಜನರಿಗೆ ಮಾತ್ರವಲ್ಲ ವಿದೇಶಗಳಲ್ಲಿರುವ ಭಾರತದ ನಾಗರಿಕರಿಗೂ, ನೋಂದಣಿಯಾದ, ನೋಂದಣಿಯಾಗದ ಸಂಘಟನೆಗಳಿಗೂ ಅನ್ವಯವಾಗುತ್ತದೆ.

ಯುಎಪಿ ಕಾಯ್ದೆಯ ಸೆಕ್ಷನ್ 3 ರ ಅಡಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಪಿಎಫ್‌ಐ ಹಾಗೂ ಅದರ ಅಂಗಸಂಸ್ಥೆಗಳನ್ನು ದೇಶಾದ್ಯಂತ ಹಿಂಸಾತ್ಮಕ ಉಗ್ರ ಕೃತ್ಯಗಳನ್ನು ನಡೆಸಿದ ಆರೋಪದ ಮೇರೆಗೆ ನಿಷೇಧಿಸಿದೆ. ಕೇಂದ್ರ ಸರ್ಕಾರ ಈಗ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ನಿಷೇಧಿಸಿದ್ದರೂ ಇದೇ ಅಂತಿಮವಲ್ಲ. ಗೃಹ ಇಲಾಖೆಯ ಕ್ರಮವನ್ನು ಯುಎಪಿ ಕಾಯ್ದೆಯಡಿ ರಚಿಸಲಾಗಿರುವ ನ್ಯಾಯಮಂಡಳಿ ಪರಾಮರ್ಶಿಸುತ್ತದೆ. ಸಂತ್ರಸ್ತ ಸಂಘಟನೆಗಳಿಗೆ 30 ದಿನಗಳಲ್ಲಿ ನೋಟಿಸ್ ಜಾರಿಗೊಳಿಸಿ ಅವರ ವಾದವನ್ನೂ ಕೇಳಲಾಗುತ್ತದೆ. ಯುಎಪಿ ಕಾಯ್ದೆಯ ಸೆಕ್ಷನ್ 4 ರಲ್ಲಿ ನಿಗದಿಪಡಿಸಿರುವಂತೆ 6 ತಿಂಗಳಲ್ಲಿ ನ್ಯಾಯಮಂಡಳಿ ನಿಷೇಧ ಸರಿಯೋ, ತಪ್ಪೋ ಎಂದು ತೀರ್ಮಾನಿಸಬೇಕಾಗುತ್ತದೆ. ನಿಷೇಧಕ್ಕೆ ಸಕಾರಣಗಳಿಲ್ಲವೆಂದು ಕಂಡುಬಂದರೆ ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸುವ ಅಧಿಕಾರ ಯುಎಪಿಎ ನ್ಯಾಯಮಂಡಳಿಗೆ ಇದೆ. ಒಂದು ವೇಳೆ ಗೃಹ ಸಚಿವಾಲಯ ಆದೇಶ ಸರಿಯಾಗಿದೆ ಎಂದು ಆದೇಶ ನೀಡಿದರೆ ಮುಂದಿನ 5 ವರ್ಷಗಳ ಕಾಲ ಪಿಎಫ್‌ಐ ನಿಷೇಧ ಮುಂದುವರಿಯಲಿದೆ. ಇನ್ನು ಯುಎಪಿಎ ಅಡಿ ಪಿಎಫ್‌ಐ ನಿಷೇಧವಾದ ಕೂಡಲೇ ಅದರ ಜೊತೆ ಸಂಪರ್ಕ ಹೊಂದುವುದು ನಿಷಿದ್ಧವಾಗಲಿದೆ. ಸೆಕ್ಷನ್ 7 ರ ಅಡಿ ಸಂಘಟನೆಯ ಹಣವನ್ನು ವರ್ಗಾವಣೆ ಮಾಡುವುದಾಗಲೀ, ಬಳಸಿಕೊಳ್ಳುವುದಾಗಲೀ ನಿಷಿದ್ಧವಾಗಲಿದೆ. ಸಂಘಟನೆಯ ಹಣದ ಮೂಲದ ತನಿಖೆ ನಡೆಸಲು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ದೊರೆಯಲಿದೆ. ಅದೇ ರೀತಿ ಸೆಕ್ಷನ್ 8 ರ ಅಡಿಯಲ್ಲಿ ಜಿಲ್ಲಾ ದಂಡಾಧಿಕಾರಿ ಅಥವಾ ಅವರಿಂದ ನಿಯೋಜಿತ ಅಧಿಕಾರಿ ನಿಷೇಧಿತ ಸಂಘಟನೆಯ ಎಲ್ಲಾ ಸ್ಥಳಗಳನ್ನು ಮಹಜರು ಮಾಡಿ ವಸ್ತುಗಳ ಪಟ್ಟಿ ತಯಾರಿಸಬೇಕು. ಅಂತಹ ಸ್ಥಳಗಳನ್ನು ಪಟ್ಟಿ ಮಾಡಿ ಅಧಿಸೂಚನೆ ಹೊರಡಿಸಬೇಕು. ಸಂಘಟನೆಗೆ ಬಳಸುತ್ತಿದ್ದ ವಸ್ತುಗಳನ್ನು ಮುಂದಿನ ಆದೇಶದವರೆಗೂ ಬಳಸದಂತೆ ನಿರ್ಬಂಧ ಹೇರಬಹುದು. ಆ ಪ್ರದೇಶಕ್ಕೆ 3ನೇ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧವನ್ನೂ ಹೇರಬಹುದು.

ಯುಎಪಿ ಕಾಯ್ದೆಯ ಸೆಕ್ಷನ್ 10 ರಡಿ ನಿಷೇಧಿತ ಸಂಘಟನೆಯ ಸದಸ್ಯತ್ವ ಮುಂದುವರಿಸಿದರೆ, ಯಾವುದೇ ರೀತಿಯ ನೆರವು ನೀಡಿದರೆ, 2 ವರ್ಷದವರೆಗೆ ಶಿಕ್ಷೆಗೆ ಗುರಿಪಡಿಸಬಹುದು. ಇನ್ನು ಸಂಘಟನೆಯ ಸದಸ್ಯನಾಗಿ ಮಾರಕ ಶಸ್ತ್ರಾಸ್ತ್ರಗಳಿಂದ ಪ್ರಾಣಹಾನಿ ಮಾಡಿದರೆ ಜೀವಾವಧಿ ಅಥವಾ ಮರಣದಂಡನೆಗೂ ಗುರಿಪಡಿಸಬಹುದು. ಸೆಕ್ಷನ್ 11 ರಡಿ ನಿಷೇಧಿತ ಸಂಘಟನೆಗೆ ನೆರವು ನೀಡದಂತೆ ನಿರ್ಬಂಧ ಹೇರಿದರೂ ಹಣಕಾಸಿನ ನೆರವು ಮುಂದುವರಿಸಿದರೆ 3 ವರ್ಷ ಶಿಕ್ಷೆಗೆ ಗುರಿಯಾಗಬೇಕಾಗಲಿದೆ. ಹೀಗಾಗಿ ಯುಎಪಿ ಕಾಯ್ದೆ ಉಲ್ಲಂಘಿಸಿ ದುಷ್ಕೃತ್ಯ ಎಸಗುವುದು, ಅಥವಾ ಅದಕ್ಕೆ ನೆರವು ನೀಡುವುದು ದಂಡನಾರ್ಹ ಅಪರಾಧವಾಗಲಿದೆ.

ರಮೇಶ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada