ಸರ್ಕಾರ ₹20-30ಗೆ ಸ್ಯಾನಿಟರಿ ಪ್ಯಾಡ್ ನೀಡಬಹುದೇ ಎಂದ ವಿದ್ಯಾರ್ಥಿನಿಯ ಪ್ರಶ್ನೆಗೆ ನಾಳೆ ಕಾಂಡೋಮ್ ಕೂಡಾ ಕೇಳುವಿರಿ ಎಂದ ಬಿಹಾರದ ಅಧಿಕಾರಿ
ನಮ್ಮ ಜನರ ಮತದಿಂದಲೇ ಸರ್ಕಾರ ಆಗಿರುವುದು ಎಂದು ವಿದ್ಯಾರ್ಥಿನಿ ನೆನಪಿಸಿದಾಗ, ಇದು ಮೂರ್ಖತನದ ಪರಮಾವಧಿ. ಹಾಗಾದರೆ ವೋಟ್ ಮಾಡಬೇಡಿ. ಪಾಕಿಸ್ತಾನ ಆಗಿಬಿಡಿ. ನೀವು ಹಣ ಮತ್ತು ಸೇವೆಗಾಗಿ ವೋಟ್ ಮಾಡುತ್ತೀರಾ
ಪಟನಾ: ಬಿಹಾರದ (Bihar) ಶಾಲಾ ವಿದ್ಯಾರ್ಥಿನಿಯೊಬ್ಬಳು ಸರ್ಕಾರವು ₹ 20-30 ಕ್ಕೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದೇ? ಎಂದು ಕೇಳಿದ್ದಾಳೆ. ನಾಳೆ ನೀವು ಹೇಳುತ್ತೀರಿ ಸರ್ಕಾರವು ಜೀನ್ಸ್ ಕೂಡಾ ಕೊಡಬಹುದಲ್ಲವೇ? ಅದರ ನಂತರ ಕೆಲವು ಸುಂದರವಾದ ಬೂಟುಗಳನ್ನು ಕೇಳುತ್ತೀರಿ. ಕೊನೆಗೆ ಸರ್ಕಾರವು ನಿಮಗೆ ಕುಟುಂಬ ಯೋಜನೆ ವಿಧಾನಕ್ಕಾಗಿ ಕಾಂಡೋಮ್ ಕೂಡಾ ನೀಡಬೇಕು ಎಂದು ನಿರೀಕ್ಷಿಸುತ್ತೀರಿ ಎಂದು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ (Harjot Kaur Bhamra) ಖಾರವಾಗಿ ಉತ್ತರಿಸಿದ್ದಾರೆ. ನಮ್ಮ ಜನರ ಮತದಿಂದಲೇ ಸರ್ಕಾರ ಆಗಿರುವುದು ಎಂದು ವಿದ್ಯಾರ್ಥಿನಿ ನೆನಪಿಸಿದಾಗ, ಇದು ಮೂರ್ಖತನದ ಪರಮಾವಧಿ. ಹಾಗಾದರೆ ವೋಟ್ ಮಾಡಬೇಡಿ. ಪಾಕಿಸ್ತಾನ ಆಗಿಬಿಡಿ. ನೀವು ಹಣ ಮತ್ತು ಸೇವೆಗಾಗಿ ವೋಟ್ ಮಾಡುತ್ತೀರಾ ಎಂದು ಅಧಿಕಾರಿ ಕೇಳಿದ್ದಾರೆ. ಕೊಳಗೇರಿಯಿಂದ ಬಂದ ಹದಿಹರೆಯದ ವಿದ್ಯಾರ್ಥಿನಿ ಸಶಕ್ತ್ ಬೇಟಿ, ಸಮೃದ್ಧ್ ಬಿಹಾರ್ (ಸಶಕ್ತ ಹೆಣ್ಣು ಮಕ್ಕಳು, ಸಮೃದ್ಧ ಬಿಹಾರ) ಎಂಬ ವರ್ಕ್ ಶಾಪ್ನಲ್ಲಿ ನಡೆದ ಸಂವಾದದಲ್ಲಿ ಇದು ನಡೆದಿದೆ. ಈ ಯೋಜನೆಯ ಧ್ಯೇಯವಾಕ್ಯವು ಹೆಣ್ಣುಮಕ್ಕಳ ಮೌಲ್ಯವನ್ನು ಹೆಚ್ಚಿಸುವ ಕಡೆಗೆ ಎಂಬುದಾಗಿದ.ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಪೊರೇಷನ್ ನ ಮುಖ್ಯಸ್ಥರಾಗಿದ್ದಾರೆ ಹರ್ಜೋತ್ ಕೌರ ಭಮ್ರಾ. ಯುನಿಸೆಫ್ ಮತ್ತು ಇತರ ಸಂಘಟನೆಗಳು ಬುಧವಾರ ನಡೆದ ಈ ಕಾರ್ಯಕ್ರಮವನ್ನು ಆಯೋಜಿಸಿವೆ.
9 ಮತ್ತು 10ನೇತರಗತಿಯ ವಿದ್ಯಾರ್ಥಿನಿಯರು ಭಾಗವಹಿಸಿರುವ ಈ ಕಾರ್ಯಕ್ರಮದಲ್ಲಿ ಕೋಪದಿಂದ ಪ್ರತಿಕ್ರಿಯಿಸಿದ್ದ ಕೌರ್ ಆನಂತರ, ನೀವು ಸರ್ಕಾರದಿಂದಲೇ ಎಲ್ಲವೂ ಸಿಗಬೇಕು ಎಂದು ಬಯಸುವುದೇಕೆ. ನೀವು ಮಾಡುತ್ತಿರುವ ಯೋಚನೆ ಸರಿಯಲ್ಲ. ನೀವಾಗಿಯೇ ಮಾಡಿ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ, ವಿದ್ಯಾರ್ಥಿನಿಯರು ಕೇಳಿದ ಇತರಪ್ರಶ್ನೆಗಳಿಗೂ ಅವರು ಮೊಂಡುವಾದದಿಂದಲೇ ಪ್ರತಿಕ್ರಿಯಿಸಿದ್ದಾರೆ. ನಮ್ಮ ಶಾಲೆಯಲ್ಲಿ ಹೆಣ್ಮಕ್ಕಳ ಶೌಚಾಲಯ ದುಸ್ಥಿತಿಯಲ್ಲಿದೆ. ಅಲ್ಲಿಗೆ ಗಂಡು ಮಕ್ಕಳೂ ಬರುತ್ತಾರೆ ಎಂದು ಹೇಳಿದಾಗ, ನೀನೇ ಹೇಳು, ನಿಮ್ಮನೆಯಲ್ಲಿ ಬೇರೆ ಬೇರೆ ಟಾಯ್ಲೆಟ್ ಇದೆಯಾ?, ನೀವು ಬೇರೆ ಬೇರೆ ಸ್ಥಳಗಳಲ್ಲಿ ಹಲವು ಸಂಗತಿಗಳನ್ನು ಕೇಳುತ್ತಿದ್ದರೆ ಇದೆಲ್ಲ ಹೇಗೆ ಸಾಧ್ಯ? ಎಂದು ಕೌರ್ ಕೇಳಿದ್ದಾರೆ.
ಪಾಕಿಸ್ತಾನ ಆಗಿಬಿಡಿ ಎಂದು ಕೌರ್ ಹೇಳಿದ್ದಕ್ಕೆ ವಿದ್ಯಾರ್ಥಿನಿ, ನಾನು ಭಾರತೀಯಳು, ನಾನ್ಯಾಕೆ ಆಗಬೇಕು ಎಂದು ತಿರುಗಿ ಕೇಳಿದ್ದಾಳೆ.
ಸರ್ಕಾರದ ಯೋಜನೆಗಳು ಏಕೆ ಅಸ್ತಿತ್ವದಲ್ಲಿವೆ ಎಂದು ಸಭಿಕರೊಬ್ಬರು ವ್ಯಂಗ್ಯವಾಗಿ ಕೇಳಿದಾಗ ಭಮ್ರಾ ಅವರು ಆಲೋಚನೆಯನ್ನು ಬದಲಾಯಿಸುವ ಅವಶ್ಯಕತೆಯಿದೆ ಎಂದಿದ್ದಾರೆ. ನಂತರ ಮತ್ತೆ ವೇದಿಕೆಯ ಮೇಲಿರುವ ಹುಡುಗಿಯರತ್ತ ತಿರುಗಿದ ಅವರು “ಭವಿಷ್ಯದಲ್ಲಿ ನಿಮ್ಮನ್ನು ಎಲ್ಲಿ ನೋಡಬೇಕೆಂದು ನೀವು ನಿರ್ಧರಿಸಬೇಕು. ಈ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಸಾಧ್ಯವಿಲ್ಲ. ನೀನು ಎಲ್ಲಿ ಕುಳಿತಿರುವೆಯೋ ಅಲ್ಲಿ ಕುಳಿತಿರಬೇಕೋ ಅಥವಾ ನಾನು ಕುಳಿತಿರುವ ಬದಿಯಲ್ಲಿ ಕುಳಿತುಕೊಳ್ಳಲು ಬಯಸುತ್ತೀಯಾ? ಎಂದು ಅವರು ಕೇಳಿದ್ದಾರೆ.
ಸಂವಾದಗಳನ್ನು ತೋರಿಸುವ ವಿಡಿಯೊವನ್ನು ತೋರಿಸಿ ಇದು ತಪ್ಪಲ್ಲವೇ ಎಂದು ಕೇಳಿದಾಗ ಭಮ್ರಾ ಅವರು ಇದು ಸುಳ್ಳು, ದುರುದ್ದೇಶಪೂರಿತ ಮತ್ತು ತಪ್ಪು ವರದಿ ಎಂದಿದ್ದಾರೆ. ನಾನು ಮಹಿಳಾ ಹಕ್ಕುಗಳು ಮತ್ತು ಸಬಲೀಕರಣದ ಚಾಂಪಿಯನ್ ಎಂದು ಹೆಸರುವಾಸಿಯಾಗಿದ್ದೇನೆ. ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಈಗ ಇಂತಹ ಕೀಳು ಪ್ರಯತ್ನಗಳನ್ನು ಆಶ್ರಯಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಭಮ್ರಾ ಹೇಳಿದ್ದಾರೆ.
Published On - 8:52 pm, Wed, 28 September 22