ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

| Updated By: ganapathi bhat

Updated on: Apr 01, 2022 | 3:25 PM

ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಸರ್ಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತಾರೆ. ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಡಾ. ಶಿವಕುಮಾರ ಸ್ವಾಮೀಜಿ
Follow us on

ಬೆಂಗಳೂರು: ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಲಾಗಿದೆ. ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಪ್ರಧಾನಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಲಾಗಿದೆ. ರೆಹಾನ್ ಖಾನ್ ಎಂಬುವರ PILಅನ್ನು ಹೈಕೋರ್ಟ್ ವಜಾ ಮಾಡಿದೆ. ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ರಾಷ್ಟ್ರಪತಿಗಳು ಸರ್ಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತಾರೆ. ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಜಾಕ್‌ವೆಲ್ ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್ ನಕಾರ

ಕಾಳಿ ನದಿಯಲ್ಲಿ ಜಾಕ್‌ವೆಲ್ ನಿರ್ಮಾಣ‌ ಪ್ರಶ್ನಿಸಿದ್ದ ಪಿಐಎಲ್ ವಜಾಗೊಳಿಸಲಾಗಿದೆ. ಜಾಕ್‌ವೆಲ್ ಕಾಮಗಾರಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಕುಡಿಯುವ ನೀರು ಒದಗಿಸಲು ಜಾಕ್‌ವೆಲ್ ನಿರ್ಮಾಣ ಮಾಡುವ ಬಗ್ಗೆ ತಿಳಿಸಲಾಗಿತ್ತು. ಹತ್ತಿರದ ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ನಿರ್ಮಾಣ ಯೋಜನೆ ಹಾಕಲಾಗಿತ್ತು. ಸಾರ್ವಜನಿಕ ಉದ್ದೇಶದ ಕಾಮಗಾರಿಗೆ ತಡೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಅಗತ್ಯ ಅನುಮತಿ ಪಡೆದು ಯೋಜನೆ ರೂಪಿಸಲು ಸೂಚನೆ ಕೊಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ. ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ನೀಡಿ ಎಂದು ಅರ್ಜಿದಾರರಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಮನವಿ ಪರಿಗಣಿಸಿ ತೀರ್ಮಾನಿಸಲು ಇಲಾಖೆಗೆ ಸೂಚನೆ ಕೊಡಲಾಗಿದೆ. ಈ ಬಗ್ಗೆ ಕಾಳಿ ಬ್ರಿಗೇಡ್ ಸಂಘಟನೆ ಹೈಕೋರ್ಟ್‌ಗೆ PIL ಸಲ್ಲಿಸಿತ್ತು.

ಡಾ. ಶಿವಕುಮಾರ ಸ್ವಾಮೀಜಿ 115ನೇ ಜಯಂತೋತ್ಸವ ಕಾರ್ಯಕ್ರಮ

ಇತ್ತ, ಡಾ. ಶಿವಕುಮಾರ ಸ್ವಾಮೀಜಿ 115ನೇ ಜಯಂತೋತ್ಸವ ಕಾರ್ಯಕ್ರಮ ಸಿದ್ದಗಂಗಾ ಮಠದ ಆವರಣದಲ್ಲಿ ಇಂದು (ಏಪ್ರಿಲ್ 1) ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ ಆಗಲಿದ್ದಾರೆ. ಅಮಿತ್ ಶಾ ಬೆಳಗ್ಗೆ 10.30 ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ಪ್ರಯಾಣ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದು ಶಿವಕುಮಾರಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿ ಆಗಲಿದ್ದಾರೆ. ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಭಗವಂತ್ ಖೂಬಾ, ಸಚಿವರು, ಸಂಸದರು ಸೇರಿದಂತೆ ಹಲವು ಗಣ್ಯರು ಭಾಗಿ ಆಗಲಿದ್ದಾರೆ. ವೇದಿಕೆ ಮೇಲೆ ಕೂರಲು 22 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಸಿದ್ದಗಂಗಾ ಮಠದ ಆವರಣದಲ್ಲಿ ಇಂದು ನಡೆಯವ ಅದ್ಧೂರಿ ಕಾರ್ಯಕ್ರಮಕ್ಕೆ ಮಠದಲ್ಲಿ ‘ನಡೆದಾಡುವ ಬಸವ ಭಾರತ ವೇದಿಕೆ’ ನಿರ್ಮಾಣ ಮಾಡಲಾಗಿದೆ. ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ವೇದಿಕೆ ಮುಂಭಾಗ ಒಟ್ಟು 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.

ಸ್ವಾಮೀಜಿ ಕುಳಿತುಕೊಳ್ಳುತ್ತಿದ್ದ ಪೀಠದ ಸ್ಥಳ ವಿವಿಧ ಹೂವುಗಳಿಂದ ಅಲಂಕಾರ

ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿ ಹಾಗೂ ಗುರುವಂದನ ಕಾರ್ಯಕ್ರಮ ಹಿನ್ನೆಲೆ ಸ್ವಾಮೀಜಿ ಕುಳಿತುಕೊಳ್ಳುತ್ತಿದ್ದ ಪೀಠದ ಸ್ಥಳವನ್ನ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಸ್ವಾಮೀಜಿ ಪೀಠದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದರು. ಇದೀಗ ಪೀಠದ ಬಳಿ ಸ್ವಾಮೀಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಬೆಳಗ್ಗಿನಿಂದಲೇ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ.

4 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ; ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟೋಪಚಾರ ವ್ಯವಸ್ಥೆ

ಸಿದ್ದಗಂಗಾ ಮಠದ ಗುರುವಂದನಾ ಕಾರ್ಯಕ್ರಮದಲ್ಲಿ 4 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 8 ಕಡೆ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಕೆಂಪಹೊನ್ನಯ್ಯ ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಿದ್ದಾರ್ಥ ಅತಿಥಿ ಗೃಹ, ಸೌದೆ ಕೊಪ್ಪಲು, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದರ್ಶನದ ಊಟದ ಮನೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ: ವಾಹನ ಸಂಚಾರ, ಪಾರ್ಕಿಂಗ್, ಊಟೋಪಚಾರ ವ್ಯವಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಡಾ.ಶಿವಕುಮಾರ ಶ್ರೀಗಳ 115ನೇ ಜಯಂತಿ ಹಿನ್ನೆಲೆ; ಗುರುವಂದನಾ ಕಾರ್ಯಕ್ರಮದಲ್ಲಿ 4 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ

Published On - 11:29 am, Fri, 1 April 22