ಬೆಂಗಳೂರು: ಬೆಂಗಳೂರು–ತುಮಕೂರಿನ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ದೆಹಲಿಯಿಂದ ದೇವನಹಳ್ಳಿ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ನಂತರ ವಿವಿಧ ಕಾರ್ಯಕ್ರಮಗಳಿಗೆ ತೆರಳಲಿದ್ದಾರೆ. ಮೊದಲಿಗೆ ನಾಳೆ ಬೆಳಗ್ಗೆ 11.30 ಕ್ಕೆ ಪ್ರಧಾನಿ ಬಿಐಇಸಿ (BIEC)ಯಲ್ಲಿ ಇಂಧನ ಸಪ್ತಾಹ ಉದ್ಘಾಟನೆಯನ್ನು ಪೂರ್ಣ ಗೊಳಿಸಲಿದ್ದಾರೆ. ಬೆಂಗಳೂರು ಉತ್ತರ ವಲಯದ ಮಾದವಾರ ಬಳಿಯಿರುವ ಬಿಐಇಸಿಯಲ್ಲಿ ಜಾಗತಿಕ ತೈಲ, ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆ ನಡೆಯಲಿದೆ. ಈ ಕಾರ್ಯಕ್ರಮದ ಸಂವಾದದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಾರೆ.
ನಂತರ ನರೇಂದ್ರ ಮೋದಿ ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದಾರೆ. ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳು, ಸಾಗಣೆ ಜಾಥಾ ಇದೆಲ್ಲದರ ಬಳಿಕ ಶೀಷರಹಿತ ಉಪಕ್ರಮದಡಿ ಸಮವಸ್ತ್ರವನ್ನ ಮೋದಿ ಬಿಡುಗಡೆ ಮಾಡುತ್ತಾರೆ. ನಂತರ ಭಾರತೀಯ ತೈಲ ನಿಮಗದ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ ಕುಕ್ ಟಾಪ್ ಮಾದರಿಯನ್ನು ಲೋಕಾರ್ಪಣೆಗೊಳಿಸಿ ನಂತರ ಬಿಐಇಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ: ಸೋಮವಾರ ಪ್ರಧಾನಿಯಿಂದ ಉದ್ಘಾಟನೆ
ನಂತರ ನಾಳೆ ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ಬೆಂಗಳೂರಿನಿಂದ ತುಮಕೂರು ಜಿಲ್ಲೆಯ ಕಾರ್ಯಕ್ರಮಗಳಿಗೆ ತೆರಳಲಿದ್ದಾರೆ. ತುಮಕೂರು ಕಾಯಕ್ರಮದ ವೇಳಾಪಟ್ಟಿಯ ಪ್ರಕಾರ ಮಧ್ಯಾಹ್ನ 3.30ಕ್ಕೆ ಹೆಚ್ಎಎಲ್ (HAL) ಹೆಲಿಕಾಪ್ಟರ್ ಕಾರ್ಖಾನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲೂ ಪ್ರಧಾನಿ ಮೋದಿ ಭಾಗಿ. ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿಯ ಈ ಹೆಲಿಕಾಪ್ಟರ್ ಕಾರ್ಖಾನೆಯ ಶಿಲಾನ್ಯಾಸವನ್ನ 2016 ರಲ್ಲಿ ಮೋದಿ ನೆರವೇರಿಸಿದ್ದರು.
ಏಷ್ಯಾದ ಅತಿ ದೊಡ್ಡ ಹಸಿರು ವಲಯ ಸಮರ್ಪಿತ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯವಿರುವ ಕಾರ್ಖಾನೆಯಿದಾಗಿದೆ. ಆರಂಭಿಕವಾಗಿ ಹಗುರ ಬಳಕೆಯ ಹೆಚ್ಎಎಲ್ ಹೆಲಿಕಾಪ್ಟರ್ಗಳ ಉತ್ಪಾದನೆ ಮಾಡುತ್ತಿತ್ತು. ದೇಶೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ಶ್ರೇಣಿಯಿದಾಗಿದೆ. ಸಿಂಗಲ್ ಇಂಜಿನ್ ವಿವಿಧೋದ್ದೇಶ ಉಪಯುಕ್ತತೆಯ ಹೆಲಿಕಾಪ್ಟರ್ ಫ್ಯಾಕ್ಟರಿ ಎಂಬ ಹೆಗ್ಗಳಿಕೆ ಹೆಚ್ಎಎಲ್ ನದ್ದು.
ಮುಂದಿನ 20 ವರ್ಷದಲ್ಲಿ 3-15 ಟನ್ ಸಾಮರ್ಥ್ಯದ ಹೆಲಿಕಾಪ್ಟರ್ ಉತ್ಪಾದನೆ ಮಾಡುವ ಯೋಜನೆ ಹೊಂದಿದೆ. ಸುಮಾರು 1,000ಕ್ಕೂ ಹೆಚ್ಚು ಹೆಲಿಕಾಪ್ಟರ್ ಉತ್ಪಾದನಾ ಗುರಿ ಹೆಚ್ಎಎಲ್ ನದ್ದಾಗಿದೆ. ಕಾರ್ಖಾನೆಯಲ್ಲಿ 6,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶವಿದೆ.
ಹೆಚ್ಎಎಲ್ ಕಾರ್ಖಾನೆ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ತುಮಕೂರಿನಲ್ಲಿ ಮೂರು ಹಂತಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಯೋಜನೆ ನಡೆದಿದೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಾಗಲಿದೆ. ಸುಮಾರು 8,484 ಎಕರೆ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಅಭಿವೃದ್ಧಿ ಮಾಡುವ ಯೋಜನೆಯಿದೆ.
ಇದನ್ನೂ ಓದಿ: ಫೆ.6 ರಂದು ತುಮಕೂರಿಗೆ ಮೋದಿ: HAL ಹೆಲಿಕಾಪ್ಟರ್ ಕಾರ್ಖಾನೆ ಲೋಕಾರ್ಪಣೆ; ಬಿಗಿ ಪೊಲೀಸ್ ಬಂದೋಬಸ್ತ, 300 KSRTC ಬಸ್ ಬುಕ್
ಕೈಗಾರಿಕಾ ಪ್ರದೇಶದ ಶಿಲಾನ್ಯಾಸದ ಬಳಿಕ 430 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವ ಜಲಜೀವನ್ ಅಭಿಯಾನದ ಯೋಜನೆಗಳಿಗೆ ನಾಳೆ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ, 115 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಕಾಮಗಾರಿ ಈ ಯೋಜನೆಯಡಿ ಬರುತ್ತದೆ.
ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿ ನಾಳೆ ಸಂಜೆ 4.45ಕ್ಕೆ ತುಮಕೂರಿನಿಂದ ಬೆಂಗಳೂರಿಗೆ ಬಂದು, ಸಂಜೆ 5.20ಕ್ಕೆ ಬೆಂಗಳೂರಿನಿಂದ ದೆಹಲಿಗೆ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಾರೆ.
Published On - 2:37 pm, Sun, 5 February 23