ಬೆಂಗಳೂರು, ಜೂನ್ 30: ಕರ್ನಾಟಕ ರಾಜಧಾನಿ ನಗರಿಯ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ವಾಕಿಂಗ್ ಪ್ರಿಯರಿಗೆ ಬಹಳ ಇಷ್ಟವಾದ ಜಾಗ. ಇಲ್ಲಿ ವಾರಾಂತ್ಯದಲ್ಲಿ, ಅಂದರೆ ಭಾನುವಾರಗಳಲ್ಲಂದು ಸಂಸ್ಕೃತ ಸಂವಾದ ಕಾರ್ಯಕ್ರಮ ನಡೆಯುತ್ತದೆ. ವೀಕೆಂಡ್ ಸಂಸ್ಕೃತ ಎಂದೇ ಜನಪ್ರಿಯವಾದ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಬೆಂಗಳೂರಿಗರು ಭಾನುವಾರ ಕಬ್ಬನ್ ಪಾರ್ಕ್ನಲ್ಲಿ ಸೇರಿ ಸಂಸ್ಕೃತದಲ್ಲೇ ಸಂವಾದ ನಡೆಸುತ್ತಾರೆ. ಸಂಸ್ಕೃತದಲ್ಲೇ ಮಾತುಕತೆ, ಸಂವಾದ ನಡೆಯುತ್ತದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ 111ನೇ ಎಪಿಸೋಡ್ನ ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಆಲ್ ಇಂಡಿಯಾ ರೇಡಿಯೋದಲ್ಲಿ ಕಳೆದ 50 ವರ್ಷಗಳಿಂದ ಸಂಸ್ಕೃತ ವಾರ್ತೆ ಪ್ರಸಾರವಾಗುತ್ತಿದೆ. ಈ ಐವತ್ತು ವರ್ಷದ ಮೈಲಿಗಲ್ಲು ಮುಟ್ಟಿದ ಸಂದರ್ಭವನ್ನು ನರೇಂದ್ರ ಮೋದಿ ಸ್ಮರಿಸುತ್ತಾ, ಬೆಂಗಳೂರಿನ ಕಬ್ಬನ್ ಪಾರ್ಕ್ನ ವೀಕೆಂಡ್ ಸಂಸ್ಕೃತ ಕಾರ್ಯಕ್ರಮವನ್ನೂ ಪ್ರಸ್ತಾಪಿಸಿ ಮೆಚ್ಚಿಕೊಂಡಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ವಾರಾಂತ್ಯಗಳಲ್ಲಿ ನಡೆಯುವ ಸಂಸ್ಕೃತ ಸಂವಾದ ಕಾರ್ಯಕ್ರಮಗಳ ರೂವಾರಿ 23 ವರ್ಷದ ಯುವತಿ ಸಮಷ್ಠಿ ಗುಬ್ಬಿ. ಇವರ ಆನ್ಲೈನ್ ಪ್ರೊಡಕ್ಷನ್ ಕಂಪನಿಯಾದ ‘ಸ್ಥಾಯಿ’ ಮೂಲಕ ಹಲವು ಸಂಸ್ಕೃತ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸಂಸ್ಕೃತ ಕಲಿಯಲು ಆಸಕ್ತರಾಗಿರುವವರಿಗೆ ಆನ್ಲೈನ್ ಕ್ಲಾಸ್ಗಳನ್ನೂ ಇವರು ನಡೆಸುತ್ತಾರೆ.
ಇದನ್ನೂ ಓದಿ: Mann Ki Baat: ಅಮ್ಮನ ಹೆಸರಲ್ಲಿ ಗಿಡ ನೆಡುವ ಅಭಿಯಾನಕ್ಕೆ ಮನ್ ಕೀ ಬಾತ್ನಲ್ಲಿ ಕರೆ ನೀಡಿದ ಪ್ರಧಾನಿ ಮೋದಿ
ಕಬ್ಬನ್ ಪಾರ್ಕ್ನಲ್ಲಿ ವಾರಾಂತ್ಯದಲ್ಲಿ ಅಂದರೆ ಭಾನುವಾರಗಳಂದು ಸಂಸ್ಕೃತ ಶಿಬಿರಗಳನ್ನು ನಡೆಸುತ್ತಾರೆ. ಇದು ಕಿಂ ಭೋ ಎಂದೇ ಜನಪ್ರಿಯವಾಗಿದೆ. ಕಿಂ ಭೋ ಎಂದರೆ ಸಂಸ್ಕೃತದಲ್ಲಿ ಏನ್ ಸಮಾಚಾರ ಎಂದು. ಭಾನುವಾರ ಬೆಳಗ್ಗೆ 6:45ಕ್ಕೆ ಆರಂಭವಾಗುತ್ತದೆ. ಸಂಸ್ಕೃತ ಕಲಿಕೆ, ಸಂವಾದ, ಹಾಡು, ಆಟ, ನಲಿ ಕಲಿ ಇತ್ಯಾದಿ ಎಲ್ಲವೂ ಇರುತ್ತದೆ.
ಸಂಸ್ಕೃತ ವ್ಯಾಕರಣದಲ್ಲಿ ಎಂಎ ಮಾಡಿರುವ 23 ವರ್ಷದ ಸಮಷ್ಠಿ ಗುಬ್ಬಿ ಅವರು ಸ್ಥಾಯಿ ವತಿಯಿಂದ ಸಂಸ್ಕೃತ ಆಸಕ್ತರ ವಾಟ್ಸಾಪ್ ಗ್ರೂಪ್ ರಚಿಸಿ ಅದರ ಮೂಲಕ ಕಾರ್ಯಕ್ರಮಗಳ ಮಾಹಿತಿ, ಅಪ್ಡೇಟ್ ಹಂಚಿಕೊಳ್ಳುತ್ತಾರೆ. ಇವರ ಕಿಂ ಭೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹಿರಿಯ ವಯಸ್ಸಿಗಿಂತ 19ರಿಂದ 32 ವರ್ಷದ ವಯೋಮಾನದವರು ಎಂಬುದು ಗಮನಾರ್ಹ. ಇಂದಿನ ಯುವ ಪೀಳಿಗೆಯವರಲ್ಲಿ ಸಂಸ್ಕೃತದ ಬಗ್ಗೆ ಆಸಕ್ತಿ ಹೆಚ್ಚಾಗಿರುವುದು ಸ್ವತಃ ಸಮಷ್ಠಿ ಅವರಿಗೇ ಅಚ್ಚರಿ ತಂದಿದೆ.
ಇನ್ನಷ್ಟು ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Sun, 30 June 24