ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು: ಗೋವಿಂದರಾಜು ಪ್ರಶ್ನೆಗೆ ಆರಗ ಜ್ಞಾನೇಂದ್ರ ಉತ್ತರ

ರಾಜ್ಯದಲ್ಲಿ ಪ್ರತಿವರ್ಷ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಎಂಎಲ್​ಸಿ ಗೋವಿಂದರಾಜು ಅವರು ವಿಧಾನಪರಿಷತ್​ನಲ್ಲಿ ಕಳವಳ ವ್ಯಕ್ತಪಡಿಸಿದರು. ಈ ಹಿಂದೆ ಪೋಕ್ಸೋ ಪ್ರಕರಣಗಳು ರಿಪೋರ್ಟ್ ಆಗುತ್ತಿರಲಿಲ್ಲ. ಈಗ ದೌಜ್ಯಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಉತ್ತರಿಸಿದರು.

ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಹೆಚ್ಚುತ್ತಿರುವ ಪೋಕ್ಸೋ ಪ್ರಕರಣಗಳು: ಗೋವಿಂದರಾಜು ಪ್ರಶ್ನೆಗೆ ಆರಗ ಜ್ಞಾನೇಂದ್ರ ಉತ್ತರ
ಆರಗ ಜ್ಞಾನೇಂದ್ರ
Follow us
Rakesh Nayak Manchi
|

Updated on:Feb 20, 2023 | 4:13 PM

ಬೆಂಗಳೂರು: ರಾಜ್ಯದಲ್ಲಿ ಪ್ರತಿವರ್ಷ ಪೋಕ್ಸೋ ಪ್ರಕರಣಗಳು (POCSO Cases In Karnataka) ಹೆಚ್ಚುತ್ತಿರುವ ಬಗ್ಗೆ ವಿಧಾನಪರಿಷತ್​ನಲ್ಲಿ ಪ್ರಶ್ನಿಸಿದ ಎಂಎಲ್​ಸಿ ಗೋವಿಂದರಾಜು (Govindaraju) ಅವರು ಕಳವಳ ವ್ಯಕ್ತಪಡಿಸಿದರು. 2022ರಲ್ಲಿ 3097 ಪೋಕ್ಸೋ ಪ್ರಕರಣಗಳು, 2021ರಲ್ಲಿ 2863 ಪೋಕ್ಸೋ ಕೇಸ್, 2020ರಲ್ಲಿ 2,166 ಪ್ರಕರಣಗಳು ದಾಖಲಾಗಿವೆ ಎಂದರು. ಇದಕ್ಕೆ ಉತ್ತರಿಸಿದ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ (Araga Jnanendra), ಈ ಮೊದಲು ಪೋಕ್ಸೋ ಪ್ರಕರಣಗಳು ಠಾಣೆಗಳಲ್ಲಿ ರಿಪೋರ್ಟ್ ಆಗುತ್ತಿರಲಿಲ್ಲ. ಇದೀಗ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಿಂದಾಗಿ ತಮ್ಮ ವಿರುದ್ಧ ನಡೆದ ದೌರ್ಜನ್ಯವನ್ನು ಮುಕ್ತವಾಗಿ ಬಂದು ಠಾಣೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದ ಪ್ರತಿ ಪೊಲೀಸ್​ ಠಾಣೆಗಳಲ್ಲೂ ಹೆಲ್ಪ್​ ಡೆಸ್ಕ್ ಮಾಡಿದ್ದೇವೆ. ಇದರಿಂದಾಗಿ ಸಂತ್ರಸ್ತರು ಮುಕ್ತವಾಗಿ ಠಾಣೆಗೆ ಬಂದು ಹೇಳಿಕೊಳ್ಳುವುದು ಹೆಚ್ಚಾಗುತ್ತಾ ಇದೆ. ಮಕ್ಕಳ ಸುರಕ್ಷತೆಗಾಗಿ ರಾಜ್ಯದಲ್ಲಿ ಪಿಂಕ್ ಹೊಯ್ಸಳ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರು ನಗರದಲ್ಲಿ ನಿರ್ಭಯ ನಿಧಿಯಿಂದ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ 4 ಸಾವಿರ ಸಿಸಿಟಿವಿ ಅಳವಡಿಸಿದ್ದೇವೆ. ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣ ನಡೆದ 60 ದಿನಗಳ ಒಳಗಾಗಿ ಚಾರ್ಜ್​ಶೀಟ್ ಹಾಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷವಾದ ಆದ್ಯತೆ ನೀಡುತ್ತಿದೆ ಎಂದು ಆರಗ ಜ್ಞಾನೇಂದ್ರ ಅವರು ವಿಧಾನಪರಿಷತ್​ನಲ್ಲಿ ಹೇಳಿದರು.

2012ರಲ್ಲಿ ಪೋಕ್ಸೋ ಕಾಯ್ದೆಯನ್ನು ಜಾರಿಗೊಳಿಸಿರುವುದಾಗಿನಿಂದ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರು ದೂರು ಕೊಡಲು ಮುಂದಾಗುತ್ತಿದ್ದಾರೆ. ಅದರಂತೆ ಕರ್ನಾಟಕವು ಕಳೆದ 8 ವರ್ಷಗಳಲ್ಲಿ ಮಕ್ಕಳ ಮೇಲಿನ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. 2013 ರಲ್ಲಿ ರಾಜ್ಯವು ಅಂತಹ 1,353 ಪ್ರಕರಣಗಳನ್ನು ವರದಿ ಮಾಡಿದರೆ, ಎಂಟು ವರ್ಷಗಳಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದಾಖಲೆಗಳು ಹೆಚ್ಚಿನ ಪ್ರಕರಣಗಳು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿವೆ ಎಂದು ತೋರಿಸುತ್ತವೆ.

ಇದನ್ನೂ ಓದಿ: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದವನಿಗೆ 20 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ

ಪೋಕ್ಸೋ ಕಾಯ್ದೆಯಡಿ ನೀಡಲಾಗುವ ಶಿಕ್ಷೆ: ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ -2012 ಹಾಗೂ ತಿದ್ದುಪಡಿ ಕಾಯ್ದೆ 2016 ರ ಅನ್ವಯ 14 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ಹಲ್ಲೆ ಹಾಗೂ ದೌರ್ಜನ್ಯಕ್ಕೆ ಕನಿಷ್ಠ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ, ಮರಣದಂಡನೆ ಮತ್ತು ದಂಡ ವಿಧಿಸಬಹುದಾಗಿದೆ. 16 ವರ್ಷದೊಳಗಿನ ಮಕ್ಕಳ ಮೇಲಿನ ಹಲ್ಲೆ, ದೌರ್ಜನ್ಯಕ್ಕೆ ಕನಿಷ್ಠ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ, ಮರಣ ದಂಡನೆ ಮತ್ತು ದಂಡ ವಿಧಿಸಬಹುದು.

ಲೈಂಗಿಕ ಹಲ್ಲೆ ನಡೆಸಿದರೆ 3-5 ವರ್ಷದವರೆಗೆ ಶಿಕ್ಷೆ ಮತ್ತು ದಂಡ, ಅಧಿಕಾರದಿಂದ ಪ್ರಭಾವ ಬೀರಿ ಲೈಂಗಿಕ ಹಲ್ಲೆ ನಡೆಸಿದರೆ 5-7 ವರ್ಷ ಶಿಕ್ಷೆ ಮತ್ತು ದಂಡ, ಲೈಂಗಿಕ ದೌರ್ಜನ್ಯಕ್ಕೆ 3 ವರ್ಷದವರೆಗೆ ಶಿಕ್ಷೆ ಮತ್ತು ದಂಡ, ಮಕ್ಕಳ ಅಶ್ಲೀಲ ಚಿತ್ರಗಳ ಬಳಕೆಗೆ ಮೊದಲ ಬಾರಿಗೆ 5 ವರ್ಷ, ಎರಡನೇ ಬಾರಿಗೆ 7 ವರ್ಷ ಶಿಕ್ಷೆಯೊಂದಿಗೆ ದಂಡ ವಿಧಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Mon, 20 February 23