ಪ್ರಶಾಂತಿ ಕುಟೀರಕ್ಕೆ ಸುವರ್ಣ ಸಂಭ್ರಮ: ಯೋಗ ಕ್ಷೇತ್ರದ ಐದು ದಶಕಗಳ ಪಯಣಕ್ಕೆ ಪ್ರಧಾನಿ ಮೋದಿ ಸಾಕ್ಷಿ

1975ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಪ್ರಶಾಂತಿ ಕುಟೀರವು ಯೋಗ, ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಒಟ್ಟುಗೂಡಿಸುವ ಪ್ರಯತ್ನದೊಂದಿಗೆ ಐದು ದಶಕಗಳ ಪಯಣ ಪೂರ್ಣಗೊಳಿಸಿದೆ. ಅದರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತಿ ಕುಟೀರದ ಹಿನ್ನೆಲೆ, ಇತಿಹಾಸ ಹಾಗೂ ಯೋಗ ಕ್ಷೇತ್ರದಲ್ಲಿನ ಕೊಡುಗೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪ್ರಶಾಂತಿ ಕುಟೀರಕ್ಕೆ ಸುವರ್ಣ ಸಂಭ್ರಮ: ಯೋಗ ಕ್ಷೇತ್ರದ ಐದು ದಶಕಗಳ ಪಯಣಕ್ಕೆ ಪ್ರಧಾನಿ ಮೋದಿ ಸಾಕ್ಷಿ
ಪ್ರಶಾಂತಿ ಕುಟೀರಕ್ಕೆ ಸುವರ್ಣ ಸಂಭ್ರಮದಲ್ಲಿ ಪ್ರಧಾನಿ ಮೋದಿ

Updated on: Nov 13, 2026 | 11:15 AM

ಬೆಂಗಳೂರು, ನವೆಂಬರ್ 13: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಐದು ದಶಕಗಳ ಪಯಣವನ್ನು ಪೂರ್ಣಗೊಳಿಸಿರುವ ಪ್ರಶಾಂತಿ ಕುಟೀರವು ಯೋಗವನ್ನು ಕೇವಲ ದೈಹಿಕ ವ್ಯಾಯಾಮಕ್ಕೆ ಸೀಮಿತಗೊಳಿಸದೆ, ಶಿಕ್ಷಣ, ಸಂಶೋಧನೆ ಹಾಗೂ ಆರೋಗ್ಯದ ಕ್ಷೇತ್ರಗಳೊಂದಿಗೆ ಜೋಡಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿರುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಆಧುನಿಕ ವಿಜ್ಞಾನ, ಆಧ್ಯಾತ್ಮಿಕ ಜ್ಞಾನ ಪರಂಪರೆಯ ಸೇತುವೆ

1975ರಲ್ಲಿ ಸ್ಥಾಪನೆಯಾದ ಪ್ರಶಾಂತಿ ಕುಟೀರದ ಮೂಲ ಉದ್ದೇಶ ಆಧುನಿಕ ವಿಜ್ಞಾನ ಮತ್ತು ಭಾರತದ ಆಧ್ಯಾತ್ಮಿಕ ಜ್ಞಾನ ಪರಂಪರೆಯ ನಡುವೆ ಸೇತುವೆ ನಿರ್ಮಿಸುವುದಾಗಿದೆ. ಈ ಪ್ರಶಾಂತಿ ಕುಟೀರವು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ)ದ ವಸತಿ ಪ್ರಧಾನ ಕೇಂದ್ರವಾಗಿದೆ. ಯೋಗ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡುವ ಎಸ್-ವ್ಯಾಸಕ್ಕೆ 2002ರಲ್ಲಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದೆ.

Loading...

ಯೋಗಕ್ಕೆ ವೈಜ್ಞಾನಿಕ ನೆಲೆ ನೀಡುವ ಪ್ರಯತ್ನ

ಪ್ರಶಾಂತಿ ಕುಟೀರದ ಪ್ರಮುಖ ಕೊಡುಗೆಗಳಲ್ಲಿ ಯೋಗದ ವೈಜ್ಞಾನಿಕ ಅಧ್ಯಯನಕ್ಕೆ ನೀಡಿರುವ ಒತ್ತು ಗಮನಾರ್ಹವಾಗಿದೆ. ಯೋಗವನ್ನು ದೈಹಿಕ, ಮಾನಸಿಕ ಮತ್ತು ಸಮಗ್ರ ಆರೋಗ್ಯದ ದೃಷ್ಟಿಕೋನದಿಂದ ಅಧ್ಯಯನ ಮಾಡುವ ಮೂಲಕ, ಅದರ ಶಿಕ್ಷಣ ಮತ್ತು ಸಂಶೋಧನೆಗೆ ಸಾಂಸ್ಥಿಕ ರೂಪ ನೀಡುವ ಪ್ರಯತ್ನ ಇಲ್ಲಿ ನಡೆದಿದೆ. ಎಸ್-ವ್ಯಾಸದ ಮೂಲಕ ಯೋಗ ಚಿಕಿತ್ಸಾ ಶಿಕ್ಷಣ ಸೇರಿದಂತೆ ವಿವಿಧ ಯೋಗ ಆಧಾರಿತ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಪ್ರಶಾಂತಿ ಕುಟೀರದ ಆವರಣದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯಧಾಮವು ಯೋಗದೊಂದಿಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಆಧುನಿಕ ವೈದ್ಯಕೀಯ ವಿಧಾನಗಳನ್ನು ಸಂಯೋಜಿಸುವ ಸಮಗ್ರ ಆರೋಗ್ಯ ಸೇವೆಗಳ ಮಾದರಿಯನ್ನು ಅನುಸರಿಸುತ್ತಿದೆ. ಈ ಮೂಲಕ ಯೋಗವನ್ನು ಆರೋಗ್ಯ ಮತ್ತು ಚಿಕಿತ್ಸೆಯ ವಿಶಾಲ ಪರಿಕಲ್ಪನೆಯೊಂದಿಗೆ ಸಂಪರ್ಕಿಸುವ ಪ್ರಯತ್ನವೂ ಸಂಸ್ಥೆಯ ಕಾರ್ಯಚಟುವಟಿಕೆಗಳ ಪ್ರಮುಖ ಭಾಗವಾಗಿದೆ.

ಸುವರ್ಣ ಮಹೋತ್ಸವದ ವಿಶೇಷತೆ

ನವೆಂಬರ್ 13ರಿಂದ 23ರವರೆಗೆ ನಡೆಯುತ್ತಿರುವ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ‘ವಿಕಸಿತ ಭಾರತ 2047 ಕಡೆಗೆ’ ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ. ಐದು ದಶಕಗಳ ಸಂಸ್ಥಾ ನಿರ್ಮಾಣ ಮತ್ತು ಸೇವೆಯ ಪಯಣವನ್ನು ಗುರುತಿಸುವ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ವಿಶೇಷ ಮಹತ್ವ ಪಡೆದಿದೆ. ಇದೇ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಆಡಳಿತಾತ್ಮಕ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಕೇರಳದ ತಿರುವನಂತಪುರದಲ್ಲಿ ಎಸ್-ವ್ಯಾಸ ಆಫ್-ಕ್ಯಾಂಪಸ್‌ಗೆ ಚಾಲನೆ ನೀಡಲಾಯಿತು.

ಯೋಗದ ಪ್ರಾಚೀನ ಜ್ಞಾನವನ್ನು ಸಮಕಾಲೀನ ಶಿಕ್ಷಣ, ಸಂಶೋಧನೆ ಮತ್ತು ಆರೋಗ್ಯದ ಅಗತ್ಯಗಳೊಂದಿಗೆ ಬೆಸೆಯುವ ಪ್ರಯತ್ನ ನಡೆಸಿರುವ ಪ್ರಶಾಂತಿ ಕುಟೀರ, ಐದು ದಶಕಗಳ ನಂತರವೂ ಭಾರತದ ಯೋಗ ಕ್ಷೇತ್ರದ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ತನ್ನ ಪಯಣ ಮುಂದುವರಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರೇ ನಂ. 2: ಮುಂಬೈ ಹಿಂದಿಕ್ಕಿ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ನಮ್ಮ ಮೆಟ್ರೋ

‘1926 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವಿಶಿಷ್ಟ ಚಿಂತಕ, ಬರಹಗಾರ ಮತ್ತು ಸಂಘಟಕರಾಗಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಜಿ ಅವರ ಜನ್ಮ ಶತಮಾನೋತ್ಸವವನ್ನೂ ಈ ಕಾರ್ಯಕ್ರಮವು ನೆನಪಿಸುತ್ತದೆ. ಅವರು 1946 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಗೊಂಡರು ಮತ್ತು 1987 ರಿಂದ 2000 ರವರೆಗೆ ಅದರ ಸರ್ಕಾರ್ಯವಾಹರಾಗಿ ಸೇವೆ ಸಲ್ಲಿಸಿದರು. ಅವರು ಎಸ್-ವ್ಯಾಸ ಸಂಸ್ಥೆಯ ಹಿಂದಿನ ದೃಷ್ಟಾರರಲ್ಲಿ ಒಬ್ಬರಾಗಿದ್ದರು ಮತ್ತು ಅವರ ಪ್ರೇರಣೆ ಹಾಗೂ ಮಾರ್ಗದರ್ಶನವು ಪ್ರಶಾಂತಿ ಕುಟೀರದ ಬೆಳವಣಿಗೆಯನ್ನು ರೂಪಿಸುವಲ್ಲಿ ಮತ್ತು ದಶಕಗಳಿಂದ ಸಂಸ್ಥೆಯ ಧ್ಯೇಯವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಪ್ರಧಾನ ಮಂತ್ರಿಯವರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us