ಶಾಲಾ ಸಮಯದಲ್ಲಿ ಬದಲಾವಣೆಗೆ ಸಭೆಯಲ್ಲಿ ವಿರೋಧ: ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳುವುದೇನು?
ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಂತ್ರಿಸಲು ಶಾಲಾ ಸಮಯದಲ್ಲಿ ಬದಲಾವಣೆ ತರಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕೋರ್ಟ್ ಕೂಡ ಈ ಬಗ್ಗೆ ಸಲಹೆ ನೀಡಿತ್ತು. ಹೀಗಾಗಿ ಇಂದು ಶಿಕ್ಷಣೆ ಇಲಾಖೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದು, ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಬೇಡ ಎಂಬ ಅಭಿಪ್ರಾಯಗಳೇ ಹೆಚ್ಚಿವೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರು, ಅ.9: ನಗರದಲ್ಲಿ ಟ್ರಾಫಿಕ್ (Bengaluru Traffic) ನಿಯಂತ್ರಿಸಲು ಶಾಲಾ ಸಮಯದಲ್ಲಿ (School Timings) ಬದಲಾವಣೆ ತರಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕೋರ್ಟ್ ಕೂಡ ಈ ಬಗ್ಗೆ ಸಲಹೆ ನೀಡಿತ್ತು. ಹೀಗಾಗಿ ಇಂದು ಶಿಕ್ಷಣೆ ಇಲಾಖೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದು, ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಬೇಡ ಎಂಬ ಅಭಿಪ್ರಾಯಗಳೇ ಹೆಚ್ಚಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ರಿತೇಶ್ ಸಿಂಗ್, ಎಲ್ಲಾ ಸಂಘದವರು ಕೂಡ ತಮ್ಮ ಸಲಹೆ ಕೊಟ್ಟಿದ್ದಾರೆ. ಸಲಹೆಯನ್ನು ಪರಿಗಣನೆ ಮಾಡಿ ವರದಿ ಕೊಡುತ್ತೇವೆ. ಸದ್ಯ ಪೊಲೀಸ್ ಇಲಾಖೆ, ಬಿಎಂಟಿಸಿ ಅಧಿಕಾರಿಗಳು ಸಾಧಕ ಬಾಧಕ ಚರ್ಚೆ ಮಾಡಿದ್ದಾರೆ. ಅದರಂತೆ ಶಾಲಾ ಸಮಯ ಬದಲಾವಣೆ ಬಗ್ಗೆ ಬದಲಾವಣೆ ಬೇಡ ಎಂಬ ಅಭಿಪ್ರಾಯ ಹೆಚ್ಚಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ 190 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ: ಡಿಕೆ ಶಿವಕುಮಾರ್
ಸದ್ಯ ಶಾಲಾ ಸಮಯದ ಬದಲಾವಣೆ ಬಗ್ಗೆ ಅಭಿಪ್ರಾಯ ಪಡೆದಿದ್ದೇವೆ. ನಾಳೆ ಹೈಕೋರ್ಟ್ಗೆ ಎಲ್ಲರ ಅಭಿಪ್ರಾಯದ ವರದಿ ನೀಡುತ್ತೇವೆ. ಎಲ್ಲರ ಸಲಹೆಗಳು ಕೂಡ ಒಂದೇ ರೀತಿಯಾಗಿವೆ. ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೇವೆ. ಕೋರ್ಟ್ ಏನೂ ಆದೇಶ ಕೊಡುತ್ತದೆಯೋ ಅದನ್ನ ಅನುಸರಿಸುತ್ತೇವೆ ಎಂದರು.
ಶಾಲಾ ಆರಂಭದ ಸಮಯ ಬದಲಾವಣೆಯಿಂದ ಆಗುವ ಸಮಸ್ಯೆ
ಸಮಯ ಬದಲಾವಣೆಗೆ ಕೆಲ ಖಾಸಗಿ ಶಾಲೆಗಳ ಒಕ್ಕೂಟಗಳಿಂದ ವಿರೋಧ ವ್ಯಕ್ತವಾಗಿವೆ. ಬೇಗ ಶಾಲೆ ಆರಂಭ ಮಾಡುವುದಕ್ಕೆ ಪೋಷಕರಿಂದಲೂ ವಿರೋಧ ವ್ಯಕ್ತವಾಗಿದೆ. ಪರ್ಯಾಯ ಮಾರ್ಗದ ಕುರಿತು ಕೆಲ ಖಾಸಗಿ ಸಂಘಟನೆಯಿಂದ ಸಲಹೆ ನೀಡಲಾಗಿದೆ. ಹಾಗಾದರೆ, ಶಾಲಾ ಆರಂಭದ ಸಮಯ ಬದಲಾವಣೆಯಿಂದ ಆಗುವ ಸಮಸ್ಯೆ ಏನು?
ಮಕ್ಕಳು ಬೆಳಗ್ಗೆ ಬೇಗ ಏಳಬೇಕು, ಪೋಷಕರು ಕೆಲಸಕ್ಕೆ ಹೋಗಲು ಕಷ್ಟ, ಮಕ್ಕಳ ದೈಹಿಕ ಚಟುವಟಿಕೆಗೆ ಕಡಿಮೆ ಕಾಲಾವಕಾಶ ಸಿಗುತ್ತದೆ, ಮಕ್ಕಳು ಕಡಿಮೆ ನಿದ್ದೆ ಮಾಡಿದರೆ ಆರೋಗ್ಯ ಸಮಸ್ಯೆಯಾಗಬಹುದು. ಈ ಕಾರಣಗಳಿಗೆ ಶಾಲಾ ಸಮದಲ್ಲಿ ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Mon, 9 October 23