ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ ಖಾಸಗಿ ಬಸ್​​ಗಳು​​: ಬೆಂಗಳೂರು, ಉಡುಪಿಯಲ್ಲಿ ಆರ್​​ಟಿಒ ಅಧಿಕಾರಿಗಳ ಕಾರ್ಯಾಚರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Oct 02, 2022 | 1:26 PM

ಉಡುಪಿಯಲ್ಲೂ ದಸರಾ ಹಬ್ಬ ಹಿನ್ನೆಲೆ ಖಾಸಗಿ ಬಸ್​​ಗಳು  ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವ ಬಸ್​​ಗಳನ್ನು ಆರ್​​ಟಿಒ ಅಧಿಕಾರಿಗಳು ಪರಿಶೀಲಿಸಿದ್ದಾರೆ

ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ ಖಾಸಗಿ ಬಸ್​​ಗಳು​​: ಬೆಂಗಳೂರು, ಉಡುಪಿಯಲ್ಲಿ ಆರ್​​ಟಿಒ ಅಧಿಕಾರಿಗಳ ಕಾರ್ಯಾಚರಣೆ
ಪ್ರಾತಿನಿಧಿಕ ಚಿತ್ರ
Follow us on

ದಸರಾ ರಜೆ ಹೊತ್ತಲ್ಲಿ ಪ್ರಯಾಣಿಕರಿಂದ ಖಾಸಗಿ ಬಸ್​​ಗಳು (Private Bus) ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು ಕಳೆದ 3 ದಿನದಲ್ಲಿ 400 ಬಸ್​​ಗಳ   ಮೇಲೆ ಪ್ರಕರಣ ದಾಖಲಾಗಿದೆ. ಎಚ್ಚರಿಕೆ ಮಧ್ಯೆಯೂ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಪ್ರಯಾಣಿಕರು ಆರ್​​ಟಿಒ (RTO) ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ಬೆಂಗಳೂರಿನಲ್ಲಿ ಆರ್​​ಟಿಒ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದಾರೆ. ಉಡುಪಿಯಲ್ಲೂ ದಸರಾ ಹಬ್ಬ ಹಿನ್ನೆಲೆ ಖಾಸಗಿ ಬಸ್​​ಗಳು  ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವ ಬಸ್​​ಗಳನ್ನು ಆರ್​​ಟಿಒ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಉಡುಪಿ ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಶೆಟ್ಟಿ‌ ನೇತೃತ್ವದಲ್ಲಿ ತಪಾಸಣೆ ನಡೆದಿದೆ. ಹಬ್ಬದ ವೇಳೆ ಬಸ್ ಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಬಗ್ಗೆ ರಾಜ್ಯಾದ್ಯಂತ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಆರ್​​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ದುಬಾರಿ ಬೆಲೆಗೆ ಟಿಕೆಟ್ ಮಾರಾಟ ದಂಧೆ ವಿಚಾರ: ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಸಚಿವ ಶ್ರೀರಾಮುಲು  ವಾರ್ನಿಂಗ್

ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ. ಯಾವುದೇ ಕಾರಣಕ್ಕೂ ರಾಜೀ ಇಲ್ಲ ಎಂದು ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಸಚಿವ ಶ್ರೀರಾಮುಲು ವಾರ್ನಿಂಗ್ ನೀಡಿದ್ದಾರೆ. ಖಾಸಗಿ ಬಸ್​ಗಳಿಂದ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ದಂಧೆ ವಿಚಾರವಾಗಿ ಸರಣಿ ಟ್ವೀಟ್ ಮೂಲಕ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ದರ ಹೆಚ್ಚು ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಅಧಿಕಾರಿಗಳ ಹತ್ತು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

 

ರಾಜ್ಯಾದ್ಯಂತ ಈ ತಂಡ ತಪಾಸಣೆ ಕಾರ್ಯಚರಣೆ ನಡೆಸಲಿದೆ. ಒಂದು ವೇಳೆ ಹೆಚ್ಚು ಟಿಕೆಟ್‌ ದರ ಕೇಳಿದರೆ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಬಸ್‌ ನಂಬರ್‌, ಮಾರ್ಗ ತಿಳಿಸಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು‌. ಇದಕ್ಕಾಗಿ ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದ್ದು 94498 63429 / 94498 63426 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.