ಗಾಂಧಿ ಜಯಂತಿ ದಿನ ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ: ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಸಿಎಂ ಬಸವರಾಜ ಬೊಮ್ಮಾಯಿ
‘ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಬೇಲ್ನಲ್ಲಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ‘ಕರ್ನಾಟಕದಲ್ಲಿ ಈಗ ಅಧಿಕಾರದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ’ ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ತಿರುಗೇಟು ಕೊಟ್ಟರು. ‘ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಇಡೀ ಕಾಂಗ್ರೆಸ್ ಪಕ್ಷ ಬೇಲ್ನಲ್ಲಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನು ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ಎಟಿಎಂ ಆಗಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಮೇಲೆ ಮಾಡುತ್ತಿರುವ 40 ಪರ್ಸೆಂಟ್ ಆರೋಪಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ, ತನಿಖೆ ಮಾಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸವಾಲು ಹಾಕಿದರು.
ಚನ್ನಪಟ್ಟಣದಲ್ಲಿ ಕಾಮಗಾರಿಯೊಂದರ ಶಂಕುಸ್ಥಾಪನೆ ವಿಚಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇನೆ. ಸರ್ಕಾರದ ಕಾಮಗಾರಿಗಳ ವಿಚಾರದಲ್ಲಿ ರಾಜಕಾರಣ ಬೆರೆಸೋದು ಸರಿಯಲ್ಲ. ಇದರಲ್ಲಿ ಹಿಂಸೆಗೆ ಅವಕಾಶವಿಲ್ಲ. ಒಟ್ಟಾರೆ ಸರ್ಕಾರದ ಅನುದಾನ ಜನರಿಗೆ ಮುಟ್ಟುವುದು ಮುಖ್ಯ. ಇಂತಹ ಸಂದರ್ಭ ಬಂದಾಗ ಹಿಂದಿನ ಸರ್ಕಾರಗಳು ಏನೆಲ್ಲ ಮಾಡಿವೆ ಎನ್ನುವ ಬಗ್ಗೆಯೂ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.
ಮನಸ್ಸನ್ನು ಆಳುವ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ
ವಿಧಾನಸೌಧದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿತ್ರಪಟಕ್ಕೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಬೊಮ್ಮಾಯಿ, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರದು ಒಂದೇ ಗುಣ. ಶಾಸ್ತ್ರಿಯವರು ಹೆಚ್ಚು ಕಾಲ ಭಾರತದ ಪ್ರಧಾನಿ ಆಗಿರಲಿಲ್ಲ. ಆದರೆ ಎಲ್ಲರ ಮನಸಿನಲ್ಲಿ ಅವರು ಸದಾ ಪ್ರಧಾನಿ ಆಗಿದ್ದಾರೆ. ಬಡತನದಿಂದ ಮೇಲೆ ಬಂದ ಅವರು, ಪ್ರಧಾನಿಯಾಗಿದ್ದರೂ ಸರಳತೆ ಬಿಡಲಿಲ್ಲ. ಯೋಧರು ಮತ್ತು ರೈತರಿಗೆ ಅಪಾರ ಗೌರವ ಕೊಡುತ್ತಿದ್ದರು. ಶಾಸ್ತ್ರಿಯವರ ಆಡಳಿತ ನಮಗೆಲ್ಲರಿಗೂ ಮಾದರಿ ಆಗಬೇಕಿದೆ ಎಂದರು.
ದೇಶದ ಪ್ರೇರಣಾ ಶಕ್ತಿ
ಮಹಾತ್ಮಾ ಗಾಂಧಿ ಅವರು ಇಡೀ ದೇಶಕ್ಕೆ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ಬೊಮ್ಮಾಯಿ ನುಡಿದರು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಮಾತನಾಡಿದ ಅವರು, ಹತ್ತು ಹಲವು ಅವಮಾನ ಸಹಿಸಿಕೊಂಡು ಗಾಂಧೀಜಿ ತಮ್ಮ ಬದುಕಿನುದ್ದಕ್ಕೂ ಹೋರಾಡಿದರು. ದೇಶಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿ ಕೊಟ್ಟರು. ಗಾಂಧಿ ಸತ್ಯ ಮತ್ತು ಅಹಿಂಸೆ ಎರಡು ಅಸ್ತ್ರ ಕೊಟ್ಟಿದ್ದಾರೆ. ಈ ಅಸ್ತ್ರಗಳಿಂದಲೇ ಬ್ರಿಟಿಷ್ ಸಾಮ್ರಾಜ್ಯ ಅಲುಗಾಡಿತ್ತು ಎಂದು ನೆನಪಿಸಿಕೊಂಡರು.
Published On - 12:39 pm, Sun, 2 October 22