ಬೆಂಗಳೂರಿನ ಫ್ಲಾಟ್‌ ಮಾಲೀಕರಿಗೆ ನೀಡಲಾದ ಆಸ್ತಿ ತೆರಿಗೆ ನೋಟಿಸ್‌ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

ಇತ್ತೀಚೆಗೆ ಇ-ಖಾತಾಗಳನ್ನು ಪಡೆದ ಸಾವಿರಾರು ಫ್ಲಾಟ್‌ ಮಾಲೀಕರಿಗೆ ಸ್ಟಿಲ್ಟ್ ಮತ್ತು ಪಾರ್ಕಿಂಗ್ ಪ್ರದೇಶಗಳಿಗೆ ತೆರಿಗೆ ಪಾವತಿಸಲು ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿತ್ತು. ಇದಕ್ಕೆ ಫ್ಲಾಟ್​ಗಳ ಮಾಲೀಕರಿಂದ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಬಿಬಿಎಂಪಿ ವ್ಯಾಪ್ತಿಯ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್ ಖರೀದಿ ಮಾಡುವವರಿಗೆ ಇರುವ ಆಸ್ತಿ ತೆರಿಗೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಮತ್ತು ಸ್ಪಷ್ಟನೆಯನ್ನು ಬಿಬಿಎಂಪಿ ನೀಡಿದೆ.

ಬೆಂಗಳೂರಿನ ಫ್ಲಾಟ್‌ ಮಾಲೀಕರಿಗೆ ನೀಡಲಾದ ಆಸ್ತಿ ತೆರಿಗೆ ನೋಟಿಸ್‌ ಬಗ್ಗೆ ಬಿಬಿಎಂಪಿ ಸ್ಪಷ್ಟನೆ
Bbmp

Updated on: Aug 09, 2025 | 8:46 PM

ಬೆಂಗಳೂರು, ಆಗಸ್ಟ್ 9: ಬಿಬಿಎಂಪಿ (BBMP) ವ್ಯಾಪ್ತಿಯ ಫ್ಲಾಟ್​ಗಳ ಮಾಲೀಕರಿಗೆ ಮಹಾನಗರ ಪಾಲಿಕೆಯಿಂದ ಆಸ್ತಿ ತೆರಿಗೆ (BBMP Property Tax) ನೋಟಿಸ್ ಜಾರಿ ಮಾಡಲಾಗಿತ್ತು. ಹಾಗೇ, ಇ-ಖಾತಾ ಪಡೆದವರಿಗೆ ಬಿಬಿಎಂಪಿ ಶೋ-ಕಾಸ್ ನೋಟಿಸ್ ಜಾರಿ ಮಾಡಿತ್ತು. ಪಾರ್ಕಿಂಗ್ ಸ್ಥಳಕ್ಕೆ ಹೆಚ್ಚುವರಿ ತೆರಿಗೆ ಪಾವತಿಸಬೇಕೆಂದು ನೋಟಿಸ್ ಕೂಡ ನೀಡಲಾಗಿತ್ತು. ಸೂಪರ್ ಬಿಲ್ಟ್ ಅಪ್ ಏರಿಯಾ ಎಂದು ಗುರುತಿಸಿ ಈಗಾಗಲೇ ತೆರಿಗೆ ಕಟ್ಟಿಸಿಕೊಂಡಿದ್ದರೂ ಮತ್ತೆ ಪಾರ್ಕಿಂಗ್ ಹೆಸರಿನಲ್ಲಿ ಬಿಬಿಎಂಪಿಯಿಂದ (BBMP) ಆಸ್ತಿ ತೆರಿಗೆ ನೋಟಿಸ್ ನೀಡುತ್ತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮೌನೀಶ್ ಮೌದ್ಗಿಲ್ ಸ್ಪಷ್ಟನೆ ನೀಡಿದ್ದಾರೆ. ಮಾರಾಟ ಪತ್ರದಲ್ಲಿನ ಫ್ಲಾಟ್ ಪ್ರದೇಶವನ್ನು ಆಧರಿಸಿ ಆಸ್ತಿ ತೆರಿಗೆ ವಿಧಿಸಲಾಗುತ್ತದೆ. ಘೋಷಿತ ಪ್ರದೇಶ ಕಡಿಮೆಯಿದ್ದರೆ ಮಾತ್ರ ನೋಟಿಸ್ ನೀಡಲಾಗಿದೆ. ಕಾವೇರಿ ಮೂಲಕ ಡೇಟಾ ಹೊಂದಾಣಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಅಪಾರ್ಟ್​ಮೆಂಟ್​ಗಳ ಫ್ಲಾಟ್ ಮಾಲೀಕರು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನು ತನ್ನ ಮಾರಾಟ ಪತ್ರದಲ್ಲಿ ಬರೆಯಲಾದ ಫ್ಲಾಟ್ ಪ್ರದೇಶಕ್ಕೆ ಆಸ್ತಿ ತೆರಿಗೆಯನ್ನು ಪಾವತಿಸಬೇಕು. ಅದು ಆತ ಫ್ಲಾಟ್ ಖರೀದಿಸಿದಾಗ ಏನು ಪಾವತಿಸಿದನೋ ಅದಕ್ಕೆ ಅನುಗುಣವಾಗಿ ಇರುತ್ತದೆ. ಪ್ರತಿಯೊಬ್ಬ ಫ್ಲಾಟ್ ಖರೀದಿದಾರನು ಎಷ್ಟು ಚದರ ಅಡಿಗಳಿಗೆ ಪಾವತಿಸಿದ್ದಾನೆ ಎಂಬುದರ ಆಧಾರದಲ್ಲಿ ಆ ಚದರ ಅಡಿಗಳಿಗೆ ಮಾತ್ರ ಅವನು ಆಸ್ತಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಕೆಲವು ನಾಗರಿಕರು ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿ ತಮ್ಮ ಮಾರಾಟ ಪತ್ರದಲ್ಲಿರುವುದಕ್ಕಿಂತ ಕಡಿಮೆ ಪ್ರದೇಶವನ್ನು ಘೋಷಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.

ಇದನ್ನೂ ಓದಿ: BBMP Property tax: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಬರೋಬ್ಬರಿ ಸಾವಿರ ಕೋಟಿ ರೂ. ಹೆಚ್ಚಳ

ಈಗ ಇ-ಖಾತಾದಲ್ಲಿ ಮಾರಾಟ ಪತ್ರಗಳನ್ನು ಕಾವೇರಿಯಿಂದ ಪಡೆಯಲಾಗಿರುವುದರಿಂದ ಅದರಲ್ಲಿರುವ ಪ್ರದೇಶವನ್ನು ತೆರಿಗೆ ಪಾವತಿಸಿದ ಪ್ರದೇಶದೊಂದಿಗೆ ಹೋಲಿಸಲಾಗಿದೆ. ಕಾವೇರಿ ಮಾರಾಟ ಪತ್ರದಲ್ಲಿ ಫ್ಲಾಟ್‌ನ ವಿಸ್ತೀರ್ಣವನ್ನು ನೀಡುವುದರಿಂದ ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಮಾಡಲಾಗಿದೆ. ಆಸ್ತಿ ತೆರಿಗೆ ಪಾವತಿಸಿದ ಪ್ರದೇಶವು ಮಾರಾಟ ಪತ್ರದಲ್ಲಿನ ವಿಸ್ತೀರ್ಣಕ್ಕಿಂತ ಕಡಿಮೆಯಿದ್ದರೆ ಮಾತ್ರ ಅಂಥವರಿಗೆ ಬಿಬಿಎಂಪಿ ನೋಟಿಸ್ ನೀಡಿದೆ. ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ಮೇಲ್ಮನವಿ ಸಲ್ಲಿಸಲು ಆನ್‌ಲೈನ್ ಆಯ್ಕೆ ಅಸ್ತಿತ್ವದಲ್ಲಿದೆ. ಮಾಲೀಕರು ನೀಡಿದ ದಾಖಲೆಗಳ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆನ್​ಲೈನ್​ ಸೈಟ್​ನ ಲಿಂಕ್ BBMPeNyaya.karnataka.gov.in ಇಲ್ಲಿದೆ.


ಈಗ ಬಿಬಿಎಂಪಿಯಿಂದ ನೋಟಿಸ್ ಮಾತ್ರ ನೀಡಲಾಗಿದೆ. ನಾಗರಿಕರು ತಮ್ಮ ಬಳಿ ಇರುವ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಉತ್ತರಿಸಲು ಅಥವಾ ಆಕ್ಷೇಪಿಸಲು ಸಂಪೂರ್ಣ ಅವಕಾಶವನ್ನು ಹೊಂದಿರುತ್ತಾರೆ. ಹಾಗೇ, ಕಾರ್ ಪಾರ್ಕಿಂಗ್ ಅನ್ನು ತೆರಿಗೆ ವಿಧಿಸಬಹುದಾದ ಫ್ಲಾಟ್ ಪ್ರದೇಶಕ್ಕೆ ಸೇರಿಸಲಾಗುವುದಿಲ್ಲ. ಕಾರ್ ಪಾರ್ಕಿಂಗ್ ಘೋಷಿಸುವ ಪ್ರತಿಯೊಬ್ಬರಿಂದ ಇದನ್ನು ಫ್ಲಾಟ್ ದರದ ಅರ್ಧದಷ್ಟು ಪ್ರತ್ಯೇಕವಾಗಿ ಪಾವತಿಸಲಾಗುತ್ತದೆ. ಇದು 2008ರಿಂದ ಜಾರಿಯಲ್ಲಿದೆ ಎಂದು ಬಿಬಿಎಂಪಿ ತಿಳಿಸಿದೆ.

ಇದನ್ನೂ ಓದಿ: ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಆನ್​ಲೈನ್ ವ್ಯವಸ್ಥೆ ಆರಂಭಿಸಲಿದೆ ಬಿಬಿಎಂಪಿ

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಕಂದಾಯ ಆಯುಕ್ತ ಮೌನೀಶ್ ಮೌದ್ಗಿಲ್, “ಶೇ. 5ಕ್ಕಿಂತ ಹೆಚ್ಚು ವ್ಯತ್ಯಾಸವಿರುವ ಆಸ್ತಿಗಳ ಸಂದರ್ಭದಲ್ಲಿ ಮಾತ್ರ ನಾವು ನೋಟಿಸ್ ನೀಡಿದ್ದೇವೆ. ಶೇ. 5ಕ್ಕಿಂತ ಕಡಿಮೆ ಇರುವ ಆಸ್ತಿಗಳಿಗೆ ನಾವು ಯಾವುದೇ ಎಚ್ಚರಿಕೆಗಳನ್ನು ಕಳುಹಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, NIC ಕಡೆಯಿಂದಾದ ತಾಂತ್ರಿಕ ದೋಷದಿಂದಾಗಿ ತಪ್ಪಿಲ್ಲದವರಿಗೂ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಲಾಗಿದೆ. ಅಂತಹ ನಿವಾಸಿಗಳು ಮೇಲ್ಮನವಿ ಸಲ್ಲಿಸಬಹುದು ಮತ್ತು ನಾವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುತ್ತೇವೆ” ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:45 pm, Sat, 9 August 25