BBMP Property tax: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಬರೋಬ್ಬರಿ ಸಾವಿರ ಕೋಟಿ ರೂ. ಹೆಚ್ಚಳ
ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ: ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಅಂಕಿ ಅಂಶ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಸ್ತಿ ತೆರಿಗೆ ಸಂಗ್ರಹ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಹೆಚ್ಚಾಗಿದೆ.

ಬೆಂಗಳೂರು, ಏಪ್ರಿಲ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ವರ್ಷ ಕಳೆದ ವರ್ಷಕ್ಕಿಂತ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಹೆಚ್ಚು ಆಸ್ತಿ ತೆರಿಗೆ (Property Tax Collection) ಸಂಗ್ರಹಿಸಿದೆ. ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಈ ಪೈಕಿ ಮಹದೇವಪುರ (Mahadevapur) ಹಾಗೂ ಯಲಹಂಕ ವಲಯಗಳಲ್ಲಿ ನೂರಕ್ಕೆ ನೂರರಷ್ಟು ತೆರಿಗೆ ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 5 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹೊಂದಿತ್ತು.
2023-24ನೇ ಸಾಲಿನಲ್ಲಿ ಬಿಬಿಎಂಪಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡಿತ್ತು. ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹವಾಗಿದೆ.
ಬಿಬಿಎಂಪಿ ತೆರಿಗೆ ಸಂಗ್ರಹದಲ್ಲಿ ಯಲಹಂಕ, ಮಹದೇವಪುರ ಟಾಪ್
ಬಿಬಿಎಂಪಿಯ ಎಂಟು ವಲಯಗಳ ಪೈಕಿ, ಯಲಹಂಕ 464.66 ಕೋಟಿ ರೂ. ಸಂಗ್ರಹಿಸುವ ಮೂಲಕ ಗುರಿಯನ್ನು (445.24 ಕೋಟಿ ರೂ.) ಮೀರಿ ಸಂಗ್ರಸಿದೆ. 1,309.04 ಕೋಟಿ ಗುರಿಯಲ್ಲಿ ಶೇ 100.12 ರಷ್ಟು ಸಾಧಿಸಿ, 1,310.58 ಕೋಟಿ ರೂ. ಸಂಗ್ರಹಿಸುವ ಮೂಲಕ ಮಹದೇವಪುರ ಎರಡನೇ ಸ್ಥಾನದಲ್ಲಿದೆ.
ದಕ್ಷಿಣ ವಲಯವು 769.50 ಕೋಟಿ ರೂ. ಗುರಿಯಲ್ಲಿ 733.65 ಕೋಟಿ ರೂ. ಸಂಗ್ರಹಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಪೂರ್ವ ವಲಯವು ಶೇ 93.52 ರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು ದಾಸರಹಳ್ಳಿ ಶೇ 92.72 ರೊಂದಿಗೆ ಐದನೇ ಸ್ಥಾನದಲ್ಲಿದೆ. ಪಶ್ಚಿಮ ವಲಯವು ತೆರಿಗೆ ಸಂಗ್ರಹದಲ್ಲಿ ಶೇ 92.17 ಸಾಧಿಸಿದರೆ, ರಾಜರಾಜೇಶ್ವರಿ ನಗರವು 87.89 ರ ಸಾಧನೆ ಮಾಡಿದೆ. 585.11 ಕೋಟಿ ರೂ. ಗುರಿಯಲ್ಲಿ ಕೇವಲ ಶೇ 83.75 ಮಾತ್ರ ಸಂಗ್ರಹ ಮಾಡುವ ಮೂಲಕ ಬೊಮ್ಮನಹಳ್ಳಿ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸಿದೆ. ಒಟ್ಟಾರೆಯಾಗಿ ಶೇ 94.62 ರಷ್ಟು ತೆರಿಗೆ ಸಂಗ್ರಹವಾಗಿದೆ.
ಇದನ್ನೂ ಓದಿ: ತೆರಿಗೆ ಪಾವತಿಸಿದ್ದು ರಸ್ತೆಗಳಿಗಾಗಿ: ಬೆಂಗಳೂರು ರಸ್ತೆ ಅವ್ಯವಸ್ಥೆ ಬಗ್ಗೆ ಐಟಿ ವೃತ್ತಿಪರರಿಂದ ಹಾಡು ಹಾಡಿ ವಿಭಿನ್ನ ಪ್ರತಿಭಟನೆ
ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಮಾಡಲು ಈ ಬಾರಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಒನ್-ಟೈಮ್ ಸೆಟ್ಲ್‌ಮೆಂಟ್ (OTS), ಸ್ಥಿರಾಸ್ತಿಗಳನ್ನು ಹರಾಜು ಹಾಕಿ ಮೊತ್ತ ವಸೂಲಿ ಇತ್ಯಾದಿ ನಡೆಗಳನ್ನು ಅನುಸರಿಸಿತ್ತು.