ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯಗಳು: ಗೃಹ ಸಚಿವ ಜಿ ಪರಮೇಶ್ವರ್
ಹೊರ ರಾಜ್ಯಗಳಿಂದ ಬಂದವರು ಇಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯಗಳನ್ನು ನಾವು ಕಾಣುತ್ತಿದ್ದೇವೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಬಾಲಕಿಯ ಹತ್ಯೆ ಹಾಗೂ ಎನ್ಕೌಂಟರ್ ವಿಚಾರವಾಗಿ ಅವರು ಪ್ರತಿ ಕ್ರಿಯಿಸಿದ್ದು, ಈ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಏಪ್ರಿಲ್ 14: ಹುಬ್ಬಳ್ಳಿಯ (Hubballi) ರಾಯನಾಳ ಸಮೀಪ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತ ಬಾಲಕಿಯನ್ನು ಹತ್ಯೆ ಮಾಡಿ ನಂತರ ಪೊಲೀಸರ ಗುಂಡಿಗೆ ಬಲಿಯಾದ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ (Dr G Parameshwara) ಪ್ರತಿಕ್ರಿಯಿಸಿದ್ದು, ಹೊರ ರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ (Karnataka) ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದಿದ್ದಾರೆ. ಹೊರರಾಜ್ಯದವರಿಗೆ ಕರ್ನಾಟಕದ ಕಾನೂನಿನ ಭಯ ಇಲ್ಲವೇ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿಗೆ ಹೊರರಾಜ್ಯಗಳಿಂದ ಸಾಕಷ್ಟು ಜನ ಬರುತ್ತಾರೆ. ಹೀಗೆ ಹೊರಗಿನಿಂದ ಬಂದವರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳಲ್ಲ. ಇಲ್ಲಿನ ಜನರ ಭಾವನೆ ಅರ್ಥ ಮಾಡಿಕೊಳ್ಳದೆ ಈ ರೀತಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ.
ಹೊರರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಹೆಚ್ಚು ಕಡೆಗಳಲ್ಲಿ ಕಟ್ಟಡ ಕಾರ್ಮಿಕರಿಂದಲೇ ಅಪರಾಧ ಕೃತ್ಯಗಳು ನಡೆಯುವುದು ಕಂಡುಬರುತ್ತಿದೆ. ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಭೆ ನಡೆಸುತ್ತೇವೆ. ಕಾರ್ಮಿಕ ಇಲಾಖೆ ಜೊತೆ ನಾವು ಜಂಟಿಯಾಗಿ ಸಭೆ ನಡೆಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಇತ್ತೀಚೆಗೆ, ಬೆಂಗಳೂರಿನ ಸದ್ದುಗುಂಟೆ ಪಾಳ್ಯದಲ್ಲಿ ಯುವತಿಗೆ ಕಿರುಕುಳ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುವಾಗ, ‘ದೊಡ್ಡ ನಗರಗಳಲ್ಲಿ ಇಂಥ ಘಟನೆಗಳು ನಡೆಯುತ್ತವೆ’ ಎಂದು ಅವರು ಹೇಳಿದ್ದು ವಿವಾದಕ್ಕೆ ಈಡಾಗಿತ್ತು. ಇದೀಗ ಹೊರ ರಾಜ್ಯದವರ ಬಗ್ಗೆ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದಿದ್ದೇನು?
ಹುಬ್ಬಳ್ಳಿಯ ಅಶೋಕ್ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೋಲೆಟ್ ಕೊಡಿಸುವ ಆಸೆ ತೋರಿಸಿ ದುರುಳ ಹೊತ್ತೊಯ್ತಿದ್ದ. ಪಾಳು ಮನೆ ಮುಂದಿದ್ದ ಶೆಡ್‌ಯೊಂದಕ್ಕೆ ಕರೆದೊಯ್ದು ಕೊಲೆ ಮಾಡಿದ್ದ. ಅತ್ಯಾಚಾರ ಎಸಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಮರಣೋತ್ತರ ಪರಿಕ್ಷೆ ವರದಿಯ ನಂತರ ಸ್ಪಷ್ಟವಾಗಲಿದೆ.
ಕೊಪ್ಪಳ ಮೂಲದ ದಂಪತಿ ಪುತ್ರಿ ಕಾಣೆಯಾಗಿದ್ದಾಳೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಹುಡುಕಾಡಿದ್ದಾರೆ. ಬಳಿಕ ಬಾಲಕಿಯ ಶವ ಶೆಡ್ನಲ್ಲಿ ಸಿಕ್ಕಿತ್ತು. ಆರೋಪಿ ಬಾಲಕಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿಯೂ ಸೆರೆಯಾಗಿತ್ತು.
ಇದನ್ನೂ ಓದಿ: ಹುಬ್ಬಳ್ಳಿ: ಬಾಲಕಿಯನ್ನು ಕೊಲೆಗೈದಿದ್ದ ಆರೋಪಿ ತಪ್ಪಿಸಿಕೊಳ್ಳಲು ಯತ್ನ, ಪೊಲೀಸ್ ಗುಂಡಿಗೆ ಬಲಿ
ಬಳಿಕ ಆರೋಪಿಯ ಬಂಧನಕ್ಕೆ ಬಲೆಬೀಸಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ಬಿಹಾರ ಮೂಲದ 35 ವರ್ಷದ ಪಾಪಿ ರಿತೇಶ್ ಕುಮಾರ್ನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. ಆತ, ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದು, ತಾರಿಹಾಳ ಸೇತುವೆ ಬಳಿ ಉಳಿದುಕೊಂಡಿದ್ದೇನೆ ಎಂದಿದ್ದ. ಸ್ಥಳ ಮಹಜರಿಗೆ ತಾರಿಹಾಳ ಸೇತುವೆ ಬಳೆ ಕರೆದೊಯ್ದಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಆತ ಯತ್ನಿಸಿದ್ದ. ಆಗ ಪಿಎಸ್ಐ ಅನ್ನಪೂರ್ಣ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದರೂ ಕಾಲ್ಕಿಳಲು ಯತ್ನಿಸಿದ್ದಾಗ ಫೈರಿಂಗ್ ಮಾಡಿದ್ದರು. ಆರೋಪಿಯ ಕಾಲು, ಬೆನ್ನಿಗೆ ಗುಂಡು ತಗುಲಿ ಕುಸಿದು ಬಿದ್ದಿದ್ದು ಮೃತಪಟ್ಟಿದ್ದ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದರು.