ತೆರಿಗೆ ಪಾವತಿಸಿದ್ದು ರಸ್ತೆಗಳಿಗಾಗಿ: ಬೆಂಗಳೂರು ರಸ್ತೆ ಅವ್ಯವಸ್ಥೆ ಬಗ್ಗೆ ಐಟಿ ವೃತ್ತಿಪರರಿಂದ ಹಾಡು ಹಾಡಿ ವಿಭಿನ್ನ ಪ್ರತಿಭಟನೆ
ಬೆಂಗಳೂರಿನ ಹಲವೆಡೆ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರ ದುಸ್ತರವಾಗಿದೆ. ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡು ದುರಸ್ತಿ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರ ವಿರುದ್ಧ ಪಾಣತ್ತೂರು ಪ್ರದೇಶದಲ್ಲಿ ಐಟಿ ವೃತ್ತಿಪರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಗಮನ ಸೆಳೆಯುವಂತಿವೆ.

ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನ ಹದಗೆಟ್ಟ ರಸ್ತೆಗಳ (Bangalore Roads) ವಿರುದ್ಧ ಐಟಿ ವೃತ್ತಿಪರರು (IT Professionals)ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಪಾಣತ್ತೂರು ಪ್ರದೇಶದ ಹೊರವರ್ತುಲ ರಸ್ತೆಯಲ್ಲಿ (Outer Ringroad) ‘ಐ ಪೇಯ್ಡ್ ಟ್ಯಾಕ್ಸಸ್ ಫಾರ್ ರೋಡ್ಸ್, ನಾಟ್ ಫಾರ್ ಎ ರೋಲರ್ ಕೋಸ್ಟರ್’ ಎಂಬ ಬಹರ ಉಳ್ಳ ಟಿ ಶರ್ಟ್ ಧರಿಸಿಕೊಂಡು ಹಾಡು ಹಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ವಿಡಿಯೋ ತುಣುಕುಗಳ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಇದು ತೆರಿಗೆ ಪಾವತಿಸುವವರ ಅಸಹಾಯಕತೆಯ ದುರಂತ. ಹೊಣೆಗಾರಿಕೆ ಇಲ್ಲ, ಲೂಟಿ ಮಾತ್ರ. ಇದನ್ನು ಇವತ್ತೇ ಬಿಬಿಎಂಪಿ ಸರಿಪಡಿಸಿದರೂ 3 ತಿಂಗಳು ಕೂಡ ರಸ್ತೆ ಚೆನ್ನಾಗಿರುವುದಿಲ್ಲ. ಬಜೆಟ್‌ನಲ್ಲಿ ನಿಗದಿಪಡಿಸಿದ ಗುಣಮಟ್ಟಕ್ಕಿಂತ ತೀರಾ ಕಡಿಮೆ, ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗಿದೆ. ಬೆಂಗಳೂರು ರಸ್ತೆಗಳು ದುರಸ್ತಿ ಮಾಡಲಾಗದಷ್ಟು ಹಾಳಾಗಿವೆ ಎಂದು ‘ಸಿಟಿಜನ್ಸ್ ಮೂವ್ಮೆಂಟ್, ಈಸ್ಟ್ ಬೆಂಗಳೂರು’ ಎಕ್ಸ್ ಹ್ಯಾಂಡಲ್ನಲ್ಲಿ ಪ್ರತಿಭಟನೆಯ ವಿಡಿಯೋ ಸಹಿತ ಪೋಸ್ಟ್ ಮಾಡಲಾಗಿದೆ.
ಪ್ರತಿಭಟನೆಯ ವಿಡಿಯೋ ಇಲ್ಲಿ ನೋಡಿ
It’s tragic to witness the helplessness of taxpayers. No accountability, just loot. Even if BBMP repairs it today, it won’t last 3 months —the roads are built substandard, far below the budgeted quality. #Bengaluru is broken beyond repair. #BrandBengaluru pic.twitter.com/49sRc0teRy
— Citizens Movement, East Bengaluru (@east_bengaluru) April 13, 2025
ರಸ್ತೆಗಳಲ್ಲಿನ ಬಿರುಕುಗಳನ್ನು, ಹೊಂಡ ಗುಂಡಿಗಳನ್ನು ತೋರಿಸಲು ಪ್ರತಿಭಟನಾಕಾರರು ರಂಗೋಲಿ ಬಿಡಿಸುವುದನ್ನೂ ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಪ್ರತಿಭಟನೆಯನ್ನು ತೆರಿಗೆ ಪಾವತಿದಾರರ ವೇದಿಕೆ ಆಯೋಜಿಸಿತ್ತು. ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಹಾಗೂ ಮೂಲಭೂತ ನಾಗರಿಕ ಸೌಕರ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗದೇ ಇದ್ದಾಗ ತೆರಿಗೆ ಯಾಕೆ ಸಂಗ್ರಹಿಸಬೇಕು? ಸಂಗ್ರಹಿಸಿದ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರತಿಭಟನಾಕಾರರು ಆಡಳಿತವನ್ನು ಪ್ರಶ್ನಿಸಿದ್ದಾರೆ.
ವಿಭಿನ್ನ ಪ್ರತಿಭಟನೆಯ ವಿಡಿಯೋಗಳಿಗೆ ಎಕ್ಸ್ನಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಅಲರ್ಜಿ ನಗರವಾದ ಬೆಂಗಳೂರು: ರಸ್ತೆ ಕಾಮಗಾರಿ ಧೂಳು, ವಾಯುಮಾಲಿನ್ಯದಿಂದ ಜನ ಹೈರಾಣ
ಕುಂಭಕರ್ಣ ಕರ್ನಾಟಕ ಸರ್ಕಾರ ಅಥವಾ ಬಿಬಿಎಂಪಿಯನ್ನು ಎಚ್ಚರಗೊಳಿಸಲು ಸಾಧ್ಯವಾಗದ ಇಂಥ ಪ್ರತಿಭಟನೆಗಳನ್ನು ನಡೆಸುವ ಬದಲು #NoRoadsNoTax ಅಭಿಯಾನವನ್ನು ಪ್ರಾರಂಭಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ. ಆಡಳಿತದ ನಿರ್ಲಕ್ಷ್ಯಕ್ಕೆ ನೂರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.