ಬೆಂಗಳೂರು, ಫೆಬ್ರವರಿ 13: ಆಸ್ತಿ ತೆರಿಗೆ (Proerty Tax) ಪಾವತಿಸದ ಕಾರಣಕ್ಕಾಗಿ ಕಾರುಗಳು ಮತ್ತು ಶಾಲಾ ಬಸ್‌ಗಳಂತಹ ಚರ ಆಸ್ತಿಗಳನ್ನು ಮೊದಲ ಬಾರಿಗೆ ಬಿಬಿಎಂಪಿ (BBMP) ಜಪ್ತಿ ಮಾಡಿದೆ. ತೆರಿಗೆ ಬಾಕಿ (Tax Defaulters) ಇರಿಸಿಕೊಂಡಿರುವವರಿಂದ ಸಂಗ್ರಹಿಸುವ ಉದ್ದೇಶದೊಂದಿಗೆ ಎಸ್ಒಪಿ (ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ) ಜಾರಿಗೊಳಿಸಿದ ಮೂರು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿಯ ಯಲಹಂಕ ವಿಭಾಗದಲ್ಲಿ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳನ್ನು ಜಪ್ತಿ ಮಾಡಿದ ಕೆಲವೇ ಗಂಟೆಗಳ ನಂತರ, ಆಸ್ತಿ ಮಾಲೀಕರು ಬಾಕಿಯ ಶೇ 50 ರಷ್ಟನ್ನು ಪಾವತಿಸಲು ಮತ್ತು ನಮ್ಮ ನೋಟಿಸ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ 10,603 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಮಾಡಿದೆ. ಆದರೆ, ವಶಪಡಿಸಿಕೊಂಡ ವಾಹನಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಇಲ್ಲದ ಕಾರಣ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಬಿಬಿಎಂಪಿ ಕಾಯ್ದೆಯಡಿ, ಸ್ಥಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಳ್ಳಲು ಅವಕಾಶವಿದೆ.
ನಾವು ಜನರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಆದ್ದರಿಂದ ತೆರಿಗೆಯನ್ನು ವಂಚಿಸಿದವರ ಮನೆಗೆ ಬೀಗ ಹಾಕುತ್ತಿಲ್ಲ ಎಂದು ಹಿರಿಯ ಕಂದಾಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಒಟ್ಟಾರೆ 2023ರ ನವೆಂಬರ್ ಮತ್ತು 2024ರ ಫೆಬ್ರವರಿ ನಡುವೆ 46,318 ಆಸ್ತಿಗಳಿಗೆ ತೆರಿಗೆ ಬಾಕಿ ವಸೂಲಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಇದೇ ಅವಧಿಯಲ್ಲಿ, ಕಂದಾಯ ಅಧಿಕಾರಿಗಳು ನಿವೇಶನಗಳನ್ನು ಸೀಲ್ ಮಾಡಿದರೂ ತೆರಿಗೆ ಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ 7,203 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಒಟ್ಟು 500 ಕೋಟಿ ರೂ.ಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಸುಸ್ತಿದಾರರ ವಿರುದ್ಧ ಬಿಬಿಎಂಪಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕ್ರಮ ಕೈಗೊಂಡಿದೆ. ಸುಸ್ತಿದಾರರ ಹಿಂದೆ ಹೋಗುವುದರ ಜೊತೆಗೆ, ಸ್ವ-ಮೌಲ್ಯಮಾಪನ ಯೋಜನೆ (ಎಸ್‌ಎಎಸ್) ಅಡಿಯಲ್ಲಿ ಸಲ್ಲಿಸಿದ ದಾಖಲೆಗಳು ಮತ್ತು ಆಸ್ತಿಯನ್ನು ಮರು ಪರಿಶೀಲಿಸಲು ನಾಗರಿಕ ಸಂಸ್ಥೆಯು ಆಸ್ತಿಗಳನ್ನು ಮರುಪರಿಶೀಲಿಸಲು ಪ್ರಾರಂಭಿಸಿದೆ.
ಇದನ್ನೂ ಓದಿ: ಬಾಕಿ ತೆರಿಗೆ ಪಾವತಿ ವಿಚಾರ: ಬಿಬಿಎಂಪಿ ಆಯುಕ್ತರ ಕೈಗೆ ಬೀಗ ಹಾಗೂ ಕೀಲಿಕೈ ಕೊಟ್ಟ ಬಿಜೆಪಿ ಶಾಸಕರ ನಿಯೋಗ
ಈ ಉಪಕ್ರಮವು ಬಿಬಿಎಂಪಿಯ ಆದಾಯವನ್ನು 550 ಕೋಟಿ ರೂ.ಗಳಷ್ಟು ಹೆಚ್ಚಿಸಲು ಸಹಾಯ ಮಾಡಿದೆ. ಆದರೆ ಈ ಕ್ರಮದ ಬಗ್ಗೆ ಕೆಲವು ವಲಯಗಳಿಂದ ಟೀಕೆಗಳು ವ್ಯಕ್ತವಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ