ಬಾಕಿ ತೆರಿಗೆ ಪಾವತಿ ವಿಚಾರ: ಬಿಬಿಎಂಪಿ ಆಯುಕ್ತರ ಕೈಗೆ ಬೀಗ ಹಾಗೂ ಕೀಲಿಕೈ ಕೊಟ್ಟ ಬಿಜೆಪಿ ಶಾಸಕರ ನಿಯೋಗ
ಈಗಾಗಲೇ ಪರಿಷ್ಕರಣೆಯ ನೆಪದಲ್ಲಿ 76,000 ಮನೆಗಳಿಗೆ ಬಿಬಿಎಂಪಿ ನೋಟೀಸ್ ನೀಡಿದೆ. ನೋಟೀಸ್ ನೀಡಿದ ತರುವಾಯ ಆಸ್ತಿ ತೆರಿಗೆ ಪಾವತಿಸದ ಹಲವಾರು ಕಟ್ಟಡಗಳಿಗೆ ಬೀಗ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ಬಾಕಿ ತೆರಿಗೆ ಕಟ್ಟಲು ವಿನಾಯ್ತಿ ನೀಡಿ, ದಂಡ ಕಡಿತ ಮಾಡಿ ಇಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಬೀಗ ಹಾಕಿ ಎಂದು ಬಿಜೆಪಿ ಶಾಸಕರ ನಿಯೋಗ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಬೀಗ ಹಾಗೂ ಬೀಗದ ಕೈ ಕೊಟ್ಟಿದೆ.
ಬೆಂಗಳೂರು, ಫೆಬ್ರವರಿ 12: ತೆರಿಗೆ ವಿನಾಯ್ತಿ ನೀಡಿ, ದಂಡ ಕಡಿತ ಮಾಡಿ ಇಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಬೀಗ ಹಾಕಿ ಎಂದು ಬಿಜೆಪಿ ಶಾಸಕರ ನಿಯೋಗ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರಿಗೆ ಬೀಗ ಹಾಗೂ ಬೀಗದ ಕೈ ಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕಲು ನಿರ್ಧರಿಸಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಬಿಬಿಎಂಪಿಯ ಈ ನಿರ್ಧಾರವನ್ನು ವಿರೋಧಿಸಿ ಬಿಜೆಪಿ (BJP) ಶಾಸಕರ ನಿಯೋಗ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿ ಮಾಡಿ, ಬಾಕಿ ತೆರಿಗೆ ವಸೂಲಿಯನ್ನು ಹಂತ ಹಂತವಾಗಿ ಪಾವತಿಸಲು ಅನುಮತಿ ನೀಡಿ, ಎಂದು ಮನವಿ ಪತ್ರ ಸಲ್ಲಿಸಿತು. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿಯ ಪತ್ರದಲ್ಲಿ ಏನಿದೆ?
ಬೆಂಗಳೂರು ಮಹಾನಗರ ಪಾಲಿಕೆಯು ನಗರದ ನಾಗರಿಕರ ಮೇಲೆ ಬಾಕಿ ತೆರಿಗೆ ವಸೂಲಿಯ ಹೆಸರಲ್ಲಿ ಯುದ್ಧವನ್ನು ಸಾರಿದೆ. ಸ್ವಯಂ ಆಸ್ತಿ ತೆರಿಗೆ ಘೋಷಣೆಯಲ್ಲಿ ದೋಷಪೂರಿತವಾಗಿರುವ ಕಟ್ಟಡಗಳಿಗೆ ದುಪ್ಪಟ್ಟು ದಂಡ, ಬಡ್ಡಿ ಮತ್ತು ಕಾನೂನುಬಾಹಿರವಾಗಿ ಆರೇಳು ವರ್ಷಗಳ ಹಿಂದಿನ ಬಾಕಿಯ (ರೆಟ್ರಾಸ್ಪೆಕ್ಟಿವ್) ಕಂದಾಯ ವಸೂಲಿ ಮಾಡುವಾಗ ದುಬಾರಿ ದಂಡ ಮತ್ತು ಬಡ್ಡಿಯನ್ನು ವಿಧಿಸುತ್ತಿದ್ದಾರೆ.
ಈಗಾಗಲೇ ಪರಿಷ್ಕರಣೆಯ ನೆಪದಲ್ಲಿ 76,000 ಮನೆಗಳಿಗೆ ನೋಟೀಸ್ ನೀಡಲಾಗಿದೆ. ನೋಟೀಸ್ ನೀಡಿದ ತರುವಾಯ ಆಸ್ತಿ ತೆರಿಗೆ ಪಾವತಿಸದ ಹಲವಾರು ಕಟ್ಟಡಗಳಿಗೆ ಬೀಗ ಹಾಕಿ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಇವರ ಜನವಿರೋಧಿ ಕ್ರಮದಿಂದ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಅವರ ವ್ಯಾಪಾರ ಮತ್ತು ಜೀವನವನ್ನು ಹಾಳು ಮಾಡಿ ಅವರ ಹೊಟ್ಟೆಯ ಮೇಲೆ ಹೊಡೆಯುವ ಕ್ರೂರ ವರ್ತನೆಯನ್ನು ಪಾಲಿಕೆಯು ತೋರುತ್ತಿದೆ. ಇವರ ಏಕಪಕ್ಷೀಯ ನೋಟೀಸ್ ವಿರುದ್ಧ ಹಲವಾರು ನಾಗರಿಕರು ನ್ಯಾಯಾಲಯದ ಬಾಗಿಲು ಬಡಿದು ಲಾಯರ್ ಫೀಸ್ ಗೆ ವೆಚ್ಚಮಾಡಿ ಮತ್ತಷ್ಟು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ವಾಸ್ತವವಾಗಿ ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಬಿಬಿಎಂಪಿ ಕಾಯಿದೆ ಸೆ.144 sub (15) (B) ಅಡಿಯಲ್ಲಿ ಐದು ವರ್ಷದ ಹಿಂದಿನ ಬಾಕಿಯ (Retrospective) ಹೆಸರಲ್ಲಿ ದಂಡ ಮತ್ತು ಬಡ್ಡಿ ವಸೂಲಿ ಮಾಡುವ ಅಧಿಕಾರವಿಲ್ಲ. ಆದರೆ ಕಾಯಿದೆಯ ವಿರುದ್ಧವಾಗಿ ಪಾಲಿಕೆಯು ಕ್ರಮ ಜರುಗಿಸುತ್ತಿದೆ. ಅಧಿಕಾರಿಗಳು ಜನರ ದೌರ್ಬಲ್ಯವನ್ನು ದುರುಪಯೋಗಿಸಿಕೊಂಡು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ.
ನಗರದಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ವಿಫಲವಾಗಿರುವ ಸರ್ಕಾರವು ಇದೀಗ ನಗರದ ನಾಗರಿಕರನ್ನು ಸುಲಿಗೆ ಮಾಡಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಮುಂದಾಗಿದೆ. ಹಗಲು ದರೋಡೆಯನ್ನು ಮೀರಿಸಿರುವ ಜನವಿರೋಧಿ ನಡವಳಿಕೆಯನ್ನು ಪಾಲಿಕೆಯ ಕಂದಾಯ ಇಲಾಖೆಯ ಅಧಿಕಾರಿಗಳು ಪ್ರದರ್ಶಿಸುತ್ತಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ; 60 ಜನರಿಗೆ 15 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿದ ಗ್ಯಾಂಗ್ ಬಂಧನ
ಅನೇಕ ವರ್ಷಗಳಿಂದ ಚಾಲ್ತಿಯಲ್ಲಿರುವ ಸ್ವಯಂಆಸ್ತಿ ಘೋಷಣೆಯಲ್ಲಿನ ನ್ಯೂನತೆಯ ಹೆಸರಲ್ಲಿ ಕಟ್ಟಡಗಳ ಮಾಲಿಕರಿಗೆ ನೋಟೀಸ್ ನೀಡಿ ಅವರಿಂದ ಅಕ್ರಮ ವಸೂಲಿಗೆ ಪಾಲಿಕೆ ಇಳಿದಿದೆ.ಈಗಾಗಲೇ ನಗರದಲ್ಲಿ ಡಿಕೆ ಟ್ಯಾಕ್ಸ್ ನಿಂದ ಬಳಲಿ ಬೆಂಡಾಗಿರುವ ನಾಗರಿಕರಿಗೆ ಈ ಆಸ್ತಿ ತೆರಿಗೆ ಸುಲಿಗೆಯು ಹೊರಲಾರದ ಹೊರೆಯಾಗಿದೆ.
ಸದ್ಯ ತೆರಿಗೆ ವಸೂಲಿ ಮಾಡುವಾಗ ಬಾಕಿ ಇರುವ ತೆರಿಗೆ ಹಣಕ್ಕಿಂತ ಅಧಿಕ ಪಟ್ಟು ದಂಡ ವಿಧಿಸಲಾಗುತ್ತಿದೆ. ಕಂದಾಯ ಇಲಾಖಾ ಅಧಿಕಾರಿಗಳಿಗೆ ಈಗ ಈ ಪರಿಷ್ಕರಣೆಯ ವಸೂಲಿಗೆ ದೊಡ್ಡ ಆದಾಯ ಮೂಲವಾಗಿದೆ. ವಾಸ್ತವವಾಗಿ ನಾಗರಿಕರಿಗೆ ಆರು ವರ್ಷ ಕ್ಕೂ ಹಿಂದಿನ ಬಾಕಿ ವಸೂಲಿಗೆ ದಂಡ ಮತ್ತು ಬಡ್ಡಿ ವಿಧಿಸುವುದು ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಅದನ್ನು ಅವರಿಂದ ಮರೆಮಾಚಿ ಅಮಾಯಕ ಜನತೆಯಿಂದ ವಸೂಲಿ ನಡೆಯುತ್ತಿದೆ.
ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹಳೆಯ ಬಾಕಿ ವಸೂಲಿಯು ಹಲವಾರು ವರ್ಷಗಳಿಂದ ಮಾಡಿರಲಿಲ್ಲ ಮತ್ತು ಆಸ್ತಿ ತೆರಿಗೆ ನೀಡದವರಿಗೆ ಆಯಾ ವರ್ಷದಲ್ಲೇ ಎಚ್ಚರಿಸುವ ಅಥವಾ ನೋಟೀಸ್ ಮೂಲಕ ಪಾವತಿಸಲು ನೆನಪಿಸುವ ಯಾವುದೇ ವ್ಯವಸ್ಥೆಯು ಪಾಲಿಕೆಯಲ್ಲಿ ಜಾರಿ ಇಲ್ಲದಿರುವುದು ಬಹುದೊಡ್ಡ ದೋಷವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಪಾಲಿಕೆ ಹಿಂದೆ ಬಿದ್ದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆಘಾತಕಾರಿ ಸಂಗತಿಯಂದರೆ ನಗರದಲ್ಲಿ ಆರು ಲಕ್ಷಕ್ಕೂ ಹೆಚ್ಚು ಆಸ್ತಿಯಿಂದ ತೆರಿಗೆ ವಸೂಲಿ ಮಾಡಲಾಗುತ್ತಿಲ್ಲ. ಕೇವಲ ನಗರದ 19.5 ಲಕ್ಷ ಮನೆಗಳಿಂದ ಮಾತ್ರ ತೆರಿಗೆ ವಸೂಲಿಯಾಗುತ್ತಿರುವುದು.
ಅಭಿವೃದ್ಧಿ ಯೋಜನೆಗಳಿಗೆ ತಿಲಾಂಜಲಿ ನೀಡಿ ಪಾಲಿಕೆಯ ಸಂಪನ್ಮೂಲದ ಮೂಲಕ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ಉಂಟಾಗಿರುವ ಕೊರತೆಯನ್ನು ತುಂಬಿಸಲು ರಾಜ್ಯ ಸರಕಾರ ನಗರದ ನಾಗರಿಕ ಸುಲಿಗೆ ಇಳಿದಿದೆ. ಮಹಾನಗರ ಪಾಲಿಕೆಯು ಕೂಡಲೇ ಹಳೆಯ ಬಾಕಿ ವಸೂಲಿಯ ನೆಪದಲ್ಲಿ ದಂಡ ಪಾವತಿ ಬಗ್ಗೆ ನೀಡಿರುವ ಅವೈಜ್ಞಾನಿಕ ನೋಟೀಸ್ ಕೂಡಲೇ ಹಿಂಪಡೆಯಬೇಕು.
ವಾಣಿಜ್ಯ ಮತ್ತು ಮನೆಗಳಿಗೆ ಲಕ್ಷಾಂತರ ರೂಪಾಯಿ ದಂಡ ಮತ್ತು ಬಡ್ಡಿ ವಿಧಿಸಿ ಅದನ್ನು ಪಾವತಿಸಲು ತಡ ಮಾಡುವವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ಮತ್ತು ಅವರ ಮಳಿಗೆಗಳಿಗೆ ಬೀಗ ಹಾಕಿ ಕಿರುಕುಳ ನೀಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು.
ಸ್ವಯಂ ಆಸ್ತಿ ಘೋಷಣೆಗೆ ವಲಯ ವಿಂಗಡನೆಯಲ್ಲಿರುವ ಅವೈಜ್ಞಾನಿಕ ನ್ಯೂನತೆಯನ್ನು ಮಹಾನಗರ ಪಾಲಿಕೆ ಮೊದಲು ಸರಿಪಡಿಸಿ ನಾಗರಿಕ ಸ್ನೇಹಿ ಪದ್ಧತಿಯನ್ನು ಜಾರಿಗೊಳಿಸಬೇಕು. ಬಾಕಿ ಇರುವ ತೆರಿಗೆ ಪಾವತಿಗೆ ಪಾಲಿಕೆಯು ನೀಡುತ್ತಿರುವ 30 ದಿನಗಳ ಕಾಲಾವಧಿಯನ್ನು 90 ದಿನಗಳಿಗೆ ವಿಸ್ತರಿಸಬೇಕು.
ಬ್ರಾಂಡ್ ಬೆಂಗಳೂರು ನಿರ್ಮಿಸುವ ಕಾರ್ಯಸೂಚಿಯು ಶೀತಲ ಪೆಟ್ಟಿಗೆಯನ್ನು ಸೇರಿದೆ ಅದಕ್ಕೆ ವ್ಯತಿರಿಕ್ತವಾಗಿ ನಗರದ ನಾಗರಿಕ ಮೇಲೆ ಕಂದಾಯ ತೆರಿಗೆ ಹೆಸರಿನಲ್ಲಿ ಅಧಿಕಾರಿಗಳ ಮೂಲಕ ದೌರ್ಜನ್ಯವನ್ನು ಸರಕಾರ ನಡೆಸಿ, ಬೆಂಗಳೂರು ನಾಗರಿಕರ ಮೇಲೆ ಕೈಗೊಳ್ಳುತ್ತಿರುವ ದಬ್ಬಾಳಿಕೆಯನ್ನು ತಕ್ಷಣವೇ ನಿಲ್ಲಿಸಬೇಕು.
ಪಾಲಿಕೆಯಲ್ಲಿನ ಮಿತಿಮೀರಿದ ಭ್ರಷ್ಟಾಚಾರದಿಂದ ನಲುಗಿ ಹೋಗಿರುವ ನಗರದ ಜನತೆಗೆ ಕಂದಾಯ ಇಲಾಖೆಯು ನೀಡುತ್ತಿರುವ ಕಿರುಕುಳವನ್ನು ಬಿಜೆಪಿ ನಗರ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದಿದೆ.
ಕಾಟ ಕೊಡೋದು ಬಿಡಿ, ದಂಡ ಎನ್ನುವ ಪದ್ದತಿ ತೊಲಗಬೇಕು: ಸುರೇಶ್ ಕುಮಾರ್
ಏಕಾಏಕಿ ದಂಡ ಹಾಕುವ ಪದ್ದತಿ ನಿಲ್ಲಿಸಿ. ಇನ್ಸ್ಟಾಲ್ಮೆಂಟ್ನಲ್ಲಿ ತೆರಿಗೆ ಕಟ್ಟಿಸಿಕೊಳ್ಳಿ. ಕಾಟ ಕೊಡುವುದು ಬಿಡಿ. ದಂಡ ಎನ್ನುವ ಪದ್ದತಿ ತೊಲಗಬೇಕು. ಮೇಲಾಧಿಕಾರಿಗಳಿಂದ ಕೆಳ ಪಾಲಿಕೆಯ ಅಧಿಕಾರಿಗಳ ಮೇಲೆ ಒತ್ತಡ ಇದೆ. ಅದು ತೆರಿಗೆ ಸಂಗ್ರಹಕ್ಕೆ ಬರುವ ಅಧಿಕಾರಿಗಳ ಮುಖದಲ್ಲಿ ಕಾಣಿಸುತ್ತಿದೆ. ಸದನದಲ್ಲಿ ಪಾಲಿಕೆ ತೆರಿಗೆ ಬಗ್ಗೆ ಪ್ರಸ್ತಾಪ ಮಾಡುತ್ತೇವೆ, ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ