ಪಿಎಸ್​ಐ ನೇಮಕಾತಿ ಮರುಪರೀಕ್ಷೆ ನಿರ್ಧಾರ: ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವೀಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Apr 29, 2022 | 8:46 PM

ಪೊಲೀಸ್ ಸಬ್​ ಇನ್ಸ್​ ಪೆಕ್ಟರ್​​ ನೇಮಕಾತಿ (PSI Recruitment Scam) ಅಕ್ರಮಕ್ಕೆ ಬ್ರೇಕ್ ಹಾಕಲು ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮರು ಪರೀಕ್ಷೆ ಮಂತ್ರದಂಡವನ್ನು ಝಳಪಿಸಿದ್ದಾರೆ.

ಪಿಎಸ್​ಐ ನೇಮಕಾತಿ ಮರುಪರೀಕ್ಷೆ ನಿರ್ಧಾರ: ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವೀಟ್​
ಐಪಿಎಸ್​ ಅಧಿಕಾರಿ ಡಿ. ರೂಪಾ
Follow us on

ಬೆಂಗಳೂರು: ಪ್ರಸ್ತುತವಾಗಿ ಸಾಕಷ್ಟು ದಿನಗಳಿಂದ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಅಕ್ರಮ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್‌ ಇಲಾಖೆಯ ನೇಮಕಾತಿ ಶಂಕೆ ಹುಟ್ಟಿಕೊಂಡ ಬೆನ್ನಲ್ಲೇ ಆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ADGP) ಅಮೃತ್‌ ಪಾಲ್‌(Amrit Paul) ಅವರನ್ನು ರಾಜ್ಯ ಸರ್ಕಾರ ಬುಧವಾರ ವರ್ಗಾವಣೆಗೊಳಿಸಿದೆ. ಅಕ್ರಮ ನಡೆದಿರುವುದು ಖಚಿತವಾಗುತ್ತಿದ್ದಂತೆ ಅಮೃತ್​ ಪಾಲ್ ಅವರ ವರ್ಗಾವಣೆಗೆ ಪೊಲೀಸ್​ ವಲಯದಲ್ಲೇ ಒತ್ತಡ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಐಪಿಎಸ್​ ಅಧಿಕಾರಿ ಡಿ. ರೂಪಾ ಟ್ವೇಟ್​ ಮಾಡಿದ್ದಾರೆ. ಪಿಎಸ್​ಐ ನೇಮಕಾತಿ ಮರುಪರೀಕ್ಷೆ ನಿರ್ಧಾರದ ಮೂಲಕ ನೊಂದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರವು ನ್ಯಾಯ ಒದಗಿಸಿದೆ. ನೇಮಕಾತಿ ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿಗಳಿಂದ ಹಿಡಿದು ಅಮಾನತ್ತು ಮುಂತಾದ ಶಿಸ್ತು ಕ್ರಮ(ಟ್ರಾನ್ಸ್ಫರ್ ಶಿಸ್ತುಕ್ರಮ ಅಲ್ಲ) ಆದಾಗ ಮಾತ್ರ ಮುಂದೆ ಇಂತಹ ಘಟನೆ ತಡೆಯಲು ಸಾಧ್ಯ. ಇಲ್ಲವಾದಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂದು ಪಿಎಸ್ಐ ನೇಮಕಾತಿ ಹಗರಣದ ಕುರಿತಾಗಿ ಅವರು ಟ್ವೀಟ್​ ಮಾಡಿದ್ದಾರೆ.

ಪೊಲೀಸ್ ಸಬ್​ ಇನ್ಸ್​ ಪೆಕ್ಟರ್​​ ನೇಮಕಾತಿ (PSI Recruitment Scam) ಅಕ್ರಮಕ್ಕೆ ಬ್ರೇಕ್ ಹಾಕಲು ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮರು ಪರೀಕ್ಷೆ ಮಂತ್ರದಂಡವನ್ನು ಝಳಪಿಸಿದ್ದಾರೆ. ಇನ್ನು ಈ ಸಂಬಂಧ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪರೀಕ್ಷೆ ಅಕ್ರಮ ನಡೆದಾಗ ಮರು ಪರೀಕ್ಷೆ (PSI Re Exam) ನಡೆಸುವುದು ವಾಡಿಕೆ. ಹಿಂದಿನಿಂದಲೂ ಇದೇ ರೀತಿ‌ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮದ ವ್ಯಾಪಕತೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ. ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೇ ಮಾತ್ರವೇ ಮತ್ತೆ ಪರೀಕ್ಷೆಗೆ ಅವಕಾಶ ನೀಡಲಾಗುವುದು. ಹೊಸಬರಿಗೆ ಅವಕಾಶ ಇರುವುದಿಲ್ಲ ಎಂದಿದ್ದಾರೆ. 545 ಪೊಲೀಸ್ ಸಬ್​ ಇನ್ಸ್​ ಪೆಕ್ಟರ್​​ ನೇಮಕಾತಿ ನೋಟಿಫಿಕೇಷನ್ ಮಾತ್ರ ರದ್ದು ಮಾಡಿ ಮರುಪರೀಕ್ಷೆ ನಡೆಸಲಾಗುವುದು ಎಂದು ಸ್ವತಃ ತಾವೇ ಗೃಹ ಸಚಿವರಾಗಿದ್ದಾಗ ಹೊರಡಿಸಿದ್ದ ನೇಮಕಾತಿ ನೋಟಿಫಿಕೇಷನ್ ರದ್ದು ಬಗ್ಗೆ ಸಿಎಂ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.

ಹೇಗೆ ನಡೆಯಿತು ಅಕ್ರಮ?
ಪೋಲಿಸರ ತನಿಖೆ ವೇಳೆ ಪಿಎಸ್​ಐ ನೇಮಕಾತಿ ಅಕ್ರಮ ಹೇಗೆ ನಡೆಯಿತು ಎಂಬ ಮಾಹಿತಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಪಿಎಸ್ಐ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನೀಡುತ್ತಿದ್ದ ಒಎಂಆರ್​ನ ನಕಲು ಪ್ರತಿಗಳನ್ನು ಸಿಬ್ಬಂದಿ ಪಡೆಯುತ್ತಿದ್ದರು. ಇದೇ ಅನುಮಾನದ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಐಡಿ ವಿಸ್ತೃತ ವಿಚಾರಣೆಗೆ ಒಳಪಡಿಸಿತ್ತು. ಲಕ್ಷ-ಲಕ್ಷ ಹಣ ನೀಡಿದವರಿಗೆ ಪರೀಕ್ಷೆ ಪ್ರಾರಂಭವಾಗುವುದಕ್ಕೆ 15-20 ನಿಮಿಷ ಮೊದಲು ಉತ್ತರಗಳು ಲಭ್ಯವಾಗುತ್ತಿದ್ದವು. ಪೊಲೀಸ್ ಸಿಬ್ಬಂದಿಯ ಮಗನೊಬ್ಬನ ಚಲನವಲನ ಗಮನಿಸಿದ್ದ ಸ್ಥಳೀಯ ವ್ಯಕ್ತಿ ಅನುಮಾನಗೊಂಡು ದೂರು ನೀಡಿದ್ದ. ಅವನ ವಿಚಾರಣೆ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿದ್ದವು.

ಅಕ್ರಮದಲ್ಲಿ ಭಾಗಿಯಾಗಿರುವ ಮೇಲ್ವಿಚಾರಕರು ಪರೀಕ್ಷಾರ್ಥಿಗಳಿಂದ ಒಎಂಆರ್​ ಶೀಟ್​ಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ‌ ಮೇಲ್ವಿಚಾರಕರೇ ಉತ್ತರಗಳನ್ನು ಒಎಂಆರ್​ ಶೀಟ್​ಗೆ ಎಂಟ್ರಿ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.

ಈ ಎಲ್ಲ ಅಕ್ರಮಗಳಿಗೆ ದಿವ್ಯಾ ಹಾಗರಗಿ ಒಡೆತನ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯೇ ಕೇಂದ್ರ ಸ್ಥಾನವಾಗಿತ್ತು. ಕಿಂಗ್​ಪಿನ್ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ ಜೊತೆ ಡೀಲ್ ಮಾಡಿಕೊಂಡಿದ್ದ ದಿವ್ಯಾ ಹಾಗರಗಿ ತನ್ನ ಪ್ರಭಾವವನ್ನು ಬೀರಿ, ತನ್ನ ಶಾಲೆಗೆ ಪರೀಕ್ಷಾ ಕೇಂದ್ರವನ್ನು ಮಜೂರು ಮಾಡಿಸಿಕೊಂಡಿದ್ದರು. ತನ್ನ ಶಾಲೆಯ ಸಿಬ್ಬಂದಿಯನ್ನೇ ಅಕ್ರಮ ಚಟುವಟಿಕೆಗಳಿಗೂ ಬಳಸಿಕೊಂಡಿದ್ದರು. ಪ್ರಶ್ನಪತ್ರಿಕೆಯನ್ನು ಕಿಂಗ್​ಪಿನ್​ಗಳಿಗೆ ಕಳಿಸಿದ್ದ ಇವರು, ಪರೀಕ್ಷೆ ಮುಗಿದ ನಂತರ ಒಎಂಆರ್​ ಶೀಟ್​ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಉತ್ತರಗಳನ್ನು ತುಂಬಿದ್ದರು.

ಇದನ್ನೂ ಓದಿ:

GT vs RCB Prediction Playing XI: ಸೋಲಿನ ಸುಳಿಯಲ್ಲಿರುವ ಆರ್​ಸಿಬಿಯಲ್ಲಿ ಬದಲಾವಣೆ ಖಚಿತ! ಕೊಹ್ಲಿಗೆ ಕೋಕ್?

ಮನರಂಜನೆಯ ರುಚಿ ನೀಡಲು ‘ತೋತಾಪುರಿ’ ಟೀಂ ರೆಡಿ- ಟ್ರೆಂಡಿಂಗ್ ನಲ್ಲಿ ಟ್ರೇಲರ್

Published On - 7:06 pm, Fri, 29 April 22