ಪಿಎಸ್​ಐ ಹುದ್ದೆಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ: ಆರಗ ಜ್ಞಾನೇಂದ್ರ

PSI Recruitment 2022, Karnataka PSI Exam 2022: ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು. ಆರೋಪಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಸಿಗುವುದಿಲ್ಲ. ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಸಚಿವರು ಹೇಳಿದರು.

ಪಿಎಸ್​ಐ ಹುದ್ದೆಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ: ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 29, 2022 | 1:45 PM

ಬೆಂಗಳೂರು: ಕರ್ನಾಟಕದಲ್ಲಿ ಪಿಎಸ್​ಐ ಹುದ್ದೆಗೆ  (PSI Recruitment Scam) ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಹೇಳಿದರು. ಈ ಹಿಂದೆ ನಡೆದಿದ್ದ ಪಿಎಸ್‌ಐ ಪರೀಕ್ಷೆ ಫಲಿತಾಂಶವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶುಕ್ರವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿ ನಡೆಸಿದರು. ಬೆಂಗಳೂರಿನ ಕೇಂದ್ರದಲ್ಲೂ ಅಕ್ರಮದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ನಿರ್ಧರಿಸಲಾಗಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲಾಗುವುದು. ಆರೋಪಿಗಳಿಗೆ ಮರು ಪರೀಕ್ಷೆಯಲ್ಲಿ ಅವಕಾಶ ಸಿಗುವುದಿಲ್ಲ. ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ಹೇಳಿದರು.

ಮರು ಪರೀಕ್ಷೆ ದಿನಾಂಕವನ್ನು ಶೀಘ್ರ ಪ್ರಕಟಿಸುತ್ತೇವೆ ಎಂದ ಆರಗ ಜ್ಞಾನೇಂದ್ರ, ಸರ್ಕಾರದ ಪರೀಕ್ಷೆಗಳಲ್ಲಿ ಅವ್ಯವಹಾರ ತಡೆಗಟ್ಟಲು ಕಠಿಣ ಕಾಯ್ದೆ ರೂಪಿಸಲು ಮುಂದಾಗಿದ್ದೇವೆ. ಈ ಕುರಿತ ವಿವರಗಳನ್ನು ತಿಳಸುತ್ತೇನೆ.

ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವವರ ವಿರುದ್ಧ ಮಾತ್ರ ಕ್ರಮ ಜರುಗಿಸಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಬಾರದು ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ. ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಉತ್ತರ ಪತ್ರಿಕೆಯನ್ನು ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ಮಾಡಿಸಿ. ಅದರಲ್ಲಿ ಉತ್ತರ ಯಾವಾಗ ಬರೆದರು ಅನ್ನೋ ಸತ್ಯ ಗೊತ್ತಾಗಲಿದೆ. ಅಕ್ರಮದಲ್ಲಿ ಭಾಗಿಯಾದವರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ಪಕ್ಷದವರೇ ಇರಲಿ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಕಷ್ಟಪಟ್ಟು ಓದುವವರ ಆತ್ಮವಿಶ್ವಾಸವನ್ನ ಎಂದಿಗೂ ಕುಗ್ಗಿಸಬಾರದು. ಪರೀಕ್ಷೆಗಳು ಪಾರದರ್ಶಕವಾಗಿರಬೇಕು. 50 ಲಕ್ಷ ಕೊಟ್ಟು ಪಿಎಸ್‌ಐ ಆದವರು ಯಾವ ರೀತಿ ಕೆಲಸ ಮಾಡಬಹುದು? ಮೊದಲ ದಿನದಿಂದಲೇ ಲಂಚದ ಅಂಗಡಿ ತೆರೆಯುತ್ತಾರೆ. ಈಗಾಗಲೇ ಮಿನಿಟ್‌ಗೆ ಮತ್ತೊಂದಕ್ಕೆ ಲಂಚ ಇದೆ. ಇದರಿಂದ ಜನ ಸಾಮಾನ್ಯರಾಗಿ ನ್ಯಾಯ ಹೇಗೆ ಕೊಡುತ್ತಾರೆ. ಪರೀಕ್ಷಾ ಅಕ್ರಮದ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ದಿವ್ಯಾ ಹಾಗರಗಿ ಸಚರರ ಬಂಧನ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯಲ್ಲಿ ದಿವ್ಯಾ ಹಾಗರಗಿ ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ದಿವ್ಯಾ ಹಾಗರಗಿ, ಅರ್ಚನಾ, ಡ್ರೈವರ್ ಸದ್ದಾಂ, ಸುರೇಶ್, ಸಹಾಯಕ ಕಾಳಿದಾಸ, ಕೆಲಸದವಳಾದ ಸುನಂದಾ ಬಂಧಿತರು. ಬಂಧಿತ ಆರೋಪಿಗಳನ್ನ ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಕಾಸಸೌಧದಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದರು.

ಗೃಹ ಇಲಾಖೆಯ ಎಸಿಎಸ್ ರಜನೀಶ್ ಗೋಯೆಲ್, ಡಿಜಿಪಿ ಪ್ರವೀಣ್ ಸೂದ್ ಸಹ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ಅವ್ಯವಹಾರ ಆಗಿದೆ ಎಂಬ ಸಂಗತಿ ತಿಳಿದುಬಂದಿದೆ. ಹೀಗಾಗಿಯೇ ಪಿಎಸ್​ಐ ಪರೀಕ್ಷೆಯನ್ನು ಸರ್ಕಾರ ರದ್ದುಪಡಿಸಿದೆ. ಪರೀಕ್ಷೆ ಬರೆದಿದ್ದ 54,289 ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದದೆ. ಅಪಾದಿತರರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ಶೀಘ್ರದಲ್ಲೇ ಮರು ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದರು. ಮರು ಪರೀಕ್ಷೆಗೆ ಸಂಬಂಧಿಸಿದಂತೆ ಸಿಐಡಿ ಯಾವುದೇ ವರದಿ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಹುಬ್ಬಳ್ಳಿ ಗಲಭೆ ಆಪಾದಿತರಿಗೆ ಕಿಟ್ ವಿತರಿಸಿರುವ ಜಮೀರ್ ಅಹಮದ್ ವರ್ತನೆಯನ್ನು ಗೃಹ ಸಚಿವರು ಖಂಡಿಸಿದರು. ಸಮಾಜದ್ರೋಹಿ ಶಕ್ತಿಗಳನ್ನು ಶಾಸಕರು ಪ್ರೋತ್ಸಾಹಿಸಬಾರದು. ಶಾಸಕರೇ ಈ ರೀತಿ ನಡೆದುಕೊಂಡರೆ ಅದು ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ. ಕಾಂಗ್ರೆಸ್ ಪಕ್ಷ ಮತ್ತು ಜನತೆ ಈ ಬಗ್ಗೆ ಯೋಚನೆ ಮಾಡಬೇಕು ಎಂದರು.

ಬಿಜೆಪಿಯಿಂದ ದಿವ್ಯಾ ರಕ್ಷಣೆ ಇಲ್ಲ: ಸಿ.ಟಿ.ರವಿ ಚಿಕ್ಕಮಗಳೂರು: ದಿವ್ಯಾ ಹಾಗರಗಿಯನ್ನು ಬಿಜೆಪಿ ರಕ್ಷಿಸುವುದಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು. ತಾನು ಕಳ್ಳ ಪರರ ನಂಬ ಎಂಬ ಮಾತು ಕಾಂಗ್ರೆಸ್ಸಿಗೆ ಅನ್ವಯವಾಗುತ್ತದೆ. ಸಿದ್ದರಾಮಯ್ಯ ವಿರುದ್ಧ ಕಳ್ಳತನದ ವಾಚ್ ಪ್ರಕರಣ ಬಂದಿತು. ಆ ವಾಚ್ ಸಿಎಂ ಕೈಗೆ ಹೇಗೆ ಬಂತು ಎಂಬುದು ಇಲ್ಲಿಯವರೆಗೆ ತನಿಖೆ ಆಗಲೇ ಇಲ್ಲ. ಆ ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಅರ್ಕಾವತಿ ಭೂಹಗರಣದಲ್ಲಿ ಸಾವಿರಾರು ಎಕರೆ ಜಮೀನನ್ನ ಡಿನೋಟಿಫಿಕೇಶನ್ ಮಾಡಿದ್ದರು. ಒಂದೊಂದು ಎಕರೆಗೆ 10 ಲಕ್ಷದಿಂದ 50 ಲಕ್ಷದ ತನಕ ತೆಗೆದುಕೊಂಡರು. ಈ ಡಿನೋಟಿಫಿಕೇಶನ್​ಗೆ ರೀಡ್ಯೂ ಅನ್ನೋ ಹೊಸ ಪರಿಭಾಷೆಯನ್ನು ಹುಟ್ಟು ಹಾಕಿದರು. ಈ ಪ್ರಕರಣವನ್ನು ಕೂಡ ತಿಪ್ಪೆ ಸಾರಿಸಿದ್ರು, ತಿಪ್ಪೆ ಸಾರಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಕಾಂಗ್ರೆಸ್ಸಿಗರು ನಮ್ಮ ರೀತಿಯೇ ಬಿಜೆಪಿ ಅಂತ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಮನಸ್ಥಿತಿಯಲ್ಲಿಯೇ ಬಿಜೆಪಿಯು ಕಾರ್ಯನಿರ್ವಹಿಸುವಂತಿದ್ದರೆ ಹಾಗರಗಿ ಮೇಲೆ ಎಫ್ಐಆರ್ ಅನ್ನೇ ಹಾಕುತ್ತಿರಲಿಲ್ಲ. ಎಫ್​ಐಆರ್ ಮಾಡಿದ್ದು, ಸಿಐಡಿ ತನಿಖೆಗೆ ಆದೇಶಿಸಿದ್ದು ಬಿಜೆಪಿ ಸರ್ಕಾರ. ಈ ಪ್ರಕರಣದಲ್ಲಿ ಬಿಜೆಪಿಯವರು ಇದ್ರೂ ಶಿಕ್ಷೆ ಆಗುತ್ತೆ, ಕಾಂಗ್ರೆಸ್ಸಿಗರು ಇದ್ರೂ ಶಿಕ್ಷೆ ಆಗುತ್ತೆ ಎಂದು ಸ್ಪಷ್ಟಪಡಿಸಿದರು.

ಕೆಪಿಎಸ್​ಸಿ ಅಕ್ರಮದ ಬಗ್ಗೆ ನಿರ್ಲಕ್ಷ್ಯ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 545 ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದುಪಡಿಸಿದೆ. ಲೋಕೋಪಯೋಗಿ ಇಲಾಖೆಯ ಜೆಇ ಮತ್ತು ಎಇ ಹುದ್ದೆಗಳಿಗೆ ಕೆಪಿಎಸ್​ಸಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗಳ ಅಕ್ರಮದ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಲು ಹಿಂಜರಿಯುತ್ತಿದೆ.

ಇದನ್ನೂ ಓದಿ: PSI Recruitment Scam: ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್​ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ

ಇದನ್ನೂ ಓದಿ: PSI ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

Published On - 12:19 pm, Fri, 29 April 22