ಪುಲಿಕೇಶಿನಗರ ಸ್ಫೋಟ: ಐಇಡಿ ಬಳಕೆ ಶಂಕೆ ಬೆನ್ನಲ್ಲೇ ತನಿಖೆಗೆ ಎನ್‌ಐಎ ಎಂಟ್ರಿ ಸಾಧ್ಯತೆ
ಪುಲಿಕೇಶಿನಗರದಲ್ಲಿ ಸಂಭವಿಸಿದ ಅನುಮಾನಾಸ್ಪದ ಪಾರ್ಸೆಲ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಸ್ಫೋಟಕ್ಕೆ ಐಇಡಿ ಬಳಕೆಯ ಶಂಕೆ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದ್ದು, ಮೂರು ಬ್ಯಾಟರಿಗಳಿಂದ ಸ್ಫೋಟ ಸಂಭವಿಸಿರಬಹುದೆಂದು ಅನುಮಾನಿಸಲಾಗಿದೆ. ಅನಾಮಧೇಯ ಕರೆ ಬಂದಿದ್ದ ಬಗ್ಗೆ ಸೆಕ್ಯುರಿಟಿ ಗಾರ್ಡ್ ಮಾಹಿತಿ ನೀಡಿದ್ದು, ಎಫ್‌ಎಸ್‌ಎಲ್ ವರದಿ ಸೇರಿದಂತೆ ತನಿಖಾ ದಾಖಲೆಗಳನ್ನು ಎನ್‌ಐಎ ಕೇಳಿದೆ.

ಬೆಂಗಳೂರು, ಅಕ್ಟೋಬರ್ 22: ರಾಜಧಾನಿ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಾಹಿತಿ ಪಡೆದುಕೊಂಡಿದ್ದು, ತನಿಖಾ ವರದಿಗಳನ್ನು ಕೇಳಿದೆ. ಪ್ರಾಥಮಿಕ ತನಿಖೆಯಲ್ಲಿ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (IED) ಬಳಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯನ್ನು ಪರಿಶೀಲಿಸಿದ ಬಳಿಕ ಪ್ರಕರಣದ ತನಿಖೆಯಲ್ಲಿ ಎನ್‌ಐಎ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸ್ಫೋಟದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿರುವ ಎನ್‌ಐಎ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಕೇಳಿದ್ದಾರೆ. ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆಯೂ ಇದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಕೂಡ ಪರಿಶೀಲಿಸಲಿದ್ದಾರೆ. ಸ್ಥಳ ಪರಿಶೀಲನೆ ಮತ್ತು ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮೂರು ಬ್ಯಾಟರಿಗಳ ಬಳಕೆಯಿಂದ ಸ್ಫೋಟ? ಐಇಡಿ ಬಳಕೆಯ ಶಂಕೆ
ಮೂರು ಬ್ಯಾಟರಿಗಳನ್ನು ಬಳಸಿ ಸ್ಫೋಟಕ ಸಾಧನವನ್ನು ಸ್ಫೋಟಿಸಲಾಗಿದೆಯೇ ಎಂಬ ಅನುಮಾನ ಪ್ರಾಥಮಿಕ ತನಿಖೆಯ ವೇಳೆ ವ್ಯಕ್ತವಾಗಿದೆ. ಸ್ಫೋಟದ ನಿಖರ ಸ್ವರೂಪ ಮತ್ತು ಬಳಸಲಾಗಿರುವ ವಸ್ತುಗಳ ಬಗ್ಗೆ ವಿಧಿವಿಜ್ಞಾನ ವರದಿಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ಪ್ರಕರಣದ ತನಿಖೆಯನ್ನು ಎಟಿಸಿ ಹಾಗೂ ಸ್ಥಳೀಯ ಪೊಲೀಸರು ಮುಂದುವರಿಸಿದ್ದಾರೆ.
ಪೊಲೀಸರು ಈಗಾಗಲೇ ಎನ್‌ಐಎಗೆ ಅನಾಮಧೇಯ ಕರೆ ಬಂದಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೋಕೋ (SOCO) ತಂಡ ಹಾಗೂ ಎಫ್‌ಎಸ್‌ಎಲ್ ನಡೆಸಿದ ಪರಿಶೀಲನೆಗೆ ಸಂಬಂಧಿಸಿದ ವರದಿಗಳನ್ನು ಎನ್‌ಐಎಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅನಾಮಧೇಯ ಕರೆ ಬಂದಿತ್ತು ಎಂದ ಸೆಕ್ಯುರಿಟಿ ಗಾರ್ಡ್
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದೊಳಗೆ ಪಾರ್ಸೆಲ್ ಇಡಲು ಸೆಕ್ಯುರಿಟಿ ಗಾರ್ಡ್ ಮುಂದಾಗಿದ್ದ. ತನಗೆ ಅನಾಮಧೇಯ ಕರೆ ಬಂದಿದ್ದು, ಪಾರ್ಸೆಲ್ ಅನ್ನು ಕಟ್ಟಡದ ಒಳಗೆ ಇಡುವಂತೆ ಸೂಚಿಸಲಾಗಿತ್ತು ಎಂದು ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಳಿಕ ಸೆಕ್ಯುರಿಟಿ ಗಾರ್ಡ್ ಮತ್ತು ಪೇಂಟರ್ ಇಬ್ಬರೂ ಸೇರಿ ಪಾರ್ಸೆಲ್ ತೆರೆಯಲು ಮುಂದಾದಾಗ ಸ್ಫೋಟ ಸಂಭವಿಸಿದೆ ಎಂದು ಇಬ್ಬರೂ ತಿಳಿಸಿದ್ದಾರೆ. ಅನಾಮಧೇಯ ಕರೆ, ಪಾರ್ಸೆಲ್‌ನ ಮೂಲ ಹಾಗೂ ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಎಟಿಸಿ ಹಾಗೂ ಸ್ಥಳೀಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಎನ್‌ಐಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಲಭ್ಯವಿರುವ ಸಾಕ್ಷ್ಯಗಳು ಮತ್ತು ವರದಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ.
ಪುಲಿಕೇಶಿನಗರ ಸ್ಫೋಟದ ಹಿನ್ನೆಲೆ
ಅಕ್ಟೋಬರ್ 20ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪುಲಿಕೇಶಿನಗರದ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿತ್ತು. ಬ್ಯಾಟರಿ ಆನ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಾವುದ್ದೀನ್ ಮತ್ತು ನರೇಶ್ ಎಂಬ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.
ಇದನ್ನೂ ಓದಿ: ಪುಲಿಕೇಶಿನಗರ ಅನುಮಾನಾಸ್ಪದ ಸ್ಫೋಟ: FIR ದಾಖಲು; ತನಿಖೆಗೆ ವಿಶೇಷ ತಂಡಗಳ ರಚನೆ
ಘಟನೆಗೆ ಸಂಬಂಧಿಸಿದಂತೆ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಎಸ್‌ಎಲ್ ತಜ್ಞರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಭಯೋತ್ಪಾದನಾ ನಿಗ್ರಹ ದಳದ (ATC) ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು. ಸ್ಫೋಟದ ಮಾದರಿಗಳನ್ನು ಸಂಗ್ರಹಿಸಿ, ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನೂ ರಚಿಸಲಾಗಿತ್ತು. ಆರಂಭದಲ್ಲಿ ಬ್ಯಾಟರಿ ಸ್ಫೋಟದ ಶಂಕೆ ವ್ಯಕ್ತವಾಗಿದ್ದರೂ, ಬಳಿಕ ಐಇಡಿ ಬಳಕೆಯಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Thu, 22 October 26
