ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಗೆ ಸಂಪೂರ್ಣ ಹಣ ರೈಲ್ವೆ ಇಲಾಖೆ ನೀಡುತ್ತೆ: ಸೋಮಣ್ಣ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಹೊರವಲಯ ರೈಲು ಯೋಜನೆ ಜಾರಿಗೆ ತರಲಾಗುತ್ತಿದೆ. 8 ಪಟ್ಟಣಗಳನ್ನು ಸಂಪರ್ಕಿಸುವ ಈ ಯೋಜನೆಗೆ ರೈಲ್ವೆ ಇಲಾಖೆ ಸಂಪೂರ್ಣ ಹಣ ನೀಡಲಿದೆ. ಬೆಂಗಳೂರು ಹೊರ ವರ್ತುಲ ರೈಲ್ವೆಗೆ ಸಬ್ ಅರ್ಬನ್ ರೈಲು ಜೋಡಣೆ ಮಾಡುವ ವಿಚಾರವಿದೆ.ಈ ಯೋಜನೆಯಿಂದ ಜನಸಂಖ್ಯೆ ಹಾಗೂ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಗೆ ಸಂಪೂರ್ಣ ಹಣ ರೈಲ್ವೆ ಇಲಾಖೆ ನೀಡುತ್ತೆ: ಸೋಮಣ್ಣ
ವಿ ಸೋಮಣ್ಣ
Updated By: ವಿವೇಕ ಬಿರಾದಾರ

Updated on: Jun 07, 2025 | 4:59 PM

ಬೆಂಗಳೂರು, ಜೂನ್​ 07: ಬೆಂಗಳೂರು (Bengaluru) ಸುತ್ತಮುತ್ತಲಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ 8 ಪ್ರಮುಖ ಪಟ್ಟಣಗಳನ್ನು ಬೆಸೆಯುವ ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಗೆ (Bangalore Circular Railway Project) 2500 ಎಕರೆ ಜಾಗ ಬೇಕಾಗುತ್ತದೆ. ಅಭಿವೃದ್ಧಿ ಸಂಕೇತ ಆಗಿರುವುದರಿಂದ ಇದಕ್ಕೆ ರೈಲ್ವೆ ಇಲಾಖೆಯೇ ಸಂಪೂರ್ಣ ಹಣ ಕೊಡುತ್ತದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಸಚಿವ ವಿ. ಸೋಮಣ್ಣ ಅವರು ಶನಿವಾರ (ಜೂ.07) ಬೆಂಗಳೂರಿನ ಕುಮಾರ ಕೃಪಾದಲ್ಲಿಂದು ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಕುರಿತು ಪೂರ್ವಭಾವಿ ಪರಿಶೀಲನಾ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೊರ ವರ್ತುಲ ರೈಲ್ವೆಗೆ ಸಬ್ ಅರ್ಬನ್ ರೈಲು ಹೇಗೆ ಜೋಡಣೆ ಮಾಡಬೇಕು ಎನ್ನುವ ಬಗ್ಗೆ ಸಭೆಯಾಗಿದೆ ಎಂದರು.

ಇದನ್ನೂ ಓದಿ
ಸಾರ್ವಜನಿಕ ಸಾರಿಗೆ ಬಸ್ ಸಂಖ್ಯೆಯಲ್ಲಿ ದೆಹಲಿಯನ್ನೂ ಮೀರಿಸಲಿದೆ ಬೆಂಗಳೂರು
ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಯೋಜನೆ: ಬಂದ್​ ಆಗುತ್ತಾ ಚಿಗರಿ ಬಸ್​ ಓಡಾಟ?
ಬೆಂಗಳೂರಿನ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಸಚಿವ ನಿತಿನ್ ಗಡ್ಕರಿ
ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್; ಬಿಎಂಟಿಸಿ ಖಾಸಗಿಕರಣದ ಮೊದಲ ಹೆಜ್ಜೆ? ಕಾರ್ಮಿಕರ ಆತಂಕ

ಟ್ವಿಟರ್​ ಪೋಸ್ಟ್​

ಯೋಜನೆ ಹಳ್ಳಿಗಳ ಮಧ್ಯೆ ಹೋಗಬಾರದು ಎಂದು ಅಭಿಪ್ರಾಯ ಬಂದಿದೆ. ಅಧಿಕಾರಿಗಳೆಲ್ಲ ಕುಳಿತು ಚರ್ಚೆ ಮಾಡಿ ಡಿಪಿಆರ್ ರೆಡಿ ಮಾಡುತ್ತೇವೆ‌. ಗೂಡ್ಸ್ ಮತ್ತು ಪ್ಯಾಸೆಂಜರ್ ಎರಡೂ ರೈಲು ಇರಲಿದೆ. ಮುಂದಿನ 50 ವರ್ಷದ ಆಲೋಚನೆ ಇಟ್ಟುಕೊಂಡು ಮಾಡುತ್ತಿದ್ದೇವೆ. ಬೆಂಗಳೂರು, ದೇವನಹಳ್ಳಿ, ಯಲಹಂಕ ಮಧ್ಯೆ ಮೆಗಾ ಕೋಚಿಂಗ್ ಟರ್ಮಿನಲ್ ಮಾಡಲು ಡಿಪಿಆರ್ ಆಗಿದೆ. ಇದಕ್ಕೆ ಸಂಪೂರ್ಣ ಹಣವನ್ನು ಭಾರತ ಸರ್ಕಾರ ಕೊಡಲಿದೆ. ಬೆಂಗಳೂರಿನ ಜನಸಂದಣಿ, ವಾಯುಮಾಲಿನ್ಯ ತಡೆಯಲು ಈ ಯೋಜನೆ ಸಹಾಕಾರಿಯಾಗಲಿದೆ ಎಂದರು.

ಇದೊಂದು ಲಜ್ಜೆಗೇಡಿ ಸರ್ಕಾರ: ವಿ ಸೋಮಣ್ಣ

ಕಾಲ್ತುಳಿತದಿಂದ ಆರ್​ಸಿಬಿಯ 11 ಅಭಿಮಾನಿಗಳು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೊಂದು ಲಜ್ಜೆಗೇಡಿ ಸರ್ಕಾರ. ಹೆಸರು ಬರುತ್ತೆ ಅಂತ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿದರು. ಒಂದು ವಾರ ಬಿಟ್ಟು ಮಾಡಿದ್ದರೆ ಏನು ಗಂಟು ಹೋಗುತ್ತಿತ್ತು? ಇಂತಹ ಕೆಲಸ ಮಾಡಿ ನೀವು ಪಾಪಕ್ಕೆ ಗುರಿಯಾಗಿದ್ದೀರಿ. ಪ್ರಾಮಾಣಿಕ ಅಧಿಕಾರಿ ಬಿ. ದಯಾನಂದ್​ರನ್ನು ಅಮಾನತು ಮಾಡಿದ್ದೀರಿ. ಸಿಎಂ ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕಿತ್ತು ಎಂದು ಹೇಳಿದರು.

ಇದನ್ನೂ ನೋಡಿ: ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ ಇಲ್ಲಿದೆ

ಸಿದ್ದರಾಮಯ್ಯನವರೇ ನಿಮ್ಮ ಅನುಭವ, ಚಿಂತನೆ ಏನು ಆಯಿತು? ಮುಗ್ಧ ಜನರನ್ನು ಸಾಯಿಸಿ ಶಾಪಗ್ರಸ್ತ ಸರ್ಕಾರ ‌ಆಗಿದೆ. ನಿಮಗೆ ಮಾನ, ಮರ್ಯಾದೆ ಇದ್ದರೆ ಇದರ ಹೊಣೆ ಹೊರಬೇಕು. ಇಂತಹ ಘಟನೆ ಮಾಡಿ ಇತಿಹಾಸದಲ್ಲಿ ನೀವು ಉಳಿದುಕೊಂಡಿರಿ. ಸರ್ಕಾರ ಒಳ್ಳೆಯ ಅಧಿಕಾರಿಗಳನ್ನು ಅಮಾನತು ಮಾಡಿದರೆ ನಿಮ್ಮ ಜೊತೆ ಕೆಲಸ ಮಾಡಲು ಹೇಗೆ ಆಗುತ್ತದೆ? ಸರ್ಕಾರಕ್ಕೆ ಹೆಸರು ಮಾಡುವ ಆತುರದಲ್ಲಿದೆ. ನಿಮಗೆ ಕೊಡಲಿ ಪೆಟ್ಟಾಗಿದೆ, ಈ ದುರಂತ ಅಕ್ಷಮ್ಯ ಅಪರಾಧ. ಇದಕ್ಕೆ ನೀವೇ ಬೆಲೆ ತೆರಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ