‘ಇಂದು ಬೆಳಗ್ಗೆ ನಮ್ಮ ಕ್ಷೇತ್ರದಲ್ಲಿ ಜನ ಸಂಪರ್ಕ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಸುಮಾರು 92 ವರ್ಷದ ಹಿರಿಯ ನಾಗರಿಕರಾದ ಶ್ರೀಮತಿ ಗಂಗಮ್ಮ ಭೇಟಿಯಾದರು. ನನ್ನ ತಲೆ ಸವರಿ, ನನ್ನ ಕೆನ್ನೆ ಮುಟ್ಟಿ ಬಹಳ ಅಕ್ಕರೆಯ ಮಾತುಗಳನ್ನು ಆಡಿದರು. ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಮತಿ ಗಂಗಮ್ಮ ನನ್ನ ತಾಯಿಯ ಸಹೋದ್ಯೋಗಿಯಾಗಿ ಒಂದೇ ಶಾಲೆಯಲ್ಲಿದ್ದರು. ನನ್ನ ಜೊತೆ ಬಂದಿದ್ದ ಕಾರ್ಯಕರ್ತರಿಗೂ ಗಂಗಮ್ಮನವರ ಈ ಪ್ರೀತಿಯಿಂದ ಕೂಡಿದ ವರ್ತನೆ ನೋಡಿ ಬಹಳ ಸಂತಸವಾಯಿತು…’
– ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ (S Sureshkumar) ಅವರ ಫೇಸ್ಬುಕ್ ಖಾತೆಗೆ ಇಣುಕಿದರೆ ಇಂಥ ಹಲವು ಪ್ರಸಂಗಗಳು ಗಮನ ಸೆಳೆಯುತ್ತವೆ. ಇದೇ ಕಾರಣಕ್ಕೆ ಅವರು ಇತರೆಲ್ಲ ಶಾಸಕರಿಗಿಂತ ಭಿನ್ನರಾಗಿ ನಿಲ್ಲುತ್ತಾರೆ. ಸುರೇಶ್ ಕುಮಾರ್ ಅವರು ಆರಂಭಿಸಿರುವ ಮನೆಮನೆ ಸಂಪರ್ಕ ಕಾರ್ಯಕ್ರಮಕ್ಕೆ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕ್ಷೇತ್ರ 7 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಅವರು ಭೇಟಿ ನೀಡಿರುವುದು ಹೊಸ ದಾಖಲೆ ಎನಿಸಿದೆ. ಇತರೆಲ್ಲ ರಾಜಕಾರಣಿಗಳಿಗಿಂತಲೂ ಭಿನ್ನ ಮತ್ತು ಸರಳ ವ್ಯಕ್ತಿತ್ವ ಎಂದು ಹೆಸರು ಪಡೆದಿರುವ ಸುರೇಶ್ ಕುಮಾರ್ ಅವರು ಮನೆಮನೆ ಭೇಟಿ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯವನ್ನು ‘ಟಿವಿ9 ಕನ್ನಡ ಡಿಜಿಟಲ್’ಗೆ ಬರೆದಿರುವ ಈ ವಿಶೇಷ ಲೇಖನದಲ್ಲಿ ಹಂಚಿಕೊಂಡಿದ್ದಾರೆ.
***
ಕ್ಷೇತ್ರದ ಪ್ರತಿನಿಧಿಯಾಗಿ ನಾನು ರಾಜಾಜಿನಗರದ ವಾರ್ಡ್ಗಳಲ್ಲಿ ಪರಿಶೀಲನಾ ಕಾರ್ಯ, ಕಾಮಗಾರಿಗಳ ಮೇಲ್ವಿಚಾರಣೆ, ಬಂದ ದೂರುಗಳಿಗೆ ಪರಿಹಾರ ಕಾರ್ಯಕ್ಕಾಗಿ ಸ್ಥಳಗಳಿಗೆ ಭೇಟಿ ಮಾಡುತ್ತಾ ಬಂದಿದ್ದೇನೆ. ಜುಲೈ ಮೂರನೆಯ ವಾರದಲ್ಲಿ ರಾಜಾಜಿನಗರ ಕ್ಷೇತ್ರದ ಶಿವನಗರ ವಾರ್ಡ್ನ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಆಯಿತು. ಅಂದು ಕಾರ್ಯಾಲಯ ಉದ್ಘಾಟನೆ ನಂತರ ಕೆಲವು ಮನೆಗಳಿಗೆ ಭೇಟಿ ಕೊಡೋಣ ಎಂದೆನಿಸಿ ಮನೆಗಳ ಭೇಟಿ ಕಾರ್ಯಕ್ರಮ ಪ್ರಾರಂಭವಾಯಿತು.
ಪ್ರಾರಂಭದಲ್ಲಿ ಚಿಕ್ಕದಾಗಿ ಪ್ರಾರಂಭವಾದ ಈ ಕಾರ್ಯ ಇಂದು ನಮ್ಮೆಲ್ಲರಿಗೂ ಹೆಮ್ಮೆ ತರುವ ಮಟ್ಟ ತಲುಪಿದೆ. ಆರಂಭದಲ್ಲಿ ಕೆಲವು ಹಿತೈಷಿಗಳ ಮನೆಗೆ ಭೇಟಿ ನೀಡುವ ಚಿಂತನೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮ ಇಂದು ಪಕ್ಷಾತೀತ, ಭಾಷಾತೀತ, ಜಾತ್ಯತೀತವಾಗಿ ಎಲ್ಲರ ಮನೆ ಭೇಟಿ ಮಾಡುವ ಕಾರ್ಯವಾಗಿ ಪರಿವರ್ತನೆಗೊಂಡಿದೆ. ಆರಂಭದಲ್ಲಿ ಸುಮಾರು 1,000 ಮನೆಗಳಿಗೆ ಭೇಟಿ ನೀಡೋಣ ಎಂದುಕೊಂಡಿದ್ದ ಈ ಕಾರ್ಯಕ್ರಮ ಇಂದು ಪ್ರತಿವಾರ್ಡಿನಲ್ಲಿಯೂ ತಲಾ 1,000 ಮನೆಗಳ ಭೇಟಿ ದಾಟಿದೆ. ನ 30ಕ್ಕೆ ಭೇಟಿ ನೀಡಿದ ಮನೆಗಳ ಸಂಖ್ಯೆ 7,054 ದಾಟಿತು.
ಈ ಪೈಕಿ ಬಸವೇಶ್ವರನಗರ ವಾರ್ಡಿನ ಒಂದು ಸಾವಿರದ ಮನೆ ಭೇಟಿ ಪೂರ್ಣಗೊಳ್ಳುವುದೊಂದಿಗೆ ರಾಜಾಜಿನಗರ ಕ್ಷೇತ್ರದ ಏಳು ವಾರ್ಡ್ಗಳಲ್ಲಿಯೂ ಒಂದೊಂದು ಸಾವಿರ ಮನೆಗಳ ಭೇಟಿ ಆಗಿದೆ. ಈ ಭೇಟಿಯಲ್ಲಿ ನನಗೆ ಆಗಿರುವ ಅನುಭವ ಅನನ್ಯ. ಕಷ್ಟ ಪರಿಸ್ಥಿತಿಯಲ್ಲಿ ನಿಜವಾದ ಸಾಧನೆ ಮಾಡಿರುವ ಸಾಧಕರ ಭೇಟಿಯಾಗಿದೆ. ತಮಗೆ ಇರುವ ಸೌಕರ್ಯದಲ್ಲಿಯೇ ಸಂತೃಪ್ತ ಜೀವನ ನಡೆಸುತ್ತಿರುವ ಕುಟುಂಬಗಳ ದರ್ಶನವಾಗಿದೆ. ಅತ್ಯಂತ ಕಟು ಪರಿಸ್ಥಿತಿಯಲ್ಲಿ ಬದುಕುತ್ತಿರುವ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿದ್ದರೂ ಭರವಸೆಯ ಜೀವನ ನಡೆಸುತ್ತಿರುವವರ ಪರಿಚಯವಾಗಿದೆ. ವಿಚಿತ್ರರೀತಿಯ ವೇದನೆ ಅನುಭವಿಸುತ್ತಿರುವ ಕುಟುಂಬಗಳನ್ನು ಭೇಟಿ ಮಾಡಿದ್ದೇನೆ. ನನ್ನ ಇತಿಮಿತಿಯಲ್ಲಿ ಸಾಧ್ಯವಾದ ಸಹಕಾರ ನೀಡಿದ್ದೇನೆ.
ಒಟ್ಟಿನಲ್ಲಿ ಎಲ್ಲಾ ಮನೆಗಳ ಭೇಟಿಯಿಂದ ನನ್ನ ಅನುಭವದ ಮೂಟೆ ಅತ್ಯಂತ ಶ್ರೀಮಂತಗೊಂಡಿದೆ. ಅನೇಕರ ಪ್ರೀತಿ, ಹಾರೈಕೆ, ಆಶೀರ್ವಾದ ನನಗೆ ಸಿಕ್ಕಿದೆ. ಈ ಕಾರ್ಯಕ್ರಮ ನನ್ನ ಜೀವನದ ಅತ್ಯಂತ ಅಮೂಲ್ಯ ಅನುಭವವನ್ನು ನನಗೆ ನೀಡಿದೆ. ಈ ಕಾರ್ಯ ಇಷ್ಟರ ಮಟ್ಟಿಗೆ ಬೆಳೆದು ಇಂತಹ ಮೈಲಿಗಲ್ಲು ದಾಟಲು ಸಹಕಾರ ನೀಡಿದ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತನಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಎಲ್ಲರ ಅಭಿಪ್ರಾಯದಂತೆ ನಮ್ಮ ಈ ‘ಮನೆ-ಮನ’ ಭೇಟಿ ಕಾರ್ಯ ಇನ್ನೂ ಮುಂದುವರೆಯುತ್ತದೆ.
***
ಸುರೇಶ್ ಕುಮಾರ್ ಅವರ ಮನೆಮನೆ ಸಂಪರ್ಕದ ಕೆಲ ಚಿತ್ರಗಳು, ನೆನಪು ಇಲ್ಲಿದೆ.
ಇದನ್ನೂ ಓದಿ: ಸಮವಸ್ತ್ರ ಸಂಘರ್ಷ ಮಧ್ಯೆಯೇ ಶಿಕ್ಷಣ ಇಲಾಖೆ ಕೆಲಸ ಮಾಡಬೇಕಾಗಿದೆ; ಶಾಸಕ ಸುರೇಶ್ ಕುಮಾರ್
ಕ್ಷೇತ್ರದ ಜನರ ಪ್ರತಿಕ್ರಿಯೆಯು ಸುರೇಶ್ ಕುಮಾರ್ ಅವರಿಗೆ ಸಂತಸ ತಂದಿದೆ. ಹೀಗಾಗಿಯೇ ಅವರು ಮನೆಮನೆ ಭೇಟಿ ಚಟುವಟಿಕೆ ಮುಂದುವರಿಸುವುದಾಗಿ ಹೇಳಿದ್ದಾರೆ. ಕ್ಷೇತ್ರದ ಎಲ್ಲ ಮನೆಗಳಿಗೂ ಅವರು ಭೇಟಿ ನೀಡಿದರೆ ಕರ್ನಾಟಕದ ಮಟ್ಟಿಗೆ ಇದೊಂದು ದಾಖಲೆಯೇ ಆಗುತ್ತದೆ.
Published On - 1:24 pm, Thu, 1 December 22