ಬೆಂಗಳೂರು, ಮಾರ್ಚ್ 06: ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ (Syed Naseer Hussain) ಜೊತೆಗೆ ಶಿವಾಜಿನಗರ (Shivajinagar) ಠಾಣಾ ವ್ಯಾಪ್ತಿಯ ರೌಡಿಶೀಟರ್ ಇಸ್ತಿಯಾಕ್ ಪೈಲ್ವಾನ್ ಅಹ್ಮದ್ ಇರುವ ಫೋಟೋ ವೈರಲ್ ಆಗಿದೆ. ಫೋಟೋದಲ್ಲಿ ರೌಡಿಶೀಟರ್ ಇಸ್ತಿಯಾಕ್ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರಿಗೆ ಹೂಗುಚ್ಛ ನೀಡಿ ಶುಭ ಕೋರುತ್ತಿದ್ದಾರೆ.
ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಗಲಿಗರು ವಿಜಯೋತ್ಸವದ ವೇಳೆ, ವಿಧಾನಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಕೆಲವು ಕಾಂಗ್ರೆಸ್ನ ನಾಯಕರು ಮಾಧ್ಯಮಗಳ ವರದಿಯನ್ನೇ ಸುಳ್ಳೆಂದು ಜರಿದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಂತ್ರಿಮಂಡಲದ ಸಚಿವರು ಈ ಆರೋಪವನ್ನು ತಳ್ಳಿ ಹಾಕಿದ್ದರು. ಪೊಲೀಸರು ವಿಡಿಯೊವನ್ನು ನೋಡಿದ್ದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗೇ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಹೇಳಿದ್ದರು. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದರು.
ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯ ಸೂಲಿನ ಕಹಿ ಉಣುತ್ತಿದ್ದ ಎನ್ಡಿಎ ನಾಯಕರಿಗೆ, ಪಾಕ್ ಪರ ಘೋಷಣೆ ಅಸ್ತ್ರವಾಗಿ ಸಿಕ್ಕಿತು. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು, ಕಾಂಗ್ರೆಸ್ ಮುಳುವಾಗಿದೆ. ಇನ್ನು ಕಾಂಗ್ರೆಸ್ ಅನ್ನು ಹಣಿಯಲು ಬಿಜೆಪಿಗೆ ಅಸ್ತ್ರ ಸಿಕ್ಕಿದೆ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಬಳಿಕ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಈ ವಿಚಾರ ತೀರ್ವ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಪಾಕಿಸ್ತಾನ ಪರ ಘೋಷಣೆ ಕೂಗಿರುವ ದೃಶ್ಯ ಸೆರೆಯಾಗಿರುವ ವಿಡಿಯೋಗಳನ್ನು ಮಾಧ್ಯಮಗಳಿಂದ ಸಂಗ್ರಹಿಸಿದರು. ಬಳಿಕ ಈ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಇನ್ನು ಈ ವಿಚಾರ ಸದನದಲ್ಲೂ ಪ್ರಸ್ತಾಪವಾದಾಗ ಉತ್ತರ ನೀಡಿದ್ದ ಪರಮೇಶ್ವರ್, ವಿಡಿಯೊವನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ತಪ್ಪು ನಡೆದಿದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಇದೀಗ ಎಫ್ಎಲ್ಎಲ್ ವರದಿ ಬಂದಿದ್ದು, ವಿಧಾನಸೌಧದ ಒಳಗೆ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ನಿಜ ಎಂದು ಸಾಬೀತಾಗಿದೆ. ಈ ಎಫ್ಎಸ್ಎಲ್ ವರದಿಯನ್ನು ಆಧರಿಸಿ ವಿಧಾನಸೌಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 am, Wed, 6 March 24