ಕನ್ನಡ ನಾಡಿನ ಹಿರಿಮೆ ಅಪಾರ: ಭಾಷೆ, ಸಂಸ್ಕೃತಿ ಬೆಳೆಸುವಲ್ಲಿ ಒಂದಾಗೋಣ: ಆದರ್ಶ ಗೋಖಲೆ

|

Updated on: Nov 25, 2024 | 5:02 PM

ನಾಡಿನ ಪ್ರತಿಯೊಂದು ಮನೆ ಮತ್ತು ಮನಗಳಲ್ಲಿ ಕನ್ನಡದ ದೀಪ ಪ್ರಜ್ವಲಿಸಲಿ. ಆಧುನಿಕತೆಯಡೆಗೆ ಸಾಗುವ ಭರದಲ್ಲಿ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಮರೆಯದಿರೋಣ. ಕನ್ನಡ ಭಾಷೆ ಬೆಳೆಯಲು ಮತ್ತು ಉಳಿಯಲು ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ಆದರ್ಶ ಗೋಖಲೆ ಹೇಳಿದರು.

ಕನ್ನಡ ನಾಡಿನ ಹಿರಿಮೆ ಅಪಾರ: ಭಾಷೆ, ಸಂಸ್ಕೃತಿ ಬೆಳೆಸುವಲ್ಲಿ ಒಂದಾಗೋಣ: ಆದರ್ಶ ಗೋಖಲೆ
ರಾಜ್ಯೋತ್ಸವ ಕಾರ್ಯಕ್ರಮ
Follow us on

ಬೆಂಗಳೂರು, ನವೆಂಬರ್ 25: ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ದೇಶಕ್ಕೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ನಾಡಿನ ಹೋರಾಟಗಾರರ ತ್ಯಾಗ, ಬಿಲಿದಾನ ಸ್ಮರಣೀಯ ಎಂದು ಖ್ಯಾತ ವಾಗ್ಮಿ, ಅಂಕಣಕಾರ ಆದರ್ಶ ಗೋಖಲೆ ಹೇಳಿದರು.

ಉತ್ತೀಷ್ಠ ಭಾರತ ದಶಮಾನೋತ್ಸವ ಮತ್ತು 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹಂಪಿನಗರ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಅದುವೇ ರಾಷ್ಟ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಡಿನ ಪ್ರತಿಯೊಂದು ಮನೆ ಮತ್ತು ಮನಗಳಲ್ಲಿ ಕನ್ನಡದ ದೀಪ ಪ್ರಜ್ವಲಿಸಲಿ. ಆಧುನಿಕತೆಯಡೆಗೆ ಸಾಗುವ ಭರದಲ್ಲಿ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಮರೆಯದಿರೋಣ. ಕನ್ನಡ ಭಾಷೆ ಬೆಳೆಯಲು ಮತ್ತು ಉಳಿಯಲು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ನಮ್ಮ ಸಾಹಿತಿಗಳ ಸಾಹಿತ್ಯಗಳು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಗಿದ್ದವು ಎಂದು ತಿಳಿಸಿದರು.

ಉತ್ತಿಷ್ಠ ಭಾರತ ಉತ್ಸಾಹಿ, ಸಮಾನ ಮನಸ್ಕ ವ್ಯಕ್ತಿಗಳ ತಂಡವಾಗಿದ್ದು ಸಾಂಸ್ಕೃತಿಕ, ಸಾಮಾಜಿಕ, ಬೌದ್ಧಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಬದ್ಧವಾಗಿದೆ ಮತ್ತು ಆ ಮೂಲಕ ಯುವ ಮನಸ್ಸುಗಳಿಗೆ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆ ಶಿಕ್ಷಣ ನೀಡುತ್ತದೆ. ನಾವು ಮುಖ್ಯವಾಗಿ “ಧರ್ಮ, ರಾಷ್ಟ್ರೀಯತೆ, ಪ್ರಕೃತಿ ಮತ್ತು ಸಮಾಜ” ನಾಲ್ಕು ಆಯಾಮಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಉತ್ತಿಷ್ಠ ಭಾರತದ ಸಂಚಾಲಕರಾದ ನೀರಜ್​ ಕಾಮತ್​ ಅವರು ಹೇಳಿದರು.

ಕಳೆದ ಒಂದು ದಶಕದಲ್ಲಿ ಉತ್ತಿಷ್ಠ ಭಾರತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದೆ. ದಿನಕ್ಕೊಂದು ಕಗ್ಗ, ಹೊದಿಕೆ ವಿತರಣಾ ಅಭಿಯಾನ, ನಮ್ಮ ಸೈನಿಕ ನಮ್ಮ ಹೆಮ್ಮೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ, ಶ್ರೀ ಸ್ವಾನಂದಾಶ್ರಮದಲ್ಲಿ ಶಾಲಾ ಕಿಟ್‌ಗಳನ್ನು ಪ್ರತ್ಯೇಕಿಸುವ, ಸಿದ್ಧಪಡಿಸುವ ಕಾರ್ಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.

ಡಿ.ವಿ.ಗುಂಡಪ್ಪನವರ ಜಯಂತಿಯನ್ನು ಆಚರಿಸಾಯಿತು. ವಲಸೆ ಕಾರ್ಮಿಕರ ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಉಚಿತ ಕಾರ್ಯಾಗಾರ, ಸಾರ್ವಜನಿಕ ಭಾಷಣ ಕಲೆ ತರಬೇತಿ ಮತ್ತು ಕಾರ್ಯಾಗಾರ, ಬೀಜದ ಉಂಡೆ ತಯಾರಿಸುವ ಕಾರ್ಯಾಗಾರ, ಕಾರ್ಗಿಲ್ ವಿಜಯ ದಿವಸ ಮತ್ತು ನಿರಂತರ ಎಂಬ ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಲ್ಲಿ ಮಾಡಲಾಯಿತು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳು

ಗಾಯನ, ನೃತ್ಯ, ಆಶುಭಾಷಣ, ರಸಪ್ರಶ್ನೆ, ಪುಸ್ತಕ ಪರಿಚಯ ನಡೆಸಿಕೊಡಲಾಯಿತು. ಡಿವಿಜಿ ರಚಿಸಿದ ‘ವಿದ್ಯಾರಣ್ಯ ವಿಜಯ’ದ ಆಯ್ದ ಭಾಗ ನಾಟಕ ಪ್ರದರ್ಶನವನ್ನು ವಾದಿರಾಜ್​ ಹಾಗೂ ತಂಡದವರು ಪ್ರದರ್ಶಿಸಿದರು.

ಶ್ರೀಧರ ಕುಲಕರ್ಣಿ ನಿರೂಪಿಸಿದರು, ಗೀತಾ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು.  ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್​ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಾಲಯ ವ್ಯವಸ್ಥಾ ಸಮಿತಿ ಸದಸ್ಯ ಭಾನುಪ್ರಕಾಶ, ಉತ್ತಿಷ್ಠ ಭಾರತ ಸಂಚಾಲಕ ನೀರಜ್​ ಕಾಮತ್​ ಮತ್ತಿತರು ಉಪಸ್ಥಿತರಿದ್ದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:53 pm, Mon, 25 November 24