ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್, ನೀವು ಸೋಕಾಲ್ಡ್ ನ್ಯಾಶನಲ್: ಕಾಂಗ್ರೆಸ್ಸಿಗೆ ಗುಮ್ಮಿದ ಜೆಡಿಎಸ್
ಕರ್ನಾಟಕದ ಮೂರು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ್ದು, ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ಹಲವು ಆರೋಪ ಮಾಡುತ್ತಿರುವ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದೀಗ ಇದಕ್ಕೆ ಜೆಡಿಎಸ್, ಜಾರ್ಖಂಡ್, ಮಹಾರಾಷ್ಟ್ರ ಎಲೆಕ್ಷನ್ ರಿಸಲ್ಟ್ ಮುಂದಿಟ್ಟು ತಿರುಗೇಟು ನೀಡಿದೆ.
ಬೆಂಗಳೂರು, (ನವೆಂಬರ್ 25): ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜೆಡಿಎಸ್ ಭದ್ರಕೋಟೆಯನ್ನೇ ಛಿದ್ರಮಾಡಿ ವಿಜಯದ ಕೇಕೆ ಹಾಕಿದೆ. ಶಿಗ್ಗಾಂವಿಯ ಜಿದ್ದಾಜಿದ್ದಿನ ಕದನದಲ್ಲಿ ಬಿಜೆಪಿ ಭದ್ರಕೋಟೆಯನ್ನೇ ಕಾಂಗ್ರೆಸ್ ಪುಡಿಗಟ್ಟಿ, ಜಯ ಸಾಧಿಸಿದೆ. ಸಂಡೂರಿನಲ್ಲೂ ಕಾಂಗ್ರೆಸ್ ಗೆಲುವಿನ ಕಮಾಲ್ ಮಾಡಿದೆ. ಈ ಫಲಿತಾಂಶ ಬೆನ್ನಲ್ಲೇ ಆಡಳಿರೂಢ ಕಾಂಗ್ರೆಸ್, ಕೆಲ ಆರೋಪಗಳನ್ನು ಮಾಡಿದ್ದ ಜೆಡಿಎಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿದೆ. ಇನ್ನು ಇದಕ್ಕೆ ಇದೀಗ ಜೆಡಿಎಸ್, ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಅಂಕಿ-ಸಂಖ್ಯೆಯೊಂದಿಗೆ ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ ಕಾಂಗ್ರೆಸ್, ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ. ಮಹಾರಾಷ್ಟ್ರದಲ್ಲಿ ನೆಲಕಚ್ಚಿದೆ. ಅಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್ ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ 3 ಬೈಎಲೆಕ್ಷನ್ ಸೀಟುಗಳನ್ನು ಮುಖದ ಮೇಲಿಟ್ಟುಕೊಂಡು ಮೆರೆಯುತ್ತಿದೆ, ಮೆರೆಯಲಿ. ಮಹಾರಾಷ್ಟ್ರದಲ್ಲಿ ಮತದಾರರು ಕೈ ಪಕ್ಷದ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ಸಿಗರೇ.. ಅನ್ಯರ ಬಗ್ಗೆ ಹಗುರವಾಗಿ ಮಾತಾನಾಡುವ ನಿಮ್ಮ ಹರಕು ಬಾಯಿಗಳಿಗೆ, ನಿಮ್ಮ ತೂತುಬಿದ್ದ ಮಡಿಕೆಯಂತಾಗಿರುವ ನಿಮ್ಮ ಪಕ್ಷಕ್ಕೆ ಮೊದಲು ತ್ಯಾಪೆ ಹಚ್ಚಿ. 288 ಸೀಟುಗಳ ಮಹಾರಾಷ್ಟ್ರದಲ್ಲಿ ಹದಿನಾರೇ ಸೀಟಿಗೆ ಬೋರಲು ಬಿದ್ದ ಸೋಕಾಲ್ಡ್ ನ್ಯಾಷನಲ್ ಪಾರ್ಟಿ ನಾಯಕರೇ, ಇನ್ನೊಬ್ಬರ ಬಚ್ಚಲು ಮನೆ ಮೂಸಿ ನೋಡುವ ಚಟ ಬಿಡಿ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದೆ.
ಪಳೆಯುಳಿಕೆ ಪಾರ್ಟಿ ಕಾಂಗ್ರೆಸ್!
ನಶಿಸುತ್ತಿರುವ ಶತಮಾನಗಳ ಪಳೆಯುಳಿಕೆ @INCIndia ಪಕ್ಷದ ಪಕಳೆಗಳು ದೇಶಾದ್ಯಂತ ಒಂದೊಂದೇ ಉದುರುತ್ತಿವೆ. ಮಹಾರಾಷ್ಟ್ರದಲ್ಲಿ ನೆಲಕಚ್ಚಿದೆ. ಅಲ್ಲಿ 6ನೇ ಸ್ಥಾನಕ್ಕೆ, ಜಾರ್ಖಂಡ್ ನಲ್ಲಿ 3ನೇ ಸ್ಥಾನಕ್ಕೆ ಜಾರಿದೆ. ಆದರೂ ಕರ್ನಾಟಕದಲ್ಲಿ ವಾಮಮಾರ್ಗದಲ್ಲಿ ಗೆದ್ದ 3 ಬೈಎಲೆಕ್ಷನ್ ಸೀಟುಗಳನ್ನು ಮುಖದ…
— Janata Dal Secular (@JanataDal_S) November 25, 2024
ಇನ್ನು ಜಾರ್ಖಂಡ್; ಜೆಎಂಎಂ ಪರಾವಲಂಬಿಯಾಗಿ ಪರದೇಸಿ ಬಾಳ್ವೆ ಮಾಡಿಕೊಂಡು 81 ಸೀಟಿನ ಪೈಕಿ ಹದಿನಾರಕ್ಕೆ ಅಡ್ಡಡ್ಡ ಬಿದ್ದ ನಿಮ್ಮ ಪಕ್ಷಕ್ಕೆ ಅಲ್ಲಿಯೂ ಜನ ಚಟ್ಟ ಕಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
*ಸರಳ ಲೆಕ್ಕ ಕಾಂಗ್ರೆಸ್ಸಿಗರೇ.. 288+81=369. ಇಷ್ಟರಲ್ಲಿ ಒಟ್ಟು ಎಷ್ಟು ಗೆದ್ದಿದ್ದೀರಿ? ಕೇವಲ.. ಕೇವಲ.. 32!! ಅದರಲ್ಲಿಯೂ ಮಹಾರಾಷ್ಟ್ರದಲ್ಲಿ -28!! ಛೀ.. ನಿಮ್ಮ ಜನ್ಮಕ್ಕೆ.. ನಿಮಗಿಂತ ನಾವು ಕಳಪೆಯೇ..? 224 ಕ್ಷೇತ್ರಗಳಲ್ಲಿ 19 ಗೆದ್ದಿದ್ದೆವು. ಅದೂ ಯಾವ ಮೈತ್ರಿಯೂ ಇಲ್ಲದೆ!! ನಾವು ಪ್ರಾದೇಶಿಕ, ನೀವು ಸೋಕಾಲ್ಡ್ ನ್ಯಾಶನಲ್ ಎಂದು ತಿವಿದಿದೆ.
ಐರೆನ್ ಲೆಗ್ ಪಾರ್ಟಿ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಿದೆ. ಅದಕ್ಕೆ ಬಲಿಯಾದ ಪಕ್ಷ ಉದ್ಧವ್ ಠಾಕ್ರೆಯವರ ಶಿವಸೇನೆ. ಮೈತ್ರಿಗೆ, ಮೈತ್ರಿ ಪಕ್ಷಗಳಿಗೆ ಮಿತ್ರದ್ರೋಹ ಮಾಡುತ್ತಿರುವ ಕಾಂಗ್ರೆಸ್ ಸಂವಿಧಾನವನ್ನೇ ಅಣಕಿಸುತ್ತಿದೆ. ಅನ್ಯರ ಅಣಕವೇ ಮನೆಹಾಳು ಕಾಂಗ್ರೆಸ್ಸಿನ ಕಾಯಕ ಎಂದು ಟ್ವಿಟ್ಟರ್ ಎಕ್ಸ್ನಲ್ಲಿ ಜೆಡಿಎಸ್ ಬರೆದುಕೊಂಡಿದೆ.