AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯತ್ನಾಳ್​ರಂತೆ ಜೆಡಿಎಸ್​ ಅಸಮಾಧಾನಿತ ಶಾಸಕರ ತಂಡ ರಚನೆಗೆ ಸಜ್ಜಾದ ಇಬ್ರಾಹಿಂ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನಡುವಿನ ಗುದ್ದಾಟಕ್ಕೆ ಬಿಜೆಪಿಯ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಬಿಎಸ್​ವೈ ವಿರೋಧ ಬಣವನ್ನು ಯತ್ನಾಳ್​ ಒಗ್ಗೂಡಿಸಿ ತಂಡವನ್ನು ರಚಿಸಿದ್ದಾರೆ. ಅದರಂತೆ ಇದೀಗ ಜೆಡಿಎಸ್​​ನ ಅಸಮಾಧಾನಿತ ಶಾಸಕರು, ನಾಯಕರ ತಂಡ ರಚನೆಗೆ ಸಿ.ಎಂ. ಇಬ್ರಾಹಿಂದ ಮುಂದಾಗಿದ್ದಾರೆ.

ಯತ್ನಾಳ್​ರಂತೆ ಜೆಡಿಎಸ್​ ಅಸಮಾಧಾನಿತ ಶಾಸಕರ ತಂಡ ರಚನೆಗೆ ಸಜ್ಜಾದ ಇಬ್ರಾಹಿಂ
ಸಿ.ಎಂ. ಇಬ್ರಾಹಿಂ
TV9 Web
| Edited By: |

Updated on: Nov 25, 2024 | 3:03 PM

Share

ಮೈಸೂರು, (ನವೆಂಬರ್ 25): ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಬಣ ರಾಜಕೀಯದಿಂದ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಬಿವೈ ವಿಜಯೇಂದ್ರ-ಯಡಿಯೂರಪ್ಪ ಮತ್ತು ಅವರ ವಿರೋಧಿ ಬಣ ಎಂದು ಎರಡು ತಂಡಗಳಾಗಿದ್ದು, ವಿಜಯೇಂದ್ರ ವಿರೋಧಿ ಬಣದ ನಾಯಕ ಯತ್ನಾಳ್​. ಅದರಂತೆ ಇದೀಗ ಜೆಡಿಎಸ್​ನಲ್ಲೂ ಅಸಮಾಧಾನಿತ ನಾಯಕರ ತಂಡ ರಚನೆಗೆ ಸಿ.ಎಂ ಇಬ್ರಾಹಿಂದ ಮುಂದಾಗಿದ್ದಾರೆ. ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ನಡೆಯಿಂದ ಬೇಸರಗೊಂಡಿರುವ ಶಾಸಕರು, ನಾಯಕರನ್ನು ಒಗ್ಗೂಡಿಸಿ ತಂಡ ರಚನೆ ಮಾಡಲು ಇಬ್ರಾಹಿಂ ಸಜ್ಜಾಗಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ಜೆಡಿಎಸ್​ನ 12 ರಿಂದ 13 ಶಾಸಕರು ಪಕ್ಷದ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ಜಿ.ಟಿ.ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಶುರು ಮಾಡಿದ್ದೇನೆ. ಮುಂದೆ ಏನೇನಾಗುತ್ತೆ ನೋಡೋಣ. ನಾನು ಈಗಲೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದಾಗಿದೆ. ನಾವು ಜೆಡಿಎಸ್ ಹೆಸರಿನಲ್ಲಿ ಇರಬೇಕಾ ಎಂದು ಚರ್ಚಿಸುತ್ತೇವೆ. ತೃತೀಯ ರಂಗಕ್ಕೆ ಬೇರೆ ಹೆಸರು ಕೊಡಬೇಕಾ ಎಂದು ಚರ್ಚೆ ನಡೆಸುತ್ತವೆ ಎಂದು ಹೇಳಿದರು.

ಇದನ್ನೂ ಓದಿ: ಮುಸ್ಮಿಂ ಮತದಿಂದ ನಿಮ್ಮಜ್ಜ ಸಿಎಂ- ಪ್ರಧಾನಿ, ಸಾಬ್ರ ಓಟಿನಿಂದಲೇ ನಿಮ್ಮಪ್ಪ ಗೆದ್ದಿದ್ದು: ಇಬ್ರಾಹಿಂ ತಿರುಗೇಟು

ಈಗ ಇರುವ ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಜೆಡಿಎಸ್ ಶಾಸಕರು ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಒಬ್ಬೊಬ್ಬರೇ ತಮ್ಮ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಈಗಲಾದರೂ ಬುದ್ಧಿ ಕಲಿಯಬೇಕು. ಜೆಡಿಎಸ್ ಪಕ್ಷ ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಜೆಡಿಎಸ್ ಉಳಿಯಲು ಸಾಧ್ಯ ಎಂದು ಸಲಹೆ ನೀಡಿದರು.

ಜೆಡಿಎಸ್ ಪರಿಸ್ಥಿತಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತ ಬಸವಿ ತರ

ಜೆಡಿಎಸ್ ಪರಿಸ್ಥಿತಿ ಬಸ್ ಸ್ಟ್ಯಾಂಡ್ ನಲ್ಲಿ ನಿಂತ ಬಸವಿ ತರ ಆಗಿದೆ. ಬಿಜೆಪಿಯನ್ನ ಲವ್ ಮಾಡಿದ್ದು ಆಯಿತು. ಈಗ ಅವರನ್ನ ಅಲ್ಲೇ ಬಿಟ್ಟುಬಿಡಬೇಕು. ನಾನು ಕುಮಾರಸ್ವಾಮಿ ಜೊತೆಯಲ್ಲಿದ್ದಾಗ ಚನ್ನಪಟ್ಟಣದಲ್ಲಿ ನಾಲ್ಕು ಕೋಟಿ‌ ಖರ್ಚು ಮಾಡಿ ‌20 ಸಾವಿರದಿಂದ ಗೆದ್ದರು. ಈಗ ನಾನು ಅವರ ಜೊತೆಯಲ್ಲಿಲ್ಲ, 150 ಕೋಟಿ ಖರ್ಚು ಮಾಡಿ 25 ಸಾವಿರದಿಂದ ಸೋತಿದ್ದಾರೆ. ಅಲ್ಲಿಗೆ ಮುಸ್ಲಿಮರು ಇರದಿದ್ದರೇ ಜೆಡಿಎಸ್ ಗೆ ಒಂದು ಸ್ಥಾನವೂ ಬರುವುದಿಲ್ಲ. ಅವತ್ತು 19 ಜನ ಗೆದಿದ್ದು ಮುಸ್ಲಿಮರಿಂದ ಎಂಬುದು ಈಗ ಸಾಬೀತಾಗಿದೆ. ಈಗ ನಾವೇನು ಕಾಂಗ್ರೆಸ್ ಜೊತೆ ಹೋಗಲು ನಿರ್ಧಾರ ಮಾಡಿಲ್ಲ. ತೃತೀಯ ರಂಗ ಸ್ಥಾಪನೆಯ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.