ಮುಡಾ, ವಾಲ್ಮೀಕಿ ಹಗರಣಕ್ಕೆ ಬೈ ಎಲೆಕ್ಷನ್ ಫಲಿತಾಂಶ ತೀರ್ಪಲ್ಲ: ಭ್ರಷ್ಠಾಚಾರದ ಆರೋಪ ಕೋರ್ಟ್ನಲ್ಲೇ ನಿರ್ಧಾರವಾಗಲಿ
ಚುನಾವಣೆಯಲ್ಲಿ ಗೆದ್ದು, ತಮ್ಮ ಮೇಲೆ ಬಂದ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ತಾನು ಅಗ್ನಿಪರೀಕ್ಷೆ ಗೆದ್ದೆ ಎಂದು ನಾಯಕರು ಹೇಳುವುದು ವಾಡಿಕೆ. ಜನ ಇದನ್ನು ಒಪ್ಪಬಾರದು. ಯಾವುದೇ ನಾಯಕರುಗಳ ಮೇಲಿನ ಭೃಷ್ಠಾಚಾರದ ಆರೋಪ ನ್ಯಾಯಾಲಯದಲ್ಲಿ ಮಾತ್ರ ನಿರ್ಧಾರವಾಗಬೇಕು.
ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ನಾಯಕರು, ತಮ್ಮ ಪಕ್ಷದ ಗೆಲುವಿಗೆ ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ. ಐದು ಗ್ಯಾರೆಂಟಿಗೆ ಕೊಟ್ಟ ಸರ್ಟಿಫಿಕೇಟ್, ಸಿದ್ದರಾಮಯ್ಯನವರ ನಾಯಕತ್ವಕ್ಕೆ ಸಿಕ್ಕ ಮೊತ್ತೊಂದು ದೃಢೀಕರಣ ಈ ಉಪಚುನಾವಣಾ ಫಲಿತಾಂಶ ಹೀಗೆ ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ. ಕೆಲ ನಾಯಕರು, ಹಗರಣದ ಹೆಸರು ಹೇಳದೇ, ಬಿಜೆಪಿ ಮಾಡಿದ ಆರೋಪಕ್ಕೆ ಜನ ಪ್ರತ್ಯುತ್ತರ ನೀಡಿದ್ದಾರೆ. ಸುತ್ತಿ ಬಳಸಿ ಮುಡಾ ಮತ್ತು ವಾಲ್ಮೀಕಿ ಹಗರಣದ ಬಗ್ಗೆ ಜನ ತೀರ್ಪು ನೀಡಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಬೆನ್ನನ್ನು ತಾವೇ ಸವರಿಕೊಂಡಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ತಮ್ಮ ಮೇಲಿನ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಹೀಗೆ ಹೇಳುತ್ತಿದ್ದರು. ಆದರೆ, ಹಗರಣಗಳ ಬಗ್ಗೆ ಜನ ಸ್ವಲ್ಪ ವಿಚಾರ ಮಾಡಬೇಕು ಮತ್ತು ಹಗರಣಗಳಿಗೆ ಚುನಾವಣೆ ಮೂಲಕ ತೀರ್ಪು ಪಡೆಯುವ ರಾಜಕೀಯ ಪಕ್ಷಗಳ ಹುನ್ನಾರಕ್ಕೆ ಕಡಿವಾಣ ಹಾಕಲೇಬೇಕು.
ಆಡಳಿತ ಪಕ್ಷಗಳ ಮೇಲೆ ಹಗರಣಗಳ ಮಾಲೆ ಹೊರಿಸಿ ಹೆಚ್ಚು ಜನರ ಮತ ಗಳಿಸಲು ವಿರೋಧ ಪಕ್ಷಗಳು ತಂತ್ರ ಮಾಡುವುದು ಹೊಸದಲ್ಲ. ಅದು ತಪ್ಪು ಅಂತ ಹೇಳಲಾಗದು. ಅದೇ ರೀತಿ ಆಡಳಿತಾರೂಢ ಪಕ್ಷ ಚುನಾವಣಾ ಫಲಿತಾಂಶ ತನ್ನ ಪರ ಬಂದಾಗ ಜನ ತೀರ್ಪು ಕೊಟ್ಟಿದ್ದಾರೆ. ತಾನು ಅಗ್ನಿ ಪರೀಕ್ಷೆಯಲ್ಲಿಗೆದ್ದೆ. ಹಾಗಾಗಿ, ಜನ ಮತ್ತು ಮಾಧ್ಯಮ ಇನ್ನು ಮುಂದೆ ಆ ವಿಚಾರ ಎತ್ತ ಬಾರದು ಎಂದು ಬಾಯಿ ಮುಚ್ಚಿಸುವುದು ಸರ್ವೇಸಾಮಾನ್ಯ.
ಆದರೆ ಕಾಂಗ್ರೆಸ್ ಮೇಲೆ ಬಂದಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ಉದಾಹರಣೆಗೆ ವಾಲ್ಮೀಕಿ ಹಗರಣವನ್ನೇ ತೆಗೆದುಕೊಳ್ಳಿ. ಅಲ್ಲಿ 180 ಕೋಟಿಯ ಹಗರಣ ನಡೆದಿಲ್ಲ. ಸುಮಾರು 60 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಪ್ಪಿಕೊಂಡಿದ್ದಾರೆ. ಅಂದರೆ ಆಡಳಿತ ಪಕ್ಷವೇ ಒಂದು ಹಗರಣ ನಡೆದಿದೆ ಎಂದು ಒಪ್ಪಿಕೊಂಡಂತಾಯಿತು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ಆ ಹಗರಣದ ತನಿಖೆ ಕೈ ಬಿಡಲು ಸಾಧ್ಯವೇ? ಅಥವಾ ಆರೋಪಿಗಳ ಮೇಲೆ C-ವರದಿ (closure report) ಹಾಕಲು ಸಾಧ್ಯವೇ?
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ
ಹಾಗೇ ನೋಡಿದರೆ, ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬರುತ್ತಿದೆ. ಮಹಾ ವಿಕಾಸ ಆಘಾಡಿಗೆ ದೊಡ್ಡ ಪೆಟ್ಟು ಬಿದ್ದಿದೆ. ಮುಂಬೈ ಭಾಗದಲ್ಲಿ, ಎಮ್ ವಿ ಎ ಮಾಡಿದ ಆರೋಪಗಳಲ್ಲಿ ಒಂದು ಆರೋಪವನ್ನು ಗಮನಿಸಿ-ಇಡೀ ಮುಂಬೈಯನ್ನು ಅದಾನಿಗೆ ಕೊಡುತ್ತಾರೆ. ಮಹಾಯುತಿ ಅಧಿಕಾರಕ್ಕೆ ಬಂದರೆ ಓರ್ವ ಉದ್ಯಮಪತಿ ಅದಾನಿಯವರದ್ದೇ ಕಾರುಭಾರ ನಡೆಯುತ್ತದೆ ಎಂದು ಚುನಾವಣೆಯಲ್ಲಿ ಆರೋಪ ಮಾಡುತ್ತಲಿದ್ದರು. ರಾಹುಲ್ ಗಾಂಧಿ ಈಗಲೂ ಅದನ್ನೇ ಹೇಳುತ್ತಿದ್ದಾರೆ. ಅದಾನಿ ಕಂಪೆನಿಯು ಧಾರಾವಿ ಪುನರ್ ನಿರ್ಮಾಣ ಕೈಗೆತ್ತಿಕೊಂಡಿದ್ದನ್ನು ಚುನಾವಣಾ ವಿಷಯವನ್ನಾಗಿ ಎಮ್ ವಿ ಎ ನಾಯಕರು ಮಾಡಿದ್ದರು.
ಈಗ ಮಹಾಯುತಿ ಗುಂಪು ಎಮ್ ವಿ ಎ ಯನ್ನು ಧೂಳಿಪಟ ಮಾಡಿದೆ. ಕರ್ನಾಟಕದ ಕಾಂಗ್ರೆಸ್ ನಾಯಕರ ವಾದವನ್ನು ಒಪ್ಪಿದರೆ, ಅದಾನಿ ಮೇಲೆ ಬಂದಿರುವ ಆರೋಪಕ್ಕೆ ಜನ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಗೌತಮ್ ಅದಾನಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಹೇಳಬಹುದೇ? ಅದನ್ನು ಕಾಂಗ್ರೆಸ್ನವರು ಒಪ್ಪಿಕೊಳ್ತಾರಾ?
ಜೈಲಿನಿಂದ ಹೊರಬಂದು ಚುನಾವಣೆ ಎದುರಿಸಿರುವ ಹೇಮಂತ್ ಸೋರೇನ್ ಪಕ್ಷ ಮತ್ತು ಮಿತ್ರ ಪಕ್ಷಗಳು, ಜಾರ್ಖಂಡ್ ನಲ್ಲಿ ಅಭೂಪತಪೂರ್ವ ವಿಜಯ ಸಾಧಿಸಿವೆ. ಹಾಗಂತ ಹೇಮಂತ್ ಸೋರೇನ್ ಮೇಲಿನ ಗಂಭೀರ ಆರೋಪ ಕರಗಿ ಹೋಗುತ್ತದೆಯೇ?
ಭೃಷ್ಠಾಚಾರವನ್ನು ತೀರ ನಗೆಪಾಟಲಿನ ವಿಷಯವನ್ನಾಗಿ ರಾಜಕೀಯ ನಾಯಕರುಗಳು ಮಾಡಿದ್ದಾರೆ. ಅದು ಒಂದು ರಾಜಕೀಯ ಹುನ್ನಾರದ ಭಾಗ. ಹೋದಲ್ಲಿ ಬಂದಲ್ಲಿ, ಭೃಷ್ಠಾಚಾರದ ಬಗ್ಗೆ ಮಾತಾಡಿ, ಜನ ಅದರ ಬಗೆಗಿನ ಗಂಭೀರತೆಯನ್ನು ಕಳೆದುಕೊಂಡು, ಹಗುರವಾಗಿ ತೆಗೆದುಕೊಳ್ಳಬೇಕು ಎಂಬುದು ಅವರ ತಂತ್ರ . ಭೃಷ್ಠಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಯಾಲಯ ಮಾತ್ರ ತೀರ್ಪು ನೀಡಲು ಸಾಧ್ಯವೇ ಹೊರತು ಬೇರೆ ದಾರಿ ಇಲ್ಲ. ‘ನಾವು ನಮ್ಮ ಅಮೂಲ್ಯ ಮತದ ಮೂಲಕ ಭೃಷ್ಠಾಚಾರದ ಆರೋಪಕ್ಕೆ ತೀರ್ಪು ನೀಡಿದ್ದೇವೆ. ನಮ್ಮ ಜಾತಿಯ ನಾಯಕರ ಮೇಲೆ ವಿನಾಕಾರಣ ಆರೋಪ ಮಾಡುವುದು ಸಮಂಜಸ ಅಲ್ಲ. ಭೃಷ್ಠಾಚಾರ ದೊಡ್ಡ ವಿಚಾರ ಅಲ್ಲ. ಎಲ್ಲರೂ ಮಾಡುವುದನ್ನೇ ನಮ್ಮ ಜಾತಿಯ ನಾಯಕರು ಮಾಡಿರಬಹುದು. ತಪ್ಪೇನು?’ ಎಂದು ಜನರೇ ಭೃಷ್ಠಾಚಾರದ ಪರವಾಗಿ ವಾದಿಸಲು ಮುಂದಾದರೇ ಮುಂದೆ ಭಾರೀ ಬೆಲೆ ತೆರಬೇಕಾಗಿ ಬರಬಹುದು. ನಾಯಕರುಗಳ ಭೃಷ್ಠತನ ಸಾಮಾನ್ಯ ಜನರ ಬದುಕಿಗೆ ಅದರಲ್ಲಿಯೂ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ, ಮುಂದೊಂದು ದಿನ ಕೊಳ್ಳಿ ಇಡುವುದರಲ್ಲಿ ಸಂಶಯವಿಲ್ಲ.