ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಹೋದರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಸಹೋದರನ ಸೆಕ್ಸ್ ಸಿಡಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮುಜುಗರವಾಗಿದ್ದು, ಕಾಂಗ್ರೆಸ್​ನ ಜನ ಧ್ವನಿ ಪಾದಯಾತ್ರೆಯಿಂದ ದೂರ ಉಳಿದ್ದಾರೆ. ಉಳಿದ ನಾಲ್ವರು ಕಾರ್ಯಾಧ್ಯಕ್ಷರು ಈ ಪಾದಯಾತ್ರೆಯಲ್ಲಿ ಭಾಗಿಯಾದರೂ ಸತೀಶ್ ಜಾರಕಿಹೊಳಿ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ.

  • TV9 Web Team
  • Published On - 12:48 PM, 3 Mar 2021
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ:  ಸಹೋದರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ

ಬೆಂಗಳೂರು: ‘ನಾನು ಮತ್ತು ರಮೇಶ್ ಬೇರೆಬೇರೆ ಪಕ್ಷದಲ್ಲಿದ್ದೀವಿ. ಸಿಡಿಯಿಂದ ಸಲ್ಪಮಟ್ಟಿಗೆ ಡ್ಯಾಮೇಜ್ ಆಗಿರಬಹುದು. ಇಬ್ಬರಿಗೂ ಕಾಮನ್ ಆಗಿ ಇರುವ ಅಭಿಮಾನಿಗಳಿಗೆ ಹೀಗಾಗಬಾರದಿತ್ತು ಅನ್ನಿಸಿರುತ್ತೆ. ಆದರೆ ಈಗ ಆಗಿಹೋಗಿರುವ ವಿಚಾರ ಇದು. ಏನೂ ಮಾಡಲು ಆಗಲ್ಲ, ಸಹಿಸಿಕೊಳ್ಳಬೇಕಾಗುತ್ತೆ’ ಎಂದು ಕಾಮಕಾಂಡದ ಸಿಡಿ ವಿವಾದದಿಂದ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಮೇಶ್​ ಅವರ ಸ್ಪೀಡ್ ಜಾಸ್ತಿ, ನಾವೂ ಈ ಬಗ್ಗೆ ಸಾಕಷ್ಟು ಸಲ ಹೇಳಿದ್ದೀವಿ. ಅಧಿಕಾರ ಇವತ್ತು ಬರುತ್ತೆ, ನಾಳೆ ಹೋಗುತ್ತೆ. ಆದರೆ ಜನ ಶಾಶ್ವತವಾಗಿ ಇರ್ತಾರೆ. ಪರಸ್ಪರ ಕುಳಿತು ಮಾತನಾಡಿಕೊಳ್ಳಬೇಕು. ಎಲ್ಲರ ಮಾತುಗಳನ್ನೂ ಕೇಳಿಸಿಕೊಳ್ಳಬೇಕು. ನಮ್ಮ ಇತಿಮಿತಿಯಲ್ಲಿ ನಾವು ಇರಬೇಕಾಗುತ್ತೆ’ ಎಂದು ನುಡಿದರು.

‘ನಮ್ಮ ನಡೆನುಡಿಗಳನ್ನು ಬೇರೆಯವರು ನೋಡ್ತಿದ್ದಾರೆ. ಎಷ್ಟೋ ಜನರು ಸಿಡಿ ಬಿಡುಗಡೆ ಮಾಡ್ತೀವಿ ಅಂತ ಹೆದರಿಸ್ತಾ ಇರ್ತಾರೆ. ರಿಲೀಸ್ ಮಾಡಿದಾಗ ಅದರ ಅಸಲಿಯತ್ತು ಗೊತ್ತಾಗುತ್ತೆ. ಬಹಳಷ್ಟು ಸಿಡಿಗಳು ಫೇಕ್ ಇರುತ್ವೆ’ ಎಂದು ಅಭಿಪ್ರಾಯಪಟ್ಟರು.

ಸಹೋದರನ ಸೆಕ್ಸ್ ಸಿಡಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮುಜುಗರ ಅನುಭವಿಸಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್​ನ ಜನ ಧ್ವನಿ ಪಾದಯಾತ್ರೆಯಿಂದ ದೂರ ಉಳಿದ್ದಾರೆ. ಉಳಿದ ನಾಲ್ವರು ಕಾರ್ಯಾಧ್ಯಕ್ಷರು ಈ ಪಾದಯಾತ್ರೆಯಲ್ಲಿ ಭಾಗಿಯಾದರೂ ಸತೀಶ್ ಜಾರಕಿಹೊಳಿ ಮಾತ್ರ ಎಲ್ಲೂ ಕಾಣಿಸಿಕೊಳ್ಳಲಿಲ್ಲ.

ನಕಲಿ ಸಿಡಿ: ಬಾಲಚಂದ್ರ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಅವರ ಮತ್ತೋರ್ವ ಸಹೋದರ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಸಿಡಿ ಫೇಕ್, ಇದೊಂದು ಸೃಷ್ಟಿ ಮಾಡಿರುವಂತಹ ನಕಲಿ ಸಿಡಿಯಾಗಿದೆ. ಸಿಬಿಐ ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದೇನೆ. ರಮೇಶ್ ಜಾರಕಿಹೊಳಿ ತಪ್ಪು ಮಾಡಿದ್ದರೆ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ನೀಡಬೇಕು ಆದರೆ ಅವರು ತಪ್ಪು ಮಾಡಿಲ್ಲ ಹೀಗಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಸಿಡಿ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆಯಾಗಲಿ. ಈ ರೀತಿ ಮಾಡಿದವರ ವಿರುದ್ಧ100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ಹೈಕಮಾಂಡ್ ಭೇಟಿಗಾಗಿ ರಮೇಶ್ ದೆಹಲಿಗೆ ಹೋಗಲ್ಲ. ನಕಲಿ ಸಿಡಿಗಾಗಿ ರಾಜೀನಾಮೆ ಕೊಟ್ಟರೆ ಸಂಪುಟವೇ ಇರುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಏನಾಗಿತ್ತು?

ಮಂಗಳವಾರ (ಮಾರ್ಚ್ 2) ಸಂಜೆ ವೇಳೆಗೆ ಜಲ ಸಂಪನ್ಮೂಲ ಖಾತೆ ಸಚಿವ, ಮೈತ್ರಿ ಸರ್ಕಾರದಲ್ಲಿ ನಡೆದ ಕ್ಷಿಪ್ರಕ್ರಾಂತಿಯ ದಂಡನಾಯಕನಾಗಿದ್ದ, ಬೆಳಗಾವಿಯ ಸಾಹುಕಾರ್ ಎಂದೇ ಪ್ರಸಿದ್ಧಿಯಾಗಿರುವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿ.ಡಿ.ಯಲ್ಲಿ ಸಿಲುಕಿರುವ ವಿಚಾರ ಹೊರ ಬಿದ್ದಿದ್ದು, ಯುವತಿಯೊಬ್ಬಳ ಜತೆ ರಮೇಶ್ ಜಾರಕಿಹೊಳಿ ಇರುವ ಹಸಿಬಿಸಿ ದೃಶ್ಯಗಳ ಸಿ.ಡಿ.ಯೊಂದು ಭಯಾನಕವಾಗೇ ಸ್ಫೋಟಗೊಂಡಿದೆ.

ಸಾಕ್ಷ್ಯ ಚಿತ್ರಕ್ಕೆ ನೆರವು ಕೇಳಿ ಬಂದಿದ್ದ ಯುವತಿಗೆ ಕೆಪಿಟಿಸಿಎಲ್​​ನಲ್ಲಿ ನೌಕರಿ ಕೊಡಿಸುವುದಾಗಿ ಸಚಿವ ರಮೇಶ್ ಜಾರಕಿಹೊಳಿ, ಆಮಿಷವೊಡ್ಡಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಎಂಬುವವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಪೊಲೀಸರಿಗೆ ದೂರನ್ನು ಸಹ ನೀಡಿದ್ದಾರೆ. ಇನ್ನು ದಿನೇಶ್​ ಕಲ್ಲಹಳ್ಳಿ, ರಮೇಶ್​ ಜಾರಕಿಹೊಳಿಯವರ ರಾಸಲೀಲೆ ಬಯಲು ಮಾಡ್ತಿದ್ದಂತೆ, ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಉಂಟಾಗಿದೆ.

ರಮೇಶ್ ಜಾರಕಿಹೊಳಿ ಈ ಮುಜುಗರ ತಪ್ಪಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ ಮತ್ತು ನಿರಂತರವಾಗಿ ವಕೀಲರ ಜತೆ ಚರ್ಚಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ನಕಲಿ ಸಿ.ಡಿ.ಗಾಗಿ ರಾಜೀನಾಮೆ ಕೊಟ್ಟರೆ ಸಂಪುಟವೇ ಇರಲ್ಲ: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ