ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನೇಶ್ ಕಲ್ಲಹಳ್ಳಿ ದೂರು ಆಧರಿಸಿ ಕೇಸ್ ದಾಖಲಿಸದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ಖಾಸಗಿ ದೂರು ಸಲ್ಲಿಸಲಾಗಿದೆ. ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಎಮ್.ಎನ್. ಅನುಚೇತ್, ಇನ್ಸ್ಪೆಕ್ಟರ್ ಮಾರುತಿ ಬಿ ವಿರುದ್ಧ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಕಬ್ಬನ್ಪಾರ್ಕ್ ಪೊಲೀಸರಿಗೆ 8ನೇ ಎಸಿಎಮ್ಎಮ್ ಕೋರ್ಟ್ ಈ ಬಗ್ಗೆ ಆದೇಶ ನೀಡಿದೆ. ಈ ಸಂಬಂಧ, ಆದರ್ಶ್ ಅಯ್ಯರ್ ಖಾಸಗಿ ದೂರು ಸಲ್ಲಿಸಿದ್ದರು. ಕೋರ್ಟ್ ಆದೇಶದ ಬೆನ್ನಲ್ಲೇ ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕಮಲ್ ಪಂತ್, ಎಂ.ಎನ್.ಅನುಚೇತ್, ಮಾರುತಿ ಬಿ ಅರ್ಜಿ ಸಲ್ಲಿಸಿದ್ದರು.
ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಮತ್ತು ಸುಲಿಗೆ ಆರೋಪದ ಪ್ರತಿದೂರು ಕುರಿತ ವರದಿಗಳನ್ನು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಬೆಂಗಳೂರು ಪೊಲೀಸ್ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಈ ಹಿಂದೆ ಸೂಚಿಸಿತ್ತು.
ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಎಸ್‌ಐಟಿ(SIT) ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ದೂರುಗಳ ತನಿಖೆಯ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದಾಗ ಅವುಗಳನ್ನು ಕೆಳ ಅಥವಾ ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಲು ಅನುಮತಿ ಕೋರಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮೇ ಯಿಂದ ಜುಲೈ ವರೆಗೆ ತನಿಖೆಯ ಪ್ರಮುಖ ಭಾಗಕ್ಕೆ ರಜೆಯ ಮೇಲೆ ಎಸ್‌ಐಟಿ ಮುಖ್ಯಸ್ಥರು ಗೈರಾಗಿದ್ದಾರೆ. ಹೀಗಾಗಿ ಈ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡಿತ್ತು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ತನಿಖಾ ವರದಿ ಪರಿಶೀಲಿಸುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಹೈಕೋರ್ಟ್ ಸೂಚನೆ
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು; ಆಪ್ತರ ಆಗ್ರಹ