ಬೆಂಗಳೂರು, ಮಾ.29: ನಗರದ ವೈಟ್ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಮಾ.1 ರಂದು ಸಂಭವಿಸಿದ ಬಾಂಬ್ ಸ್ಫೋಟ (Bomb Blast) ಪ್ರಕರಣ ಸಂಬಂಧ ನಿನ್ನೆಯಷ್ಟೇ ಬಂಧಿತನಾಗಿರುವ ಪ್ರಮುಖ ಆರೋಪಿ ಮುಜಾಮಿಲ್ ಶರೀಫ್ನನ್ನು ಎನ್‌ಐಎ (NIA) ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಜಾಮಿಲ್ ಹಿನ್ನಲೆ ಗಮನಿಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿದೆ.
2019 ರಲ್ಲಿ ಎನ್‌ಐಎ ದಾಳಿ ವೇಳೆ ಪರಾರಿಯಾಗಿದ್ದ ಶಂಕಿತರಾದ ಮುಸಾವೀರ್ ಹಾಗೂ ಅಬ್ದುಲ್ ಮತಿನ್ ತಾಹಾ ಇದುವರೆಗೆ ಪತ್ತೆಯಾಗಿಲ್ಲ. ಈ ಇಬ್ಬರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಪ್ರಮುಖ ಆರೋಪಿಗಳಾಗಿದ್ದಾರೆ. ಮುಸಾವೀರ್ ಸ್ಫೋಟಕ ವಸ್ತು ತಂದಿಟ್ಟರೇ, ಇದಕ್ಕೆಲ್ಲಾ ಸೂತ್ರದಾರನಾದ ಅಬ್ದುಲ್ ಮತೀನ್ ತಾಹ ಎನ್ನುವ ಸ್ಫೋಟಕ ವಿಚಾರ ಬಯಲಾಗಿದೆ. ಸದ್ಯ ಹೊರರಾಜ್ಯದಲ್ಲಿ ತಲೆಮರೆಸಿಕೊಂಡ ಈ ಇಬ್ಬರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಮೂಲತಃ ಕಳಸದವನಾದ ಮುಜಾಮಿಲ್ ಶರೀಫ್ ಕಳೆದ 16 ವರ್ಷದಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದ. ಈತನ ಕುಟುಂಬ ಚಿಕ್ಕಮಗಳೂರಿನ ದುಬೈನಗರದಲ್ಲಿ ವಾಸವಿದೆ. ಕೆಲಸ ಹುಡುಕಿಕೊಂಡು ಬಂದ ಈತ ಕಳೆದ 16 ವರ್ಷಗಳಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಬಸವೇಶ್ವರ ನಗರದ ಚಿಕನ್ ಕೌಂಟಿ ರೆಸ್ಟೋರೆಂಟ್ನಲ್ಲಿ ಮುಜಾಮಿಲ್ ಶರೀಫ್ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದ ಹಿಂದೆ ಬಸವೇಶ್ವರ ನಗರ ಹಾವನೂರು ಸರ್ಕಲ್ ಬಳಿ ಚಿಕನ್ ಕೌಂಟಿ ರೆಸ್ಟೋರೆಂಟ್ ನಡೆಸಲಾಗುತ್ತಿತ್ತು. ಸದ್ಯ ಈ ಜಾಗದಲ್ಲಿ ಬೇರೋಂದು ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಹೊರರಾಜ್ಯಗಳಿಗೆ ಪರಾರಿಯಾಗಿರುವ ಪ್ರಮುಖ ಇಬ್ಬರು ಆರೋಪಿಗಳಿಗೆ ಮುಜಾಮೀಲ್ ಶರೀಫ್ ಲಾಜಿಸ್ಟಿಕ್ ಸಪೋರ್ಟ್ ಮಾಡಿದ್ದ.
ಇದನ್ನೂ ಓದಿ: ರಾಮೇಶ್ವರಂ ಕೆಫ್ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್
ಸದ್ಯ ಈತನನ್ನು ನಿನ್ನೆ ಎನ್‌ಐಎ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಸಾವೀರ್ನ ಜವಾಬ್ದಾರಿಯನ್ನು ಮುಜಾಮಿಲ್ ಹೊತ್ತುಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸ್ಫೋಟಕ್ಕೂ ಮುನ್ನ ಆತನಿಗೆ ಬೇಕಾದ ವಸ್ತುಗಳ ನೀಡಿದ್ದ ಮುಜಾಮಿ, ಸ್ಫೋಟದ ಬಳಿಕ ತೆರಳಲು ಸಾರಿಗೆ ವ್ಯವಸ್ಥೆಯ ಅನುಕೂಲ ಮಾಡಿದ್ದ. ಅಬ್ದುಲ್ ತಾಹ ಅಣತೆಯಂತೆ ಮುಜಾಮಿಲ್ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಿದ್ದ ಎನ್ನುವ ವಿಚಾರ ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಸಮೀಪವೇ ಐಇಡಿಯನ್ನು ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ. ಮತೀನ್ ಹಾಗೂ ಮುಸಾವೀರ್ ಜೊತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದ. ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಸ್ಫೋಟಕ್ಕೆ ಬೇಕಾದ ಕಚ್ಚಾ ಸಮಾಗ್ರಿಗಳನ್ನು ಇಬ್ಬರು ತರಿಸಿಕೊಂಡಿದ್ದರು. ಸ್ಫೋಟದ ಸಂಚಿನ ಟಾರ್ಗೆಟ್ ಬಳಿಕ ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ ಮಾಡಲಾಗಿದೆ ಎನ್ನುವ ವಿಚಾರ ಎನ್ಐಎಗೆ ಮಾಹಿತಿ ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನು ಮಾರ್ಚ್ 3 ರಂದು ಕೈಗೆತ್ತಿಕೊಂಡಿದ್ದ ಎನ್‌ಐಎ, ಸ್ಫೋಟವನ್ನು ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್‌ನನ್ನು ಮೊದಲು ಗುರುತಿಸಿತ್ತು. ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಇಬ್ಬರೂ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಶಂಕಿತ ಉಗ್ರನಿಗೆ ತೀರ್ಥಹಳ್ಳಿಯ ಲಿಂಕ್ ಇದೆ! ಪಿನ್ ಟು ಪಿನ್ ಡೀಟೇಲ್ಸ್ ಇಲ್ಲಿದೆ
ಮೂವರು ಪ್ರಮುಖ ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು. ದಾಳಿ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಶಂಕಿತರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್, ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟಗೊಂಡಿತ್ತು. ಸ್ಫೋಟದಲ್ಲಿ ಹಲವಾರು ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ