Rameshwaram Cafe: ಹೋಟೆಲ್ ಪಕ್ಕದ ರಸ್ತೆ ಬದಿ ಮೂತ್ರ ವಿಸರ್ಜಿಸಿದ ರಾಮೇಶ್ವರಂ ಕೆಫೆ ಸಿಬ್ಬಂದಿ, ಬಿಬಿಎಂಪಿ ನೋಟಿಸ್

|

Updated on: Apr 16, 2024 | 10:36 AM

ಮಾರ್ಚ್​ 1ರಂದು ಸಂಭವಿಸಿದ್ದ ಬಾಂಬ್ ಸ್ಫೋಟದಿಂದ ದೇಶದಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಈಗ ಮತ್ತೆ ಸುದ್ದಿಯಾಗಿದೆ. ಆದರೆ, ಬಾಂಬ್ ಸ್ಫೋಟದ ಕಾರಣಕ್ಕಲ್ಲ. ಬದಲಿಗೆ ಸಿಬ್ಬಂದಿಯೊಬ್ಬರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ. ನಿಜವಾಗಿಯೂ ಕೆಫೆ ಬಳಿ ನಡೆದಿದ್ದೇನು? ಇಲ್ಲಿದೆ ಮಾಹಿತಿ.

Rameshwaram Cafe: ಹೋಟೆಲ್ ಪಕ್ಕದ ರಸ್ತೆ ಬದಿ ಮೂತ್ರ ವಿಸರ್ಜಿಸಿದ ರಾಮೇಶ್ವರಂ ಕೆಫೆ ಸಿಬ್ಬಂದಿ, ಬಿಬಿಎಂಪಿ ನೋಟಿಸ್
ರಾಮೇಶ್ವರಂ ಕೆಫೆ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನ ಜನಪ್ರಿಯ ರಾಮೇಶ್ವರಂ ಕೆಫೆ (Rameshwaram Cafe) ರೆಸ್ಟೊರೆಂಟ್ ಬಳಿ ಕೆಫೆಯ ಸಿಬ್ಬಂದಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿ ಕ್ರಮಕ್ಕೆ ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಕೆಫೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ.

ಇಂದಿರಾನಗರದ ಜನಪ್ರಿಯ ರೆಸ್ಟೋರೆಂಟ್ ಬಳಿಯ ಕ್ರಾಸ್‌ರೋಡ್‌ನಲ್ಲಿ ರೆಸ್ಟೋರೆಂಟ್ ಉದ್ಯೋಗಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದರು. ಈ ಬಗ್ಗೆ ಆರೋಪಿಸಿದ್ದ ಸ್ಥಳೀಯ ನಿವಾಸಿಯೊಬ್ಬರು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಆಧಾರದ ಮೇಲೆ ಬಿಬಿಎಂಪಿ ಕ್ರಮ ಕೈಗೊಂಡಿದೆ.

‘ನಿಮ್ಮ ಸಿಬ್ಬಂದಿ ರೆಸ್ಟೋರೆಂಟ್ ಬಳಿಯ ಕ್ರಾಸ್‌ರೋಡ್‌ನಲ್ಲಿ ಮೂತ್ರ ವಿಸರ್ಜಿಸುತ್ತಾರೆ. ನೀವು ಅವರಿಗೆ ವಿಶ್ರಾಂತಿ ಕೊಠಡಿಗಳನ್ನು ಒದಗಿಸುವುದಿಲ್ಲವೇ? ಮತ್ತು ಅವರು ಕೈ ತೊಳೆಯುತ್ತಾರೆಯೇ ಎಂಬ ಬಗ್ಗೆ ಅನುಮಾನವಿದೆ’ ಎಂದು ಗ್ರಾಹಕರು ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿದ್ದರು. ಅದಕ್ಕೆ ರಾಮೇಶ್ವರಂ ಕೆಫೆ ಮತ್ತು ಬಿಬಿಎಂಪಿಯನ್ನು ಟ್ಯಾಗ್ ಮಾಡಿದ್ದರು.

ಈ ದೂರನ್ನು ಗಮನಿಸಿದ ಬಿಬಿಎಂಪಿ, ರಾಮೇಶ್ವರಂ ಕೆಫೆಗೆ ನೋಟಿಸ್ ಜಾರಿ ಮಾಡಿದೆ. ಆಡಳಿತ ಮಂಡಳಿ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಮಾಡಿಲ್ಲದಿರುವುದರ ಬಗ್ಗೆ ಪ್ರಶ್ನೆ ಮಾಡಿದೆ.

ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ಕೆಫೆ ಆಡಳಿತವು ಲಿಖಿತ ವಿವರಣೆಯೊಂದಿಗೆ ಪ್ರತಿಕ್ರಿಯಿಸಬೇಕು. ವಿಫಲವಾದರೆ ‘ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆ್ಯಕ್ಟ್, 1976’ ರ ಸೆಕ್ಷನ್ 353 ಮತ್ತು 308 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ದರ ದುಪ್ಪಟ್ಟು: ನೀರಿನ ಬಿಕ್ಕಟ್ಟೇ ಕಾರಣ

ಮಾರ್ಚ್ 1 ರಂದು ರೆಸ್ಟೋರೆಂಟ್‌ನ ವೈಟ್‌ಫೀಲ್ಡ್ ಶಾಖೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 10 ಜನರು ಗಾಯಗೊಂಡ ನಂತರ ರಾಮೇಶ್ವರಂ ಕೆಫೆ ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಕಾರಣವಾಯ್ತು ರಾಮಮಂದಿರ ಉದ್ಘಾಟನೆ ವೇಳೆ ನಡೆದಿದ್ದ ಕಾರ್ಯಕ್ರಮ!

ಬಾಂಬ್ ಸ್ಫೊಟ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇತ್ತೀಚೆಗೆ ಕೋಲ್ಕತ್ತಾದಲ್ಲಿ ಬಾಂಬರ್ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:35 am, Tue, 16 April 24