ಬೆಂಗಳೂರು: ನಗರದ ಚಂದ್ರಾಲೇಔಟ್ನ ವಿದ್ಯಾಸಾಗರ ಪಬ್ಲಿಕ್ ಸ್ಕೂಲ್ನಲ್ಲಿ (Vidhyadagar Public School) ನಡೆದ ಪೋಷಕರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಶಾಲೆ ಎದುರು ರಾಷ್ಟ್ರ ರಕ್ಷಣಾ ವೇದಿಕೆ ಪ್ರತಿಭಟನೆಗೆ ಮುಂದಾಗಿದೆ. ಶಿಕ್ಷಕಿ ಶಶಿಕಲಾರನ್ನು ಕೆಲಸದಿಂದ ವಜಾಗೊಳಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶಾಲೆ ಎದುರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾವಣೆ ಆಗಿದ್ದಾರೆ. ಶಿಕ್ಷಕಿ ಶಶಿಕಲಾರನ್ನು ಏಕಾಏಕಿ ಕೆಲಸದಿಂದ ಹೇಗೆ ಕೈಬಿಟ್ರಿ? ವಿವರಣೆ ಪಡೆಯದೆ ಕೆಲಸದಿಂದ ತೆಗೆದಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಏನಾದರೂ ಸಮಸ್ಯೆಯಾಗಿದ್ದರೆ ಅಮಾನತುಗೊಳಿಸಬಹುದಿತ್ತು. ಶಿಕ್ಷಕಿ ಶಶಿಕಲಾಗೆ ನ್ಯಾಯ ಸಿಗುವವರೆಗೂ ಹಿಂದೆ ಸರಿಯಲ್ಲ ಅಂತ ರಾಷ್ಟ್ರ ರಕ್ಷಣಾ ವೇದಿಕೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಹೇಳಿಕೆ ನೀಡಿದ್ದಾರೆ.
ಪ್ರಕರಣ ಏನು?:
ಚಂದ್ರಾ ಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚನೆ ನೀಡಿದ್ದಕ್ಕೆ ಇಂದು ಪೋಷಕರು ಶಿಕ್ಷಕರ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ನಡುವೆ ಬೋರ್ಡ್ ಮೇಲೆ ಹಿಜಾಬ್ ಬಗ್ಗೆ ಅಶ್ಲೀಲವಾಗಿ ಬರೆದಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ ಅವರನ್ನು ಶಾಲಾ ಆಡಳಿತ ಮಂಡಳಿ ವಜಾಗೊಳಿಸಿತ್ತು.
ತನಿಖೆ ವೇಳೆ ಮಾಹಿತಿ ಬಹಿರಂಗ:
ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದೆ. ಶಿಕ್ಷಕಿ ಪಾಠ ಮಾಡುವಾಗ ಮಕ್ಕಳು ಗಲಾಟೆ ಮಾಡಿದ್ದಾರೆ. ಈ ವೇಳೆ ಬೋರ್ಡ್ ಮೇಲೆ KLS ಎಂದು ಶಿಕ್ಷಕಿ ಬರೆದಿದ್ದಾರೆ. ಇದರ ಅರ್ಥ ಹೇಳಿ ಎಂದು ಶಿಕ್ಷಕಿ ಶಶಿಕಲಾ ಪ್ರಶ್ನಿಸಿದ್ದಾರೆ. ಆಗ ವಿದ್ಯಾರ್ಥಿಗಳು ಬೈಗುಳದ ನಾನಾ ಅರ್ಥ ಹೇಳಿದ್ದಾರೆ. ಗಲಾಟೆ ಮಾಡುತ್ತಿದ್ದವರ ಹೆಸರು ಬರೆದಿರುವುದಾಗಿ ಶಿಕ್ಷಕಿ ಹೇಳಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಶಿಕ್ಷಕಿ ಅವಾಚ್ಯ ಶಬ್ದ ಬಳಸಿದ್ದಾರೆಂಬ ಆರೋಪ ಮಾಡಿದ್ದರು. ಆದರೆ ಶಾಲೆಯಲ್ಲಿ ಹಿಜಾಬ್ ವಿಚಾರಕ್ಕೆ ಬೈದಿಲ್ಲ ಅಂತ ಶಿಕ್ಷಕಿ ಶಶಿಕಲಾ ತಿಳಿಸಿದ್ದಾರೆ. ಸದ್ಯ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ.
ವಿದ್ಯಾಸಾಗರ ಶಾಲೆಯಲ್ಲಿ ಗೊಂದಲದ ವಾತಾವರಣವಿತ್ತು. ಹೀಗಾಗಿ ವಿದ್ಯಾಸಾಗರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪೋಷಕರು ಆರೋಪಿಸಿದ ಶಿಕ್ಷಕಿ ಜತೆ ಚರ್ಚೆ ಮಾಡಿದ್ದೇನೆ. ಕೇವಲ ಪಾಠವನ್ನು ಮಾತ್ರ ಮಾಡಿದ್ದೇನೆಂದು ಹೇಳಿದ್ದಾರೆ. ಯಾವುದೇ ಕೋರ್ಟ್ ವಿಚಾರ ಚರ್ಚಿಸಿಲ್ಲವೆಂದು ತಿಳಿಸಿದ್ದಾರೆ. ಸದರಿ ಶಿಕ್ಷಕಿ ಸ್ಪಷ್ಟನೆ ನೀಡಿದ್ದಾರೆ ಎಂದು ಡಿಡಿಪಿಐ ಬೈಲಾಂಜನಪ್ಪ ಹೇಳಿದ್ದಾರೆ.
ಇದನ್ನೂ ಓದಿ
ಛತ್ತೀಸ್ಗಢದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ; ಸಿಆರ್ಪಿಎಫ್ ಅಧಿಕಾರಿ ಹುತಾತ್ಮ, ಇನ್ನೋರ್ವ ಯೋಧನ ಸ್ಥಿತಿ ಗಂಭೀರ
‘ಪುನೀತ್ ಸರ್ ಫೋಟೋ ಹಾಕಿಲ್ಲ, ತುಂಬ ಬೇಜಾರಾಯ್ತು’: ತಮ್ಮದೇ ಚಿತ್ರತಂಡದ ವಿರುದ್ಧ ವಿನೋದ್ ಪ್ರಭಾಕರ್ ಗರಂ
Published On - 4:06 pm, Sat, 12 February 22