
ಬೆಂಗಳೂರು, ಜ.26: ಬೆಂಗಳೂರು ಮತ್ತು ಮುಂಬೈನಂತಹ ಮಹಾ ನಗರಗಳಲ್ಲಿ ಇತ್ತೀಚೆಗೆ ‘ರೆಸ್ಟೋರೆಂಟ್ ಡೇಟಿಂಗ್ ಸ್ಕ್ಯಾಮ್’ (Restaurant Dating Scam) ಎಂಬ ವಂಚನೆ ಜಾಲ ಭಾರಿ ಸದ್ದು ಮಾಡುತ್ತಿದೆ. ಒಂದು ಸಾಮಾನ್ಯ ಡೇಟ್‌ನಲ್ಲಿ ನೀವು ಕೇವಲ 2,000 ರೂ. ಖರ್ಚು ಮಾಡಬೇಕಾದ ಜಾಗದಲ್ಲಿ 20,000 ರೂ. ರಿಂದ 50,000 ರೂ. ವರೆಗೆ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಬರಬಹುದು. ಈ ವಂಚನೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡರೆ ಖಂಡಿತ ಅಚ್ಚರಿಪಡುವುದು ನಿಜ. ವಂಚಕರು (ಸಾಮಾನ್ಯವಾಗಿ ಯುವತಿಯರು) ಟಿಂಡರ್, ಬಂಬಲ್ ಅಥವಾ ಹಿಂಜ್ ನಂತಹ ಆಪ್‌ಗಳಲ್ಲಿ ಆಕರ್ಷಕ ಪ್ರೊಫೈಲ್ ಸೃಷ್ಟಿಸಿ ಪುರುಷರನ್ನು ಸಂಪರ್ಕಿಸುತ್ತಾರೆ. ಮಾತುಕತೆ ಶುರುವಾದ ಸ್ವಲ್ಪ ಸಮಯದಲ್ಲೇ ಅವರು ಭೇಟಿಯಾಗಲು ಒತ್ತಾಯಿಸುತ್ತಾರೆ. ವಿಶೇಷವೆಂದರೆ, ಅವರು ತಮಗೆ ಮೊದಲೇ ಪರಿಚಯವಿರುವ ಅಥವಾ ನಗರದ ಯಾವುದೋ ಒಂದು ಮೂಲೆಯಲ್ಲಿರುವ ನಿರ್ದಿಷ್ಟ ಕೆಫೆ ಅಥವಾ ಬಾರ್‌ಗೆ ಬರುವಂತೆ ನಿಮ್ಮನ್ನು ಒಪ್ಪಿಸುತ್ತಾರೆ.
ನೀವು ಅಲ್ಲಿಗೆ ಬಂದ ಕೂಡಲೇ, ಅವರು ಮೆನುವಿನಲ್ಲಿರುವ ಅತ್ಯಂತ ದುಬಾರಿ ವೈನ್, ಹುಕ್ಕಾ ಅಥವಾ ಆಹಾರ ಪದಾರ್ಥಗಳನ್ನು ಸಾರಾಸಗಟಾಗಿ ಆರ್ಡರ್ ಮಾಡುತ್ತಾರೆ. ಕೆಲವೊಮ್ಮೆ ಮೆನುವಿನಲ್ಲಿ ಬೆಲೆಗಳೇ ಇರುವುದಿಲ್ಲ. ಆಹಾರ ಸೇವಿಸಿದ ತಕ್ಷಣ ಅಥವಾ ಬಿಲ್ ಬರುವ ಮುನ್ನವೇ ಅವರಿಗೆ “ತುರ್ತು ಕರೆ ಬಂದಿದೆ” ಅಥವಾ “ಮನೆಯಲ್ಲಿ ಏನೋ ಸಮಸ್ಯೆಯಾಗಿದೆ” ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ನಂತರ ನಿಮ್ಮ ಕೈ ಸೇರುವ ಬಿಲ್ ನೋಡಿ ನೀವು ಬೆಚ್ಚಿಬೀಳುತ್ತೀರಿ. ಸಾಮಾನ್ಯ ಕೆಫೆಯಲ್ಲಿ 20,000 ರೂ. ಬಿಲ್ ಬಂದಿರುತ್ತದೆ. ಒಂದು ವೇಳೆ ಇದನ್ನು ನೀವು ಇದನ್ನು ಪ್ರಶ್ನಿಸಿದರೆ, ರೆಸ್ಟೋರೆಂಟ್‌ನ ಬೌನ್ಸರ್‌ಗಳು ಅಥವಾ ಮ್ಯಾನೇಜರ್ ನಿಮ್ಮನ್ನು ಸುತ್ತುವರಿದು ಹಣ ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ.
ಇದನ್ನೂ ಓದಿ: “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ
ಎಂ.ಜಿ. ರಸ್ತೆ ಮತ್ತು ಕೋರಮಂಗಲದ ಕೆಲವು ಕೆಫೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿಗೆ ಕೇವಲ ಒಂದು ಗಂಟೆಯ ಡೇಟ್‌ನಲ್ಲಿ 40,000 ರೂ. ಬಿಲ್ ನೀಡಲಾಗಿತ್ತು. ಅಂಧೇರಿ ಮತ್ತು ಬಾಂದ್ರಾ ಭಾಗದ ಕೆಲವು ಸಣ್ಣ ಕ್ಲಬ್‌ಗಳಲ್ಲಿ ಈ ದಂಧೆ ಹೆಚ್ಚಾಗಿದೆ. ಇನ್ನು ಈ ದಂಧೆಗಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ವಂಚಕ ಯುವತಿಯರು ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಂ.ಜಿ. ರೋಡ್ನಲ್ಲಿ ಇಂತಹ ದಂಧೆ ಹೆಚ್ಚಾಗಿದೆ. ಬೆಂಗಳೂರು ಪೊಲೀಸರು ಇತ್ತೀಚೆಗೆ ಇಂತಹ ಹತ್ತಾರು ಜಾಲಗಳನ್ನು ಪತ್ತೆಹಚ್ಚಿ ರೆಸ್ಟೋರೆಂಟ್ ಮ್ಯಾನೇಜರ್‌ಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ