ಜೈಲುಗಳ ಕಮಾಂಡ್ ಸೆಂಟರ್‌ಗೆ ಚಾಲನೆ: ಅನೈತಿಕ ಚಟುವಟಿಕೆಗಳಿಗೆ ಇನ್ನಾದ್ರೂ ಬೀಳುತ್ತಾ ಬ್ರೇಕ್?
ಗೃಹಸಚಿವ ಜಿ. ಪರಮೇಶ್ವರ್ ಅವರು ಜೈಲುಗಳ ಕಮಾಂಡ್ ಸೆಂಟರ್ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಾದ ಡ್ರಗ್ಸ್, ಲಿಕ್ಕರ್ ಸಪ್ಲೈ ತಡೆಗಟ್ಟಲು ಈ ಕೇಂದ್ರ ಸಹಕಾರಿಯಾಗಲಿದೆ. ಎಡಿಜಿಪಿ ಹಿತೇಂದ್ರ ನೇತೃತ್ವದ ಸಮಿತಿಯ ವರದಿ ಆಧರಿಸಿ ಸ್ಥಾಪಿಸಲಾದ ಈ ಸೆಂಟರ್ 24/7 ಕಣ್ಗಾವಲು ಇಡಲು ಸಹಾಯ ಮಾಡಲಿದೆ.
ಬೆಂಗಳೂರು, ಜನವರಿ 31: ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗೃಹಸಚಿವ ಜಿ. ಪರಮೇಶ್ವರ್ ಅವರು ನೂತನ ಕಮಾಂಡ್ ಸೆಂಟರ್ ಉದ್ಘಾಟಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ವಿವಿಧ ಜೈಲುಗಳಲ್ಲಿ ಡ್ರಗ್ಸ್ ಸಪ್ಲೈ, ಲಿಕ್ಕರ್ ತಯಾರಿಕೆ, ಅಕ್ರಮ ಬರ್ತಡೇ ಆಚರಣೆಗಳಂತಹ ಘಟನೆಗಳು ವರದಿಯಾಗಿದ್ದವು. ಇದು ಕಾರಾಗೃಹ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹಿತೇಂದ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಜೈಲುಗಳಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಅವುಗಳನ್ನು ಪರಿಹರಿಸಲು ವರದಿಯನ್ನು ಸಲ್ಲಿಸಿತ್ತು. ವರದಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ತಂತ್ರಜ್ಞಾನವನ್ನು ಬಳಸಿ ಜೈಲುಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವ ಸಲಹೆಯಂತೆ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಸದ್ಯ 8 ಕೇಂದ್ರ ಜೈಲುಗಳು ಮತ್ತು 4 ಜಿಲ್ಲಾ ಜೈಲುಗಳನ್ನು ಈ ಕಮಾಂಡ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಮಟ್ಟದ ಜೈಲುಗಳನ್ನು ಸಹ ಇದೇ ರೀತಿಯಲ್ಲಿ ಸಂಪರ್ಕಿಸಲಾಗುವುದು. 24/7 ಕಣ್ಗಾವಲಿಗಾಗಿ 1076 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಸೂಕ್ಷ್ಮ ಘಟನೆಗಳನ್ನು ಸಹ ಪತ್ತೆ ಹಚ್ಚುವ ಸಾಮರ್ಥ್ಯ ಈ ಕೇಂದ್ರಕ್ಕಿದೆ. ಇದು ಜೈಲುಗಳಲ್ಲಿನ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸಿಬ್ಬಂದಿಯಲ್ಲಿ ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
