ಬೆಂಗಳೂರು: ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್ ಬ್ಯಾಂಕ್ ಒಳಗೆ ನುಗ್ಗಿ ಪತ್ನಿ ಮತ್ತು ಮಗಳ ಎದುರಿಗೇ ರೌಡಿಶೀಟರ್ ಜೋಸೆಫ್ ಅಲಿಯಾಸ್ ಬಬ್ಲಿನನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಕೋರಮಂಗಲ ಠಾಣೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೇಗೂರು ಕೆರೆ ಬಳಿ ಆರೋಪಿಗಳಾದ ರವಿ ಮತ್ತು ಪ್ರದೀಪ್ ಅಲಿಯಾಸ್ ಚೊಟ್ಟೆ ಎಂಬಬ್ಬರನ್ನು ಬಂಧಿಸಿದ್ದಾರೆ.
ಇಂದು ಮುಂಜಾನೆ ನಡೆದಿರುವ ಶೂಟೌಟ್:
ಮೊನ್ನೆ ಮಧ್ಯಾಹ್ನ (ಜುಲೈ 19) ಬ್ಯಾಂಕ್ ಒಳಗೆ ನುಗ್ಗಿ ಬಬ್ಲಿನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಸಾಯಿಸಿದ್ದರು. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‌ಗಳಲ್ಲಿ ಬಂದಿದ್ದ 8 ಜನರ ತಂಡ ಹತ್ಯೆಗೈದಿತ್ತು. ಕೋರಮಂಗಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪಾತಕಿಗಳು ಎಸ್ಐ ಸಿದ್ದಪ್ಪ, ಎಎಸ್ಐ ರವೀಂದ್ರ ಮೇಲೆ ಹಲ್ಲೆ ನಡೆಸಿ, ಪರಾರಿಗೆ ಯತ್ನಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರು ವಾರ್ನ್ ಮಾಡಿದ್ದರು. ಆದಾದ ಮೇಲೆ ಕಾಲಿಗೆ ಗುಂಡಿಕ್ಕಿ, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸುಳಿವು ಸಿಕ್ಕಿದ್ದು ಹೇಗೆ?
ಬಂಧಿತ ಪ್ರದೀಪ್ ಅಲಿಯಾಸ್ ಚೊಟ್ಟೆ ಜೈಲಿನಲ್ಲಿರುವ ರೌಡಿಶೀಟರ್ ಶಿವು ಶಿಷ್ಯ. ಈ ಹಿಂದೆ ಶಿವು ಮೇಲೆ ಬಬ್ಲಿ ದಾಳಿ ನಡೆಸಿದ್ದ. ಇದೇ ಕಾರಣಕ್ಕೆ ಬಬ್ಲಿ ವಿರುದ್ಧ ದ್ವೇಷ ಸಾಧಿಸಿದ್ದ. ಶಿವು ಸದ್ಯ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾನೆ. ನಿನ್ನೆ ಶಿವನ ವಿಚಾರಣೆ ನಡೆಸಿದ್ದ ಪೊಲೀಸರು ಆ ವೇಳೆ ಆರೋಪಿಗಳ ಮಾಹಿತಿ ಪಡೆದಿದ್ದರು. ಪೊಲೀಸರು ಇಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕೆಲ ತಿಂಗಳಿಂದ ಕೊಲೆ ಪ್ರಕರಣಗಳು ಜಾಸ್ತಿಯಾಗಿದೆ: ಕ್ರಮ ಕೈಗೊಳ್ಳುತ್ತೇವೆ- ಪೊಲೀಸ್ ಆಯುಕ್ತ ಮುರುಗನ್
ಪ್ರದೀಪ್ ಮತ್ತು ರವಿ ಆರೋಪಿಗಳನ್ನ ಬಂಧಿಸಲು ತೆರಳಿದಾಗ ಅಟ್ಯಾಕ್ ಮಾಡೋಕೆ ಮುಂದಾಗಿದ್ದಾರೆ. ಬ್ಯಾಂಕ್ ಒಳಗೆ ನುಗ್ಗಿ ಬರ್ಬರ ಹತ್ಯೆ ಮಾಡಿದ್ದ ಆರೋಪಿಗಳು ಇವರು. ಬಹಳ ಭೀಕರವಾದ ನಡೆದಿರುವ ಘಟನೆ ಇದು. ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಮಾಡಿದ್ದೇವೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ.
ಕಳೆದ ಕೆಲ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಕೊಲೆ, ರಾಬರಿ, ಡಕಾಯಿತಿ ಕೇಸ್ ಕಡಿಮೆ ಆಗಿದೆ. ಕಳೆದ ತಿಂಗಳಿನಿಂದ ಕೊಲೆ ಪ್ರಕರಣ ಜಾಸ್ತಿಯಾಗಿದೆ. ಎಲ್ಲಾ ಪ್ರಕರಣದಲ್ಲೂ 24 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ್ದೇವೆ. ಮರ್ಡರ್ ಎಲ್ಲವೂ ಬೇರೆ ಬೇರೆ ವಿಚಾರಕ್ಕೆ ಕೊಲೆ ಆಗಿದೆ. ಯಾವುದಕ್ಕೂ ಲಿಂಕ್ ಇಲ್ಲ. ಎಲ್ಲವೂ ಬೇರೆ ಬೇರೆ ಕೊಲೆ ಪ್ರಕರಣಗಳಾಗಿವೆ. ಸದ್ಯ ಈ ಬಗ್ಗೆಯೂ ತನಿಖೆ ನಡೆಸಿ ಉಳಿದ ಆರೋಪಿಗಳನ್ನ ಬಂಧಿಸುತ್ತೇವೆ ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹೇಳಿದ್ದಾರೆ.
ಹತ್ತು ರೌಡಿಗಳು ಅಂದರ್:
ಕೋರಮಂಗಲ ಬ್ಯಾಂಕ್ ನಲ್ಲಿ ರೌಡಿಶೀಟರ್ ಬಬ್ಲಿ ಹತ್ಯೆ ಹಿನ್ನೆಲೆಯಲ್ಲಿ ಆಡುಗೋಡಿ ಠಾಣಾ ವ್ಯಾಪ್ತಿಯ 10 ರೌಡಿಶೀಟರ್ಗಳನ್ನು ಬಂಧಿಸಲಾಗಿದೆ. ಕುಖ್ಯಾತ ರೌಡಿಶೀಟರ್ ಮೂವೀಸ್ ಸೇರಿದಂತೆ 10 ಜನರ ಬಂಧನವಾಗಿದೆ. ಮೊನ್ನೆ ಹತ್ಯೆಗೀಡಾದ ಆಡುಗೋಡಿ ಠಾಣಾ ವ್ಯಾಪ್ತಿಯ ರೌಡೀಶೀಟರ್ ಬಬ್ಲಿ ಹತ್ಯೆಗೆ ಪ್ರತಿಯಾಗಿ ಮತ್ತೆ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಆಡುಗೋಡಿ ವ್ಯಾಪ್ತಿಯ 10 ರೌಡಿಶೀಟರ್ಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಯಾರಿವನು ಬಬ್ಲಿ?
ಕಂಟ್ರ್ಯಾಕ್ಟರ್ ಕೆಲಸ ಮಾಡುತ್ತಿದ್ದ ಬಬ್ಲಿ, 2011 ರವರೆಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬಳಿಕ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ ಎಂದು ಹತ್ಯೆ ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದರು.
ಹೆಂಡತಿ ಮತ್ತು ಮಗಳ ಜೊತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್ ಕೋರಮಂಗಲದಲ್ಲಿ ಬರ್ಬರ ಹತ್ಯೆ
(Rowdy sheeter babli murder case koramangala police open fire arrest two in bengaluru)
Published On - 9:02 am, Wed, 21 July 21