ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ (Bengaluru Traffic Fines) ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸುವವರಿಗೆ ಶೇ. 50 ವಿನಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಸಲು ವೀಕೆಂಡ್ನಲ್ಲೂ ಮುಗಿಬಿದ್ದಿದ್ದಾರೆ. ಹೌದು.. ಮೂರನೇ ದಿನವಾದ ಇಂದು(ಫೆಬ್ರವರಿ 05) ಕೋಟಿಗಟ್ಟಲೆ ಹಣ ಸಂಗ್ರಹವಾಗಿದೆ. ಫೆ. 3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಇನ್ನು ಎರಡನೇ ದಿನ (ಫೆಬ್ರವರಿ 04) ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಮೂರನೇ ದಿನವಾದ ಇಂದು(ಫೆಬ್ರವರಿ) ಕೂಡ ಭಾನುವಾರ ಎಂದು ಲೆಕ್ಕಿಸದೇ ವಾಹನ ಸವಾರರು ಬಂದು ದಂಡದ ಹಣ ಪಾವತಿಸಿದ್ದಾರೆ. ಇದರಿಂದ ಭಾನುವಾರ 6,31,77,750 ರೂ. (6 ಕೋಟಿ 31 ಲಕ್ಷ 77 ಸಾವಿರದ 750 ರೂಪಾಯಿ) ಕಲೆಕ್ಷನ್ ಆಗಿದೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1032 ಪ್ರಕರಣಗಳಲ್ಲಿ18,81,300 ರೂ. ದಂಡ ಸಂಗ್ರಹವಾಗಿದೆ. ಹೀಗೆ ಬೇರೆ-ಬೇರೆ ಠಾಣೆಗಳಲ್ಲಿ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದಿದ್ದಾರೆ.
ಪೇಟಿಯಂ ಮೂಲಕ ಪಾವತಿ 3 ಕೋಟಿ 79 ಲಕ್ಷ 95 ಸಾವಿರ 900 ರೂ. ಜಮೆ ಆಗಿದ್ದರೆ, PDA ಮೂಲಕ 1 ಕೋಟಿ 97 ಲಕ್ಷ 56 ಸಾವಿರ 950 ರೂ.ಮೊತ್ತ ಜಮ ಆಗಿದೆ. ಬೆಂಗಳೂರು ಒನ್ ಮೂಲಕ 51 ಲಕ್ಷ 60 ಸಾವಿರ 550 ರೂ. ಸಂಗ್ರಹವಾಗಿದೆ. TMC ಮೂಲಕ 2 ಲಕ್ಷ 64 ಸಾವಿರ 350 ರೂ. ಹರಿದುಬಂದಿದೆ. ಇದರೊಂದಿಗೆ ಮೂರು ದಿನದಲ್ಲಿ ಒಟ್ಟು 22 ಕೋಟಿ 32 ಲಕ್ಷ 47 ಸಾವಿರದ 491 ರೂ. ದಂಡದ ಹಣ ಹರಿದುಬಂದಿದೆ. ಇನ್ನು ಈವರೆಗೆ 7 ಲಕ್ಷ 41 ಸಾವಿರದ 48 ನಿಯಮ ಉಲ್ಲಂಘನೆ ಕೇಸ್ ಕ್ಲಿಯರ್ ಆಗಿವೆ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಗೆ ವಿನಾಯಿತಿ ನೀಡುವಂತೆ ಚರ್ಚೆ ನಡೆಸಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಅನುಮತಿ ನೀಡಿದ್ದರು. ಇದರ ಮೇರೆಗೆ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಶೇ.50 ವಿನಾಯಿತಿ ನೀಡಿದೆ.
ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ. ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.