ಬೆಂಗಳೂರು: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​

ಕಾನೂನು ಸುವ್ಯವಸ್ಥೆ ಕಾಪಾಡುವುದು, ಜನರ ರಕ್ಷಣೆ, ಅಪರಾಧ ಪ್ರಕರಣಗಳನ್ನು ತಡೆಯುವುದು, ಪತ್ತೆಹಚ್ಚುವಿಕೆ ಪೊಲೀಸರ ಕರ್ತವ್ಯ. ಆದರೆ, ಅಪರಾಧ ತಡೆಯಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾವಹಿಸುತ್ತಿರುವುದು ಕಂಡುಬಂದಿದೆ. ಪ್ರಮುಖವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪೊಲೀಸರು ಸಾಲು ಸಾಲು ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದು, ಅವರ ಮೇಲಿದ್ದ ನಂಬಿಕೆ ಕ್ಷೀಣಿಸುವಂತೆ ಮಾಡಿದೆ. ಅದರಂತೆ ಮತ್ತೋರ್ವ ಪೊಲೀಸಪ್ಪ, ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​
Yamuna Nayak
Edited By:

Updated on: Jan 24, 2026 | 4:01 PM

ಬೆಂಗಳೂರು, (ಜನವರಿ 24): ಪೊಲೀಸ್ ಕಾನ್ಸ್​​​​ಟೇಬಲ್​​ (Police Constable)  ಕಾಲೇಜು ವಿದ್ಯಾರ್ಥಿನಿಗೆ (College Student) ಲೈಂಗಿಕ ಕಿರುಕುಳ ನೀಡಿದ ಆರೋಪ ಬೆಳಕಿಗೆ ಬಂದಿದೆ. ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್​​​ನಲ್ಲಿ ಕರ್ತವ್ಯದಲ್ಲಿದ್ದ ವೇಳೆ R.T.ನಗರ ಠಾಣೆಯ ಕಾನ್ಸ್​​ಟೇಬಲ್ ಯಮುನಾ ನಾಯಕ್ ಎನ್ನುವಾತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು, ಯಮುನಾ ನಾಯಕ್ ನನ್ನು ಬಂಧಿಸಿದ್ದಾರೆ.

ಫ್ರೀಡಂಪಾರ್ಕ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ವೇಳೆ ಯಮುನಾ ನಾಯಕ್, ಪ್ರಥಮ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ವಿದ್ಯಾರ್ಥಿನಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಅರೋಪಿ ಪೇದೆ ಯಮುನಾ ನಾಯಕ್​​ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಕ್ಷಿಪ್ರವಾಗಿ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಆದ್ರೆ, ಈಗ ಪರಿಸ್ಥಿತಿ ಬದಲಾಗಿದ್ದು, ಪೊಲೀಸರೇ ಕೋರ್ಟ್​​ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಭೂ ಮಾಫೀಯಾ,  ಲಂಚ, ಹೀಗೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ತೊಡಗಿಸಿಕೊಂಡು ಆರೋಪಿಗಳಾಗುವ ಸ್ಥಾನದಲ್ಲಿ ನಿಲ್ಲುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ.

ಅದರಲ್ಲೂ ಇತ್ತೀಚಗೆ ಬೆಂಗಳೂರಿನಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡುವ ಸಾಕಷ್ಟು ಪ್ರಕರಣಗಳು ಬಹಿರಂಗವಾಗಿದ್ದು, ಈ ಸಂಬಂಧ ಅನೇಕ ಪೊಲೀಸ್ ಪೇದೆಗಳು, ಇನ್ಸ್​​ಪೆಕ್ಟರ್​​ಗಳು ಕೆಲಸದಿಂದ ಅಮಾನತುಗೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪೊಲೀಸರೇ ಅನ್ಯಾಯದ ಹಾದಿಯಲ್ಲಿ ನಡೆಯುತ್ತಿರುವಾಗ ನ್ಯಾಯ ಎಲ್ಲಿದೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ