ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿ; ಸಂಗಮದಲ್ಲಿ ಕಾಲ್ನಡಿಗೆಗೆ ಶಿವಣ್ಣನಿಂದ ಚಾಲನೆ

| Updated By: ganapathi bhat

Updated on: Jan 08, 2022 | 7:01 PM

Shivarajkumar: ಕಾಂಗ್ರೆಸ್​ ನಾಯಕರ ಜತೆ ಶಿವಣ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ. ಪಕ್ಷಾತೀತ ಹೋರಾಟವೆಂದು ಸಂದೇಶ ನೀಡಲು ಕಾಂಗ್ರೆಸ್ ಪ್ರಯತ್ನ ಮಾಡುವಂತೆ ಕಂಡುಬಂದಿದೆ. ಡಾ. ರಾಜ್​ ಕುಟುಂಬದ ಮೂಲಕ ಸಂದೇಶ ನೀಡಲು ಯತ್ನ ನಡೆಸಲಾಗಿದೆ.

ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್​ಕುಮಾರ್ ಭಾಗಿ; ಸಂಗಮದಲ್ಲಿ ಕಾಲ್ನಡಿಗೆಗೆ ಶಿವಣ್ಣನಿಂದ ಚಾಲನೆ
ಶಿವರಾಜ್​ಕುಮಾರ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಸ್ಯಾಂಡಲ್​​ವುಡ್ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಭಾಗಿಯಾಗಲಿದ್ದಾರೆ. ಭಾನುವಾರದಿಂದ (ಜನವರಿ 9) ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆಯನ್ನು ನಟ ಶಿವರಾಜ್​ಕುಮಾರ್​ ಉದ್ಘಾಟಿಸಲಿದ್ದಾರೆ. ನಾಳೆ ಬೆಳಗ್ಗೆ ಮೇಕೆದಾಟುವಿನ ಸಂಗಮದಿಂದ ಪಾದಯಾತ್ರೆ ಶುರು ಆಗಲಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭವಾಗಲಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಪಾದಯಾತ್ರೆಯಲ್ಲಿ ಭಾಗಿ ಆಗಲಿದ್ದಾರೆ. ಕಾಂಗ್ರೆಸ್​ ನಾಯಕರ ಜತೆ ಶಿವಣ್ಣ ವೇದಿಕೆ ಹಂಚಿಕೊಳ್ಳಲಿದ್ದಾರೆ. ಪಕ್ಷಾತೀತ ಹೋರಾಟವೆಂದು ಸಂದೇಶ ನೀಡಲು ಕಾಂಗ್ರೆಸ್ ಪ್ರಯತ್ನ ಮಾಡುವಂತೆ ಕಂಡುಬಂದಿದೆ. ಡಾ. ರಾಜ್​ ಕುಟುಂಬದ ಮೂಲಕ ಸಂದೇಶ ನೀಡಲು ಯತ್ನ ನಡೆಸಲಾಗಿದೆ.

ಈ ಹಿಂದೆ ಗೋಕಾಕ್​ ಚಳವಳಿಯಲ್ಲಿ ಡಾ.ರಾಜ್​ಕುಮಾರ್ ಭಾಗಿಯಾಗಿದ್ದರು. ಕರ್ನಾಟಕ ರಾಜ್ಯದ ಜನರನ್ನು ವರನಟ ಡಾ.ರಾಜ್​ಕುಮಾರ್​ ಬಡಿದೆಬ್ಬಿಸಿದ್ದರು. ಈಗ ಮೇಕೆದಾಟು ಹೋರಾಟಕ್ಕೆ ಶಿವಣ್ಣ ಚಾಲನೆ ನೀಡಲಿದ್ದಾರೆ. ನಟ ಶಿವರಾಜ್​ಕುಮಾರ್​ಗೆ ಡಿ.ಕೆ. ಶಿವಕುಮಾರ್ ಅಧಿಕೃತ ಆಹ್ವಾನ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ವಾನ ಒಪ್ಪಿರುವ ಶಿವಣ್ಣ, ನಾಳೆ ಬೆಳಗ್ಗೆ 7.30ಕ್ಕೆ ಕನಕಪುರದ ಡಿಕೆಶಿ ನಿವಾಸಕ್ಕೆ ಆಗಮಿಸಲಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ಜತೆ ಸಂಗಮಕ್ಕೆ ತೆರಳಲಿರುವ ನಟ ಶಿವಣ್ಣ, ಸಂಗಮದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಮೇಕೆದಾಟು ಪಾದಯಾತ್ರೆಗೆ ಭರ್ಜರಿ ತಯಾರಿ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಬಗ್ಗೆ ಕನಕಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಸಲಾಗಿದೆ. ರಾಮನಗರ ಜಿಲ್ಲೆ ಕನಕಪುರ ಪಟ್ಟಣದ ಡಿಕೆಶಿ ನಿವಾಸದಲ್ಲಿ ಸಭೆ ನಡೆಸಲಾಗಿದೆ. ನಾಳೆಯ ಹೋರಾಟದ ರೂಪರೇಷೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ರಾಲಿಗೆ ಅವಕಾಶ ನೀಡದಿದ್ರೆ ಪ್ಲ್ಯಾನ್ ಬಿ ಕುರಿತು ಮಾತುಕತೆ ನಡೆಸಲಾಗಿದೆ. ಹೇಗೆ ಪಾದಯಾತ್ರೆ ಮಾಡಬೇಕು ಎಂದು ಸಮಾಲೋಚಿಸಲಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಸೇರಿ ಹಲವರು ಭಾಗಿ ಆಗಿದ್ದಾರೆ.

ಮೇಕೆದಾಟು ಹೋರಾಟಕ್ಕೆ ಹೊರಟ ದಾವಣಗೆರೆ ರೈತರು ರೈಲಿನಲ್ಲಿ ರಾಮನಗರಕ್ಕೆ ತೆರಳಿದ್ದಾರೆ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ಶಿವಗಂಗಾ ನೇತೃತ್ವದಲ್ಲಿ ರೈತರು ತೆರಳಿದ್ದಾರೆ. ವಾಹನಗಳಿಗೆ ನಿರ್ಬಂಧ ಹಿನ್ನೆಲೆ ರೈಲಿನಲ್ಲಿ ಪ್ರಯಾಣಿಸಿದ ರೈತರು ಅಜ್ಮೀರ್ ಎಕ್ಸಪ್ರೆಸ್ ರೈಲಿನಲ್ಲಿ 200 ಕ್ಕೂ ಅಧಿಕ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದಾರೆ. ನಾಳೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಸಂಗಮದಿಂದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆಗೆ ವಿರೋಧವೇಕೆ?; ಕಾವೇರಿ ಜಲ ವಿವಾದದ ಪೂರ್ತಿ ಮಾಹಿತಿ ಇಲ್ಲಿದೆ

ಇದನ್ನೂ ಓದಿ: Mekedatu Project: ಮೇಕೆದಾಟು ಪಾದಯಾತ್ರೆ; ಕಾಂಗ್ರೆಸ್​ ಹೋರಾಟ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ

Published On - 7:00 pm, Sat, 8 January 22