
ಬೆಂಗಳೂರು, ಜನವರಿ 15: ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸ್ವಾಗತ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿ ಅಳವಡಿಸಿದ್ದ ಬ್ಯಾನರ್ ಹೊತ್ತಿ ಉರಿದಿರುವಂತಹ (Fire Breaks Out) ಘಟನೆ ನಗರದ ಚಿಕ್ಕಪೇಟೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿಗಳು ಕೂಡಲೇ ಬೆಂಕಿ ನಂದಿಸಿದ್ದು, ಅದೃಷ್ಟಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಸಂಕ್ರಾಂತಿ ಹಬ್ಬದ ಹಿನ್ನೆಲೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದ್ದರು. ಸ್ಥಳೀಯರು ಪಟಾಕಿ ಹಚ್ಚುವ ಮೂಲಕ ಸ್ವಾಗತ ಕೋರಿದ್ದಾರೆ. ಈ ವೇಳೆ ಪಟಾಕಿ ಕಿಡಿ ಬ್ಯಾನರ್ಗೆ ತಗುಲಿ ಹೊತ್ತಿ ಉರಿದಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ. ಕೆಆರ್ ಮಾರ್ಕೆಟ್ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಇನ್ನು ಘಟನೆ ಬಗ್ಗೆ ಕಾರ್ಯಕ್ರಮದ ಆಯೋಜಕ ರಾಘವ್ ಪ್ರತಿಕ್ರಿಯಿಸಿದ್ದು, ಕಾಶಿ ವಿಶ್ವನಾಥ ದೇವಸ್ಥಾನದ ರಸ್ತೆ ಉದ್ಘಾಟನೆ ಮತ್ತು ಸಂಕ್ರಾಂತಿ ಹಬ್ಬ ಹಿನ್ನೆಲೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇಂದು ಸಂಜೆ 6.30ರ ಸುಮಾರಿಗೆ ಸಚಿವ ದಿನೇಶ್ ಗುಂಡೂರಾವ್ ಸಾಹೇಬರು ಬಂದಿದ್ದರು. ಅವರು ಬಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೋದರು. ಎಲ್ಲಾ ಸರಿಯಾಗಿ ನಡೆದಿದೆ. ಘಟನೆ ವೇಳೆ ಅಂತಹದ್ದೇನು ಆಗಿಲ್ಲ. ಈಗ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಬೇಗೂರಿನ ಅಕ್ಷಯನಗರದ ಸ್ಕ್ರಾಪ್ ಗೋಡೌನ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಹಳೆಯ ಪ್ಲಾಸ್ಟಿಕ್ ವಸ್ತುಗಳು ಧಗ ಧಗನೇ ಹೊತ್ತಿ ಉರಿದಿದ್ದು, ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸಲಾಗಿದೆ. ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಹರಡಿತ್ತು.
ಇದನ್ನೂ ಓದಿ: ಬೆಂಗಳೂರು: ಅಕ್ಷಯನಗರ ಸ್ಕ್ರಾಪ್ ಗೋಡೌನ್ನಲ್ಲಿ ಭಾರಿ ಅಗ್ನಿ ಅವಘಡ
ತಡರಾತ್ರಿ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಿಲಿಂಡರ್ ಬ್ಲಾಸ್ಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಸಿಲಿಂಡರ್ಗಳು ಪತ್ತೆ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲ ದಿನಗಳ ಹಿಂದೆ ಇಲ್ಲಿ ನೆಲೆಸಿದ್ದ ಶಂಕಿತ ಬಾಂಗ್ಲಾ ವಲಸಿಗರ ತೆರವು ಮಾಡಲಾಗಿತ್ತು. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 pm, Thu, 15 January 26