ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಮಾರಾಮಾರಿ: ಕಲ್ಲು ತೂರಾಟ, ಮನೆ ಧ್ವಂಸ
ಬೆಳಗಾವಿ ಜಿಲ್ಲೆಯ ದೇಶನೂರು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ವಿಚಾರಕ್ಕೆ ಮಾರಾಮಾರಿ ನಡೆದಿದೆ. ಸರ್ಕಾರಿ ಜಾಗದಲ್ಲಿ ಭವನ ನಿರ್ಮಿಸಲು ಮುಂದಾದಾಗ ಜಾಗದ ವಿವಾದದ ಕಾರಣಕ್ಕೆ ಕಲ್ಲು ತೂರಾಟ, ಮನೆ ಧ್ವಂಸ ಮತ್ತು ಹಲ್ಲೆ ನಡೆದಿದೆ. ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ದೊಡ್ಡ ಅನಾಹುತ ತಪ್ಪಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ದೂರು ಪ್ರತಿದೂರು ದಾಖಲಾಗಿವೆ.

ಬೆಳಗಾವಿ, ಜನವರಿ 15: ಸರ್ಕಾರಿ ಜಾಗದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದಿದೆ. ಘಟನೆ ವೇಳೆ ಕಲ್ಲು ತೂರಾಟ ಕೂಡ ನಡೆದಿದ್ದು, ಸಮಯಕ್ಕೆ ಸರಿಯಾಗಿ ಪೊಲೀಸರ ಮಧ್ಯ ಪ್ರವೆಶದಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆ ಸಂಬಂಧ ದೂರು ಮತ್ತು ಪ್ರತಿದೂರುಗಳು ದಾಖಲಾಗಿವೆ.
ವಾಲ್ಮೀಕಿ ಭವನ ನಿರ್ಮಾಣ ಸಂಬಂಧ ಸರ್ವೇ ಕಾರ್ಯಕ್ಕೆ ಬಂದ ವೇಳೆ ಎಸ್ಸಿ ಅವರ ಮನೆ ಬಳಿ ಇವೆಲ್ಲ ಯಾಕೆ ಎಂದು ಗ್ರಾಮದ ಸದಾಶಿವ ಭಜಂತ್ರಿ ಕುಟುಂಬ ತಕರಾರು ತೆಗೆದಿದೆ. ಇದೇ ವಿಚಾರಕ್ಕೆ ವಾಗ್ವಾದ ಕೂಡ ಆರಂಭವಾಗಿದ್ದು, ಆರಂಭದಲ್ಲಿ ಭಜಂತ್ರಿ ಕುಟುಂಬದವರು ಎಸ್ಟಿ ಸಮುದಾಯದವರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಸಮುದಾಯದ ಜನರು ಗುಂಪು ಕಟ್ಟಿಕೊಂಡು ಬಂದು ಸದಾಶಿವ ಭಜಂತ್ರಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಅಡಗಿ ಕುಳಿತರೂ ಬಿಡದೆ ಮನೆ ಮೇಲೆ ಕಲ್ಲು ತೂರಿ, ಕಟ್ಟಿಗೆಯಿಂದ ಬಾಗಿಲಿಗೆ ಹೊಡೆದು ಅವುಗಳನ್ನು ಮುರಿದ್ದಾರೆ. ಈ ವೇಳೆ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಮಹಿಳೆಯರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಕೂಡ ಹಾಕಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ತರಕಾರಿ ಮಾರಿ ಪ್ರಭುಲಿಂಗ ದೇವರಿಗೆ 16 ಲಕ್ಷ ರೂ. ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಅಣ್ಣನ ಮಕ್ಕಳಿಂದಲೇ ಬರ್ಬರ ಹತ್ಯೆ
ಅಷ್ಟಕ್ಕೂ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗ ಭಜಂತ್ರಿ ಕುಟುಂಬಕ್ಕೆ ಸೇರಿದ್ದಲ್ಲ. ಸರ್ಕಾರಿ ಗೈರಾಣು ಜಾಗದಲ್ಲಿ ಕಾಮಗಾರಿ ನಡೆಸಲು ಮುಂದಾಗಿದ್ದರೂ ವಿರೋಧ ಮಾಡ್ತಿರೋದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಬಂದ ನೇಸರಗಿ ಠಾಣೆ ಪೊಲೀಸರು ಹೆಚ್ಚಿನ ಅನಾಹುತ ತಡೆಯುವಲ್ಲಿ ಸಫಲರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಸ್ಪಿ ಕೆ. ರಾಮರಾಜನ್ ಕೂಡ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದ್ದಾರೆ.
ಇನ್ನು ಗಲಾಟೆ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಎರಡು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಪೊಲೀಸರ ಸಮ್ಮುಖದಲ್ಲೇ ಉದ್ರಿಕ್ತರು ಸದಾಶಿವ ಭಜಂತ್ರಿ ವಿರುದ್ದ ಕ್ರಮ ಆಗಬೇಕು ಅಂತಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಕಡೆಯಿಂದ ದೂರು ಪ್ರತಿ ದೂರು ದಾಖಲಾಗಿದ್ದು, ಗಲಾಟೆಯ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ. ಗ್ರಾಮದ ಸ್ಥಿತಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.