ಬೆಂಗಳೂರು (ಡಿಸೆಂಬರ್ 28): ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಿನ್ನೆ (ಡಿಸೆಂಬರ್ 27) ಬೆಂಗಳೂರಿನಲ್ಲಿ ರಸ್ತೆಗಳಿದು ಪ್ರತಿಭಟನೆ ಮಾಡಿದ್ದು, ಈ ಸಂಬಂಧ ನಾರಾಯಣಗೌಡ ಸೇರಿದಂತೆ ಕೆಲ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರಿಂದ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ಇದರ ಬೆನ್ನಲ್ಲೇ ಇದೀಗ ಇದೇ ತಿಂಗಳು ಡಿಸೆಂಬರ್ 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿಗೆ ಕರೆ ನೀಡಲಾಗಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದೇ ತಿಂಗಳು 30ರ ಶನಿವಾರದಂದು ಬೆಳಗ್ಗೆ 11:30 ಗಂಟೆಗೆ ಕನ್ನಡ ಒಕ್ಕೂಟದಿಂದ ನೇತೃತ್ವದಲ್ಲಿ ಕನ್ನಡ ಉಳಿಸಿ, ಕನ್ನಡ ಬೆಳೆಸಿ ಚಳವಳಿ ನಡೆಸಲಾಗುವುದು ಎಂದು ಹೇಳಿದರು. ಅಲ್ಲದೇ ಸರ್ಕಾರಕ್ಕೆ ಪ್ರಮುಖ ಒತ್ತಾಯಗಳನ್ನು ಮಾಡಲು ತೀರ್ಮಾನಿಸಿವೆ.
ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್, ಹಾಗೂ ಹೆಚ್.ವಿ. ಗಿರೀಶ್ ಗೌಡ ಹಾಗೂ ಅನೇಕ ಕನ್ನಡಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
Published On - 6:57 pm, Thu, 28 December 23