ಬಿಜೆಪಿ ಸಭೆಯ ಹೈಲೇಟ್ಸ್: ಯತ್ನಾಳ್ಗೆ ಮೂಗುದಾರ ಹಾಕಲು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನ
ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ತಂಡಕ್ಕೆ ಹಿರಿಯ ನಾಯಕರು ಒಂದಷ್ಟು ಸಲಹೆ ಸೂಚನೆಗಳ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೇ ಈ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ಗೆ ಮೂಗುದಾರ ಹಾಕಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾದ್ರೆ, ಏನದು ತೀರ್ಮಾನ? ಸಭೆ ಹೈಲೇಟ್ಸ್ ಇಲ್ಲಿದೆ.
ಬೆಂಗಳೂರು, (ಡಿಸೆಂಬರ್ 28): ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಬಿಜೆಪಿ ಸಿದ್ಧತೆ ಆರಂಭಿಸಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ನಿನ್ನೆ(ಡಿಸೆಂಬರ್ 27) ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 28) ವಿಜಯೇಂದ್ರ ನೇತೃತ್ವದ ಹಿರಿಯ ಬಿಜೆಪಿ ನಾಯಕರ ಸಭೆ ನಡೆದಿದ್ದು, ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಚರ್ಚೆಗಳು ನಡೆದಿವೆ. ಅಲ್ಲದೇ ಈ ಸಭೆಯಲ್ಲೂ ಸಹ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಗ್ಗೆ ಪ್ರಸ್ತಾಪವಾಗಿದ್ದು, ಯತ್ನಾಳ್ ಹೇಳಿಕೆಗಳಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮೊರೆ ಹೋಗುವುದು ಒಳಿತು ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.
ಯತ್ನಾಳ್ ಬಗ್ಗೆ ಪ್ರಸ್ತಾಪಿಸಿದ ಡಿವಿಎಸ್
ಯಡಿಯೂರಪ್ಪ ಕಾಲದಲ್ಲಿ ಕೋವಿಡ್ ಅಕ್ರಮ ನಡೆದಿದೆ ಎಂದ ಶಾಸಕ ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ (High Command) ದೂರು ಕೊಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರ ಪ್ರಸ್ತಾಪ ಮಾಡಿದ ಸಂಸದ ಡಿವಿ ಸದಾನಂದ ಗೌಡ, ವರಿಷ್ಠರು ಯತ್ನಾಳ್ ಅವರನ್ನು ಕರೆದು ಮಾತನಾಡಬೇಕು. ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪದೇಪದೇ ಮಾತನಾಡುವುದು ಇತ್ಯರ್ಥ ಆಗಬೇಕು ಎಂದು ಒತ್ತಾಯಿಸಿದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಇಲ್ಲವೇ ಬಹಿರಂಗ ಹೇಳಿಕೆಗೆ ಫುಲ್ ಸ್ಟಾಪ್ ಹಾಕಿಸಬೇಕು. ವರಿಷ್ಠರ ಗಮನಕ್ಕೆ ಇದನ್ನು ತಂದು ವರಿಷ್ಠರೇ ಕರೆದು ಮಾತನಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಹೇಳಿದರು. ಇದಕ್ಕೆ ಇನ್ನಷ್ಟು ನಾಯಕರು ಧ್ವನಿಗೂಡಿಸಿದರು.
ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ತೀರ್ಮಾನ
ಶಾಸಕ ಯತ್ನಾಳ್ ಹೇಳಿಕೆ ಪಕ್ಷದ ಇಮೇಜ್‌ಗೆ ಭಾರೀ ಧಕ್ಕೆ ತಂದಿದೆ. ಪಕ್ಷದ ನಾಯಕರನ್ನು, ಹಿಂದಿನ ಬಿಜೆಪಿ ಸರ್ಕಾರಕ್ಕೆ ಯತ್ನಾಳ್ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ಗೆ ಪಕ್ಷ ಆಹಾರ ಆಗುವಂತೆ ಮಾಡಿದ್ದಾರೆ ಎಂದು ಸಭೆಯಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಹಿರಿಯರು ಚರ್ಚೆ ನಡೆಸಿದರು. ಯತ್ನಾಳ್ ಹೇಳಿಕೆಗಳಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮೊರೆ ಹೋಗುವುದು ಒಳಿತು ಎನ್ನುವ ತೀರ್ಮಾನಕ್ಕೆ ಬರಲಾಯಿತು. ಶಿಸ್ತುಕ್ರಮ ಕೈಗೊಳ್ಳುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಯತ್ನಾಳ್ ಇನ್ನು ಮುಂದೆ ಆ ರೀತಿಯ ಹೇಳಿಕೆಗಳನ್ನು ಕೊಡದಂತೆ ಹೈಕಮಾಂಡ್ ಕ್ರಮವಹಿಸಲಿ ಎಂಬ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯ್ತು. ಶಾಸಕ ಯತ್ನಾಳ್ ಹೇಳಿಕೆ ಸಭೆಯಲ್ಲಿದ್ದ ಡಿವಿಎಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಖಂಡನೆ ವ್ಯಕ್ತಪಡಿಸಿದರು. ಸಭೆಯಲ್ಲಿ ಸದಸ್ಯರ ಚರ್ಚೆ, ಅಭಿಪ್ರಾಯಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದರು.
ವಿಜಯೇಂದ್ರ ನೇತೃತ್ವದ ತಂಡ ಹಿರಿಯರಿಂದ ಒಂದಿಷ್ಟು ಸಲಹೆ ಸೂಚನೆ
ಇನ್ನು ಸಭೆಯಲ್ಲಿ ವಿಜಯೇಂದ್ರ ನೇತೃತ್ವದ ತಂಡಕ್ಕೆ ಹಿರಿಯ ನಾಯಕರು ಒಂದಷ್ಟು ಸಲಹೆ ಸೂಚನೆಗಳ ಮೂಲಕ ಮಾರ್ಗದರ್ಶನ ನೀಡಿದರು. ಹೊಂದಾಣಿಕೆ, ಸಮನ್ವಯತೆ, ಪರಸ್ಪರರ ಸಹಕಾರ ತತ್ವದಡಿ ಒಗ್ಗಟ್ಟಿನಿಂದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ವಿಜಯೇಂದ್ರಗೆ ಹಿರಿಯ ನಾಯಕರು ಕಿವಿ ಮಾತು ಹೇಳಿದ್ದಾರೆ.
ಹಿರಿಯರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಸಂಸದ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಚಿವ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ, ಮಾಜಿ ಸ್ಪೀಕರ್ ಕಾಗೇರಿ, ಮಾಜಿ ಸಚಿವ ಸಿಟಿ ರವಿ, ಶಾಸಕ ಅಶ್ವಥ್ ನಾರಾಯಣ್ ಮೊದಲಾದ ಹಿರಿಯರು ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಹೊಸ ತಂಡಕ್ಕೆ ಕೆಲ ಸಲಹೆ ಸೂಚನೆಗಳನ್ನು ನೀಡಿ ಉತ್ಸಾಹ ತುಂಬಿದರು. ಇನ್ನು ಸಭೆಯಲ್ಲಿ ಚುನಾವಣಾ ತಂತ್ರಗಾರಿಕೆ, ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಪರಿಣಾಮಕಾರಿ ಹೋರಾಟ, ರಾಜ್ಯ ಪ್ರವಾಸ, ಪಕ್ಷ ಸಂಘಟನೆ, ಆಂತರಿಕ ಸಂಘರ್ಷಕ್ಕೆ ತೆರೆ ಎಳೆಯುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿಗೆ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷವಾಗಿ ಕಾಡುತ್ತಿದ್ದು, ನಾಯಕರಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಇದೀಗ ಎಲ್ಲಾ ನಾಯಕರು ಹೈಕಮಾಂಡ್ ಗಮನಕ್ಕೆ ತರುವ ಬಗ್ಗೆ ಚರ್ಚಿಸಿದ್ದು, ಯತ್ನಾಳ್ ಮಾತಿಗೆ ಹೈಕಮಾಂಡ್ ಬ್ರೇಕ್ ಹಾಕುತ್ತಾ ಎನ್ನುವುದು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Thu, 28 December 23