ಬೆಂಗಳೂರು, ನವೆಂಬರ್ 27: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದೆ. ದೇವಯ್ಯ ಪಾರ್ಕ್ ಬಳಿ ಇರುವ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ, ವಯ್ಯಾಲಿಕಾವಲ್ನಲ್ಲಿರುವ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ನಿವಾಸದ ಮೇಲೆ ಲೋಕಾಯುಕ್ತ (Lokayukta) ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆಸುತ್ತಿದೆ.
ಬಿಬಿಎಂಪಿ ಪಶ್ಚಿಮ ವಲಯದ ಕಲ್ಯಾಣ ವಿಭಾಗದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಫಲಾನುಭವಿಗಳ ಹಣವನ್ನು ಅಕ್ರಮವಾಗಿ ಸೊಸೈಟಿಗಳಿಗೆ ವರ್ಗಾಯಿಸಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್ ವೈ ನಾಯಕ್ ನೇತೃತ್ವದಲ್ಲಿ ಎಂಟು ತಂಡಗಳು ಬೆಳಗ್ಗೆ 6.30ರ ಸುಮಾರಿಗೆ ಏಕಕಾಲಕ್ಕೆ ದಾಳಿ ಮಾಡಿವೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಉದ್ಯಮಿಗಳು, ಬಿಲ್ಡರ್ಗಳಿಗೆ ಐಟಿ ಶಾಕ್: ದಾಳಿ
ಲೋಕಾಯುಕ್ತ ಅಧಿಕಾರಿಗಳು ತುಮಕೂರು ಜಿಲ್ಲೆ ಆರ್ಟಿಒ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ತುಮಕೂರು, ಮಧುಗಿರಿ, ತಿಪಟೂರು ಆರ್ಟಿಒ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ಟಿಒ ಕಚೇರಿಗಳಲ್ಲಿ ಬ್ರೋಕರ್ಗಳ ಹಾವಳಿ ಬಗ್ಗೆ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ದಾಳಿ ನಡೆದಿದೆ.
ಒಂದು ವಾರದ ಹಿಂದೆಯಷ್ಟೇ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ಏಳು ಕಡೆಗಳಲ್ಲಿ ದಾಳಿ ಮಾಡಿದ್ದರು. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಮನೆ ಮೇಲೆ ದಾಳಿ ಮಾಡಿದ್ದರು. ಕೃಷ್ಣವೇಣಿ ಮಂಗಳೂರಿಗೆ ವರ್ಗವಾಗಿದ್ದು, ಅಲ್ಲಿಯೂ ಅವರ ಮನೆ ಮೇಲೆ ದಾಳಿ ನಡೆದಿತ್ತು. ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿತ್ತು.
ಬೆಂಗಳೂರಿನಲ್ಲಿ ಟೌನ್ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಎಸ್ಪಿ ಮೋಹನ್ ಮನೆ ಮೇಲೆಯೂ ರೇಡ್ ಮಾಡಲಾಗಿತ್ತು. ಕಾವೇರಿ ನೀರಾವರಿ ನಿಗಮ ಎಂಡಿ ಮಹೇಶ್, ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿತ್ತು.
ವರದಿ: ಪ್ರದೀಪ್
Published On - 12:16 pm, Wed, 27 November 24