ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಫ್ಲೂ, ವೈರಲ್ ಸೋಂಕು: ಮಾಸ್ಕ್ ಧರಿಸುವುದೂ ಸೇರಿ ತಜ್ಞ ವೈದ್ಯರು ನೀಡಿದ ಸಲಹೆಗಳು ಇಲ್ಲಿವೆ ನೋಡಿ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಚಳಿ ಮತ್ತು ಶೀತ ಹವೆಯಿಂದಾಗಿ ವೈರಲ್ ಜ್ವರ ಮತ್ತು ಉಸಿರಾಟದ ಸೋಂಕುಗಳ ಪ್ರಕರಣಗಳು ಹೆಚ್ಚಾಗಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆಗಳನ್ನು ಮತ್ತೆ ಅನುಸರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳು ಹಾಗೂ ಅಸ್ತಮಾ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ತಜ್ಞ ವೈದ್ಯರು ನೀಡಿರುವ ಸಲಹೆ, ಸೂಚನೆಗಳು ಇಲ್ಲಿವೆ.
ಬೆಂಗಳೂರು, ನವೆಂಬರ್ 27: ಚಂಡಮಾರುತ ಪ್ರಭಾವದ ಮಳೆ ಹಾಗೂ ಬದಲಾದ ಸನ್ನಿವೇಶದಲ್ಲಿ ಬೆಂಗಳೂರು ನಗರದಲ್ಲಿ ತಾಪಮಾನ ತೀವ್ರವಾಗಿ ಕುಸಿಯುತ್ತಿದೆ. ಇದರೊಂದಿಗೇ, ನಗರದಾದ್ಯಂತ ವೈರಲ್ ಜ್ವರ, ಫ್ಲೂ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ನಗರದ ಆಸ್ಪತ್ರೆಗಳಲ್ಲಿ ಜ್ವರ, ಉಸಿರಾಟದ ಸೋಂಕುಗಳು ಮತ್ತು ಇನ್‌ಫ್ಲುಯೆಂಜಾ ಚಿಕಿತ್ಸೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಫ್ಲೂ ಪ್ರಕರಣಗಳು ಮತ್ತು ಇತರ ವೈರಲ್ ಉಸಿರಾಟದ ಸೋಂಕುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗಳ ಪಲ್ಮನರಿ ಮೆಡಿಸಿನ್ ಸಲಹೆಗಾರ ಡಾ ಶೀತಲ್ ಚೌರಾಸಿಯಾ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕೋವಿಡ್ ಸಂದರ್ಭದ ಮುನ್ನೆಚ್ಚರಿಕೆ ಪಾಲಿಸಲು ಮನವಿ
ಬೆಂಗಳೂರಿನಲ್ಲಿ ವೈರಲ್ ಸೋಂಕು, ಉಸಿರಾಟದ ಸೋಂಕು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಅನೇಕ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗಗಳು ಪ್ರತಿ ದಿನ ರಷ್ ಆಗಿರುತ್ತವೆ. ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ಪಾಲಿಸುತ್ತಿದ್ದ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಅಸ್ತಮಾ, ಅಲರ್ಜಿ ಇರುವವರು ಹೆಚ್ಚು ಮುನ್ನೆಚ್ಚರಿಕೆ ವಹಿಸಿ
ಚಳಿಯ ವಾತಾವರಣದಿಂದಾಗಿ ವೈರಲ್ ಸೋಂಕು ಪ್ರಕರಣಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆಸ್ತಮಾ ಅಥವಾ ಅಲರ್ಜಿ ಹೊಂದಿರುವ ವ್ಯಕ್ತಿಗಳಲ್ಲಿ ರೋಗಲಕ್ಷಣಗಳು ತೀವ್ರವಾಗಿರಲಿವೆ. ಹೀಗಾಗಿ ಇಂಥ ಸಮಸ್ಯೆ ಇರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರು, ಆರೋಗ್ಯ ತಜ್ಞರು ಕಿವಿಮಾತು ಹೇಳಿದ್ದಾರೆ.
ಆರಂಭಿಕ ಅನಾರೋಗ್ಯದ ನಂತರ ರೋಗಿಗಳ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುವುದರಿಂದ ವೈರಸ್-ನಂತರದ ಬ್ಯಾಕ್ಟೀರಿಯಾದ ಸೋಂಕುಗಳು ಉಂಟಾಗಬಹುದು. ಇದರಿಂದಾಗಿ ಹೆಚ್ಚಿನ ಚಿಕಿತ್ಸೆ ಮತ್ತು ದೀರ್ಘಕಾಲದ ಆಸ್ಪತ್ರೆಯಲ್ಲಿ ಉಳಿಯುವ ಅಗತ್ಯ ಸೃಷ್ಟಿಯಾಬಹುದು ಎಂದು ವರದಿ ಉಲ್ಲೇಖಿಸಿದೆ.
ಮಕ್ಕಳಿಗೆ ಹೆಚ್ಚಿನ ಅಪಾಯ
ಚಳಿಗಾಲದ ಈ ಋತುವಿನಲ್ಲಿ ವಿಶೇಷವಾಗಿ ಮಕ್ಕಳು ಹೆಚ್ಚು ದುರ್ಬಲರಾಗಿರುತ್ತಾರೆ. ಹೀಗಾಗಿ ಅವರಿಗೆ ಸೋಂಕುಗಳು ತಗಲುವ ಸಾಧ್ಯತೆ ಹೆಚ್ಚು ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ (ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್) ಡಾ. ಪರಿಮಳ ವಿ ತಿರುಮಲೇಶ್ ಹೇಳಿದ್ದಾರೆ. ಶೀತ, ಶುಷ್ಕ ಗಾಳಿ ಮತ್ತು ಹೆಚ್ಚಿದ ಒಳಾಂಗಣ ಚಟುವಟಿಕೆಗಳು ಇನ್‌ಫ್ಲುಯೆಂಜಾ ಮತ್ತು ಇತರ ಉಸಿರಾಟದ ಸೋಂಕುಗಳು ಹರಡಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹೆಚ್ಚಿನ ಅಪಾಯವಿದೆ ಎಂದು ಅವರು ಹೇಳಿದ್ದಾರೆ.
ಉಸಿರಾಟ ಸಂಬಂಧಿ ಸೋಂಕು ಪ್ರಕರಣ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಉಸಿರಾಟ ಸಂಬಂಧಿತ ಸೋಂಕು ಪ್ರಕರಣಗಳಲ್ಲಿ ಶೇ 20 ರಷ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವವರಲ್ಲಿ ಶೇ 70 ಕ್ಕಿಂತ ಹೆಚ್ಚು ಪ್ರಕರಣಗಳು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ, ಮೈಕೊರೆಯುವ ಮಾಗಿಯ ಚಳಿ
ಸೋಂಕುಗಳನ್ನು ತಡೆಯಲು ಏನೇನು ಮುನ್ನೆಚ್ಚರಿಕೆ ವಹಿಸಬೇಕು?
- ಶುಚಿತ್ವ ಕಾಪಾಡಿ ಮತ್ತು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತೆಗೆದುಕೊಂಡ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ.
- ಕಿಕ್ಕಿರಿದ ಜನಸಂದಣಿ ಇರುವ ಅಥವಾ ಕಳಪೆ ಗಾಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ.
- ಆಗಾಗ್ಗೆ ಬಿಸಿ ನೀರು ಕುಡಿಯುತ್ತಿರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಿ.
- ಸಮಯೋಚಿತ ವೈದ್ಯಕೀಯ ಆರೈಕೆಯನ್ನು ಪಡೆಯಿರಿ ಮತ್ತು ರೋಗಲಕ್ಷಣಗಳು ಉಲ್ಬಣಗೊಂಡರೆ ಅಥವಾ ಮುಂದುವರಿದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.
- ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
- ಅನಾರೋಗ್ಯದ ಸಂದರ್ಭದಲ್ಲಿ ಜನಸಂದಣಿಯಲ್ಲಿ ಬೆರೆಯದಿರಿ.
- ಸೋಂಕು ತಗುಲಿದಲ್ಲಿ ಔಷಧ, ಚಿಕಿತ್ಸೆ ಜತೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಅತಿಯಾದ ಕೆಲಸವನ್ನು ತಪ್ಪಿಸಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Wed, 27 November 24